ಲಕ್ನೋ : ಇಲ್ಲಿ ಶುಕ್ರವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಉತ್ಸಾಹಿ ಅಫ್ಘಾನಿಸ್ಥಾನ ತಂಡ ನೆದರ್ಲೆಂಡ್ಸ್ ವಿರುದ್ಧ 7 ವಿಕೆಟ್ ಗಳ ಅಮೋಘ ಜಯ ಸಾಧಿಸಿ ಸೆಮಿ ಫೈನಲ್ ಆಸೆ ಜೀವಂತವಾಗಿರಿಸಿದೆ. ಅಫ್ಘಾನ್ 7 ನೇ ಪಂದ್ಯದಲ್ಲಿ 4 ನೇ ಗೆಲುವು ಸಾಧಿಸಿದ್ದು ಮುಂದಿನ ಪಂದ್ಯಗಳಲ್ಲಿ ಬಲಾಢ್ಯ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಸವಾಲು ಎದುರಿಸಬೇಕಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನೆದರ್ಲೆಂಡ್ಸ್ ತಂಡ ನೀಡಿದ 180 ರನ್ ಗಳ ಸಾಧಾರಣ ಗುರಿ ಬೆನ್ನಟ್ಟಿದ ಅಫ್ಘಾನ್ ತಂಡ 31.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು.
ರಹಮಾನುಲ್ಲಾ ಗುರ್ಬಾಜ್ 10 ರನ್, ಇಬ್ರಾಹಿಂ ಜದ್ರಾನ್ 20 ರನ್ ಗಳಿಸಿ ಔಟಾದರು. ಸಮಯೋಚಿತ ಆಟವಾಡಿದ ರಹಮತ್ ಶಾ 52 ರನ್ ಗಳಿಸಿ ಔಟಾದರು. ನಾಯಕ ಹಶ್ಮತುಲ್ಲಾ ಶಾಹಿದಿ ಔಟಾಗದೆ 56 ರನ್ ಗಳಿಸಿದರು. ಅಜ್ಮತುಲ್ಲಾ ಒಮರ್ಜಾಯ್ ಔಟಾಗದೆ 31 ರನ್ ಗಳಿಸಿ ಗೆಲುವನ್ನು ಸಂಭ್ರಮಿಸಿದರು.
ಸೈಬ್ರಾಂಡ್ ಎಂಗೆಲ್‌ಬ್ರೆಕ್ಟ್ ಅರ್ಧಶತಕ ಬಾರಿಸಿದರೂ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ವಿಫಲವಾಯಿತು. ಅಫ್ಘಾನಿಸ್ಥಾನ ಬೌಲಿಂಗ್ ದಾಳಿ ನಡೆಸಿ 179 ರನ್‌ಗಳಿಗೆ ಆಲೌಟ್ ಮಾಡಿತು.
ಎಂಗೆಲ್‌ಬ್ರೆಕ್ಟ್ (86 ಎಸೆತಗಳಲ್ಲಿ 58) ನೆದರ್ಲೆಂಡ್ಸ್‌ನ ಇನ್ನಿಂಗ್ಸ್‌ಗೆ ಆಸರೆಯಾದರು. ನಂತರ ಡಚ್ ಮಧ್ಯ ಇನ್ನಿಂಗ್ಸ್ ಕುಸಿತವನ್ನು ಅನುಭವಿಸಿತು. ಮ್ಯಾಕ್ಸ್ ಒ’ಡೌಡ್ (40 ಎಸೆತಗಳಲ್ಲಿ 42) ಮತ್ತು ಕಾಲಿನ್ ಅಕರ್‌ಮನ್ (29) ಔಟಾದರು. ಮೊಹಮ್ಮದ್ ನಬಿ 3 ವಿಕೆಟ್ , ನೂರ್ ಅಹ್ಮದ್ 2 ವಿಕೆಟ್ ಪಡೆದರು.