ಹೊಸದಿಲ್ಲಿ: ಅ. 5ರಿಂದ ನ.19ರ ವರೆಗೆ ಭಾರತದಲ್ಲಿ ನಡೆ ಯಲಿರುವ ಏಕದಿನ ವಿಶ್ವಕಪ್ ಆರ್ಥಿ ಕವಾಗಿ ಏನು ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ಬ್ಯಾಂಕ್ ಆಫ್ ಬರೋಡದ ತಜ್ಞರು ಹಲವು ವಿಶೇಷ ಮಾಹಿತಿಗಳನ್ನು ನೀಡಿದ್ದಾರೆ. ಈ ಕೂಟ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ ಭಾರೀ ಪ್ರಮಾಣದಲ್ಲಿ ಆದಾಯ ತಂದು ಕೊಡಬಲ್ಲುದಾದರೂ, ಒಟ್ಟಾರೆ ಭಾರತದ ಆರ್ಥಿಕತೆಯ ಮೇಲೂ ಬೀರಬಹುದಾದ ಪರಿಣಾಮ ದೊಡ್ಡದೇ ಇದೆ. ತಜ್ಞರ ಪ್ರಕಾರ 22,000 ಕೋಟಿ ರೂ. ಆದಾಯ ಬರಲಿದೆ ಎನ್ನಲಾಗಿದೆ.
ದೇಶದ 10 ನಗರಗಳಲ್ಲಿ ಕೂಟ ನಡೆಯುತ್ತಿದೆ. 9 ವಿದೇಶಿ ತಂಡಗಳು ಭಾರತವನ್ನು ಪ್ರವೇಶಿಸಿವೆ. ಹಾಗಾಗಿ ಆ ದೇಶಗಳ ಅಭಿಮಾನಿಗಳು ಇದನ್ನೊಂದು ಅವಕಾಶವನ್ನಾಗಿ ಮಾಡಿ ಕೊಂಡು ಭಾರತಕ್ಕೆ ಬರುತ್ತಾರೆ, ಬಂದಿ ದ್ದಾರೆ. ಇನ್ನು ದೇಶೀಯವಾಗಿ ಬೇರೆ ರಾಜ್ಯಗಳಿಗೆ ಹೋಗಿ ಪಂದ್ಯಗಳನ್ನು ವೀಕ್ಷಿಸುವ ಅಭಿಮಾನಿಗಳು ದೊಡ್ಡ ಪ್ರಮಾಣದಲ್ಲಿದ್ದಾರೆ.
ಹೊಟೇಲ್‌ಗಳು, ಪ್ರವಾಸಿ ಸಂಸ್ಥೆ ಗಳು, ಬಸ್, ವಿಮಾನ, ರೈಲುಗಳು, ಆಟೋ, ಬಾಡಿಗೆ ಕಾರುಗಳಿಗೆ ಭಾರೀ ಪ್ರಮಾಣದಲ್ಲಿ ಆರ್ಥಿಕ ಲಾಭವಾಗುತ್ತದೆ. ಬ್ಯಾಟ್, ಚೆಂಡು, ಟೀಶರ್ಟ್‌ಗಳು, ಕಿಟ್‌ಗಳನ್ನು ಮಾರುವ ಕಂಪೆನಿಗಳಿಗೂ ಲಾಭವಾಗುತ್ತದೆ. ಬೇರೆ ಬೇರೆ ರೀತಿಯ ಬೀದಿಬದಿ ಚಿಲ್ಲರೆ ವ್ಯಾಪಾರಿಗಳು ಇಲ್ಲಿ ಆರ್ಥಿಕವಾಗಿ ಲಾಭ ಪಡೆಯಲಿದ್ದಾರೆ.
2019ರ ವಿಶ್ವಕಪ್ ಅನ್ನು ಭಾರತದಲ್ಲಿ ಹತ್ತಿರಹತ್ತಿರ 55.2 ಕೋಟಿ ಮಂದಿ ವೀಕ್ಷಿಸಿದ್ದಾರೆ. ಟಿವಿ ಮತ್ತು ಡಿಜಿಟಲ್ ಸೇರಿ ಇಷ್ಟು ಮಂದಿ ವೀಕ್ಷಿಸಿದ್ದಾರೆಂದು ಅಂದಾಜಿಸಲಾಗಿದೆ. ಈ ಬಾರಿ ನಮ್ಮದೇ ದೇಶದಲ್ಲಿ ನಡೆಯುತ್ತಿರುವುದರಿಂದ ವೀಕ್ಷಣೆಯ ಪ್ರಮಾಣ ಹಿಂದಿನದ್ದಕ್ಕಿಂತ ದುಪ್ಪಟ್ಟಾಗಬಹುದು. ಜನರ ವೀಕ್ಷಣೆ ಜಾಸ್ತಿಯಾದಷ್ಟು ಜಾಹೀರಾತುಗಳು ಹೆಚ್ಚಾಗುತ್ತವೆ.
ಹಣದುಬ್ಬರ ಕೂಡ ಜಾಸ್ತಿಯಾಗ ಬಹುದು. ಟಿಕೆಟ್‌ಗಳಿಗೆ ಬೇಡಿಕೆ ಹೆಚ್ಚಾಗುವುದರಿಂದ ವಿಮಾನ ಟಿಕೆಟ್‌ಗಳು, ಹೊಟೇಲ್ ಕೊಠಡಿಗಳ ದರ ಏರಿದೆ. ಇನ್ನು ಆಸ್ಪತ್ರೆ, ಪ್ರಯಾಣಿಕ, ಸರಕು ಸಾಗಣೆ ವಾಹನಗಳಿಗೂ ಬೇಡಿಕೆ ಬರುತ್ತದೆ. ಒಟ್ಟಾರೆ ಭಾರತದಲ್ಲಿ ಹಣದ ಹರಿವು ಹೆಚ್ಚುತ್ತದೆ ಎಂದು ಅರ್ಥಶಾಸ್ತ್ರಜ್ಞರಾದ ಜಾಹ್ನವಿ ಪ್ರಭಾಕರ್, ಅದಿತಿ ಗುಪ್ತಾ ಹೇಳಿದ್ದಾರೆ.