ಕೋಲ್ಕತಾ: ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತಕಾರಿ ಸೋಲುಣಿಸಿದ ನೆದರ್ಲ್ಯಾಂಡ್ಸ್ ತಂಡ ಶನಿವಾರ ಈಡನ್ ಗಾರ್ಡನ್ಸ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ 87 ರನ್‌ಗಳ ಜಯದೊಂದಿಗೆ ಮತ್ತೊಂದು ಗೆಲುವು ಸಾಧಿಸಿದೆ. ಅಂಕಪಟ್ಟಿಯಲ್ಲಿ ಕೆಳಭಾಗದಿಂದ ಮೇಲಕ್ಕೇರಿತು. ಸಧ್ಯ ಹಾಲಿ ಚಾಂಪಿಯನ್ ಇಂಗ್ಲೆಂಡ್ ಕೊನೆಯ ಸ್ಥಾನದಲ್ಲಿದೆ.
ಗೆಲ್ಲಲು 230 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 18 ಓವರ್‌ಗಳ ಒಳಗೆ 70-6ಕ್ಕೆ ಕುಸಿಯಿತು, ಮೆಹಿದಿ ಹಸನ್ ಮಿರಾಜ್ 35 ರನ್ ಗರಿಷ್ಟ ಸ್ಕೋರ್ ಆಗಿತ್ತು. ಬಾಂಗ್ಲಾ ತಂಡವು ಅಂತಿಮವಾಗಿ 42.2 ಓವರ್‌ಗಳಲ್ಲಿ 142 ಕ್ಕೆ ಎಲ್ಲ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು. ವಾನ್ ಮೀಕೆರೆನ್ 4 ವಿಕೆಟ್ ಪಡೆದು ಮಿಂಚಿದರು. ಡಚ್ ಸೀಮರ್‌ಗಳು ಬಾಂಗ್ಲಾದೇಶಕ್ಕೆ ಬಿಸಿ ಮುಟ್ಟಿಸಿದರು.
ನೆದರ್‌ಲ್ಯಾಂಡ್ಸ್ ಮುಂದಿನ ಪಂದ್ಯಗಳನ್ನು ಅಫ್ಘಾನಿಸ್ಥಾನ, ಇಂಗ್ಲೆಂಡ್ ಮತ್ತು ಭಾರತದ ವಿರುದ್ಧ ಆಡಲಿದ್ದು ಮತ್ತೊಂದು ಗೆಲುವಿನ ನಿರೀಕ್ಷೆ ಇರಿಸಿಕೊಂಡಿದೆ.
ಇನ್ನಿಂಗ್ಸ್ ಅನ್ನು ಪುನರುಜ್ಜೀವನಗೊಳಿಸಿದ ಸ್ಕಾಟ್ ಎಡ್ವರ್ಡ್ಸ್ 68 ರನ್ ಗಳಿಸಿದರುಸೈಬ್ರಾಂಡ್ ಎಂಗೆಲ್‌ಬ್ರೆಕ್ಟ್ 35 ರನ್, ಲೋಗನ್ ವ್ಯಾನ್ ಬೀಕ್ ಔಟಾಗದೆ 23 ರನ್ ಗಳಿಸಿದ್ದು ನೆದರ್ಲ್ಯಾಂಡ್ಸ್ 229 ರನ್ ಗಳಿಸಲು ನೆರವಾಯಿತು.
ಗೆಲುವಿನ ಬಳಿಕ ನಾಯಕ ಸ್ಕಾಟ್ ಎಡ್ವರ್ಡ್ಸ್ ಮಾತನಾಡಿ, ಟೂರ್ನಿಯ ಆರಂಭದಲ್ಲಿ ನಾವು ಯಾವಾಗಲೂ ಸೆಮಿಸ್ ಗುರಿ ಹೊಂದಿದ್ದೇವೆ ಎಂದು ಹೇಳುತ್ತಿದ್ದೆವು. ಅದು ನಮ್ಮ ಗುರಿಯಾಗಿ ಉಳಿದಿದೆ ಆದರೆ ನಮ್ಮೆದುರು ಕೆಲವು ಕಠಿಣ ಪಂದ್ಯಗಳಿವೆ ಎಂದು ಹೇಳಿದ್ದಾರೆ.