ಲಾರ್ಡ್ಸ್: ಕ್ರಿಕೆಟ್ ವಿಶ್ವಕಪ್ ಕೂಟದ ಫೈನಲ್ ಪಂದ್ಯಕ್ಕೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣ ಸಜ್ಜಾಗಿದ್ದು, ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದೆ. ಅಂತಿಮ ಹಣಾಗಣಿಯಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
ಉಭಯ ತಂಡಗಳು ಸೆಮಿ ಫೈನಲ್ ಆಡಿದ್ದ ತಂಡವನ್ನೇ ಈ ಮಹತ್ವದ ಪಂದ್ಯಕ್ಕೂ ಕಣಕ್ಕಿಳಿಸಿದೆ. ಲಾರ್ಡ್ಸ್ ಮೈದಾನದಲ್ಲಿ ನಿನ್ನೆ ರಾತ್ರಿ ಮಳೆ ಸುರಿದಿದ್ದ ಕಾರಣ ಇಂದು ಟಾಸ್ 15 ನಿಮಿಷ ತಡವಾಗಿ ನಡೆಯಿತು.
ಮೊದಲ ಬಾರಿಗೆ ಕ್ರಿಕೆಟ್ ನ ಅತ್ಯುನ್ನತ ಕಪ್ ತಮ್ಮದಾಗಿಸುವ ಅಭಿಲಾಷೆಯೊಂದಿಗೆ ಉಭಯ ತಂಡಗಳು ಕಣಕ್ಕಿಳಿದಿದ್ದು, ವಿಜಯಮಾಲೆ ಯಾರ ಕೊರಳಿಗೆ ಬೀಳುವುದು ಎಂಬ ಕಾತರ ಕ್ರೀಡಾಭಿಮಾನಿಗಳಲ್ಲಿ ಹೆಚ್ಚಾಗಿದೆ.
ಕ್ರಿಕೆಟ್ ಜನಕ ಇಂಗ್ಲೆಂಡ್ ಗೆ ಇದು ನಾಲ್ಕನೇ ವಿಶ್ವಕಪ್ ಫೈನಲ್ ಇದಾಗಿದ್ದು, 1979, 1987, 1992ರಲ್ಲಿ ಆಂಗ್ಲರು ವಿಶ್ವಕಪ್ ಅಂತಿಮ ಸುತ್ತಿಗೆ ಪ್ರವೇಶಿಸಿದ್ದರು. 2015ರಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶ ಮಾಡಿದ್ದ ಕಿವೀಸ್ ಮತ್ತೆ ಅಂತಿಮ ಸುತ್ತಿಗೆಗೆ ತೇರ್ಗಡೆಯಾಗಿದ್ದು, ಪ್ರಶಸ್ತಿ ಎತ್ತುವ ಕನಸು ಕಾಣುತ್ತಿದೆ.
ಸೆಮಿ ಫೈನಲ್ ಹಣಾಹಣಿಯಲ್ಲಿ ಭಾರತವನ್ನು ಮಣಿಸಿ ನ್ಯೂಜಿಲ್ಯಾಂಡ್ ಅಂತಿಮ ಸುತ್ತಿಗೇರಿದ್ದರೆ, ಹಾಲಿ ಚಾಂಪಿಯನ್ ಆಸೀಸ್ ಅನ್ನು ಮಣಿಸಿ ಆತಿಥೇಯ ಇಂಗ್ಲೆಂಡ್ ಫೈನಲ್ ಗೇರಿತ್ತು.
ತಂಡಗಳು
ಇಂಗ್ಲೆಂಡ್: ಜೇಸನ್ ರಾಯ್, ಜಾನಿ ಬೆರಿಸ್ಟೋ, ಜೋ ರೂಟ್, ಇಯಾನ್ ಮಾರ್ಗನ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಕ್ರಿಸ್ ವೋಕ್ಸ್, ಲಿಯಾಮ್ ಪ್ಲಂಕೆಟ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಮಾರ್ಕ್ ವುಡ್.
ನ್ಯೂಜಿಲ್ಯಾಂಡ್: ಮಾರ್ಟಿನ್ ಗಪ್ಟಿಲ್, ಹೆನ್ರಿ ನಿಕೋಲ್ಸ್, ಕೇನ್ ವಿಲಿಯಮ್ಸನ್, ರಾಸ್ ಟೇಲರ್, ಟಾಮ್ ಲ್ಯಾಂಥಮ್, ಜೇಮ್ಸ್ ನೀಶಮ್, ಕಾಲಿನ್ ಡಿ ಗ್ರಾಂಡ್ ಹೋಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್, ಲ್ಯೂಕಿ ಫರ್ಗುಸನ್.