Advertisement

Team India 302 ರನ್ ಗಳ ಗೆಲುವು; ಶಮಿ, ಸಿರಾಜ್ ಮಾರಕ ದಾಳಿಗೆ ಪತರುಗುಟ್ಟಿದ ಲಂಕಾ

09:04 PM Nov 02, 2023 | Team Udayavani |

ಮುಂಬೈ : ಇಲ್ಲಿನ ವಾಂಖೆಡೆ ಸ್ಟೇಡಿಯಂ ನಲ್ಲಿ ಗುರುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಅಬ್ಬರಕ್ಕೆ ನಲುಗಿ ಹೋದ ಶ್ರೀಲಂಕಾ ವಿಶ್ವಕಪ್ ಆಸೆ ಕೈಬಿಟ್ಟಿತು. 302 ರನ್‌ಗಳ ದಾಖಲೆಯ ಜಯ ಸಾಧಿಸಿದ ಭಾರತ ಅಜೇಯ ಯಾತ್ರೆ ಮುಂದುವರಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮತ್ತೆ ವಿರಾಜಮಾನವಾಗಿದೆ ಮಾತ್ರವಲ್ಲದೆ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿದೆ.

Advertisement

ಲಂಕಾ ಆಡಿದ 7 ಪಂದ್ಯಗಳಲ್ಲಿ 5 ನೇ ಸೋಲು ಅನುಭವಿಸಿತು. ಭಾರತ ತಂಡ ನೀಡಿದ 358 ರನ್ ಗಳ ದೊಡ್ಡ ಮೊತ್ತ ಬೆನ್ನಟ್ಟಿದ್ದ ಲಂಕಾ ಆರಂಭದಿಂದಲೇ ಭಾರತದ ವೇಗಿಗಳ ದಾಳಿ ತಡೆಯಲಾಗದೆ ನಡುಗಿತು. ಒಬ್ಬರಾದ ಬಳಿಕ ಒಬ್ಬರು ಪೆವಿಲಿಯನ್ ಪರೇಡ್ ನಡೆಸಿದರು. 14ಕ್ಕೆ 6 ವಿಕೆಟ್ ಕಳೆದುಕೊಂಡ ಲಂಕಾ ಕೊನೆಗೂ 55 ರನ್ ಗಳಿಸುವಲ್ಲಿ ಯಶಸ್ವಿಯಾಗಿ ಏಷ್ಯಾ ಕಪ್ ಫೈನಲ್ ನಲ್ಲಿ ಅನುಭವಿಸಿದ ಸೋಲಿನ ಕೆಟ್ಟ ದಾಖಲೆಯಿಂದ ದೂರವಾಯಿತು. ಏಷ್ಯಾ ಕಪ್ ನಲ್ಲಿ ಸಿರಾಜ್ ದಾಳಿಗೆ ನಲುಗಿ 50 ಕ್ಕೆ ಆಲೌಟಾಗಿ ಹೀನಾಯ ಸೋಲು ಅನುಭವಿಸಿತ್ತು. 19.4 ಓವರ್ ಗಳಲ್ಲಿ 55 ರನ್ ಗಳಿಗೆ ಆಲೌಟಾಯಿತು.

ಶಮಿ ಮತ್ತೆ ಮೋಡಿ
ಹಾರ್ದಿಕ್ ಪಾಂಡ್ಯ ಗಾಯಾಳಾಗಿ ತಂಡದಿಂದ ಹೊರ ಬಿದ್ದ ಕಾರಣ ಆಡುವ ಬಳಗದಲ್ಲಿ ಕಾಣಿಸಿಕೊಂಡ ವೇಗಿ ಮೊಹಮ್ಮದ್ ಶಮಿ ವಿಶ್ವಕಪ್ ನಲ್ಲಿ ಮತ್ತೊಮ್ಮೆ ಐದು ವಿಕೆಟ್ ಸಾಧನೆ ಮಾಡಿದರು. 5 ಓವರ್ ಎಸೆದು 1 ಮೇಡನ್ ಸಹಿತ 18 ರನ್ ನೀಡಿ 5 ವಿಕೆಟ್ ಕಬಳಿಸಿ ತಂಡದಲ್ಲಿ ತನ್ನ ಸಾಮರ್ಥ್ಯ ಮೆರೆದರು.

ಶಮಿ ಏಕದಿನ ಇತಿಹಾಸದಲ್ಲಿ ಸತತ ಮೂರು ಬಾರಿ 4 ಪ್ಲಸ್ ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡರು. 2019 ರ ವಿಶ್ವಕಪ್‌ನಲ್ಲಿ ಸತತ ಮೂರು ಇನ್ನಿಂಗ್ಸ್‌ಗಳಲ್ಲಿ 4/40, 4/16 ಮತ್ತು 5/69 ರ ನಂತರ ಇದು ಅವರ ಎರಡನೇ ಸರಣಿಯಾಗಿದೆ. ವಕಾರ್ ಯೂನಿಸ್ ಮಾತ್ರ ಈ ಸಾಧನೆಯನ್ನು ಸಾಧಿಸಿದ್ದರು ಮೂರು ಬಾರಿ (1990 ರಲ್ಲಿ ಎರಡು ಬಾರಿ ಮತ್ತು 1994 ರಲ್ಲಿ ಒಮ್ಮೆ). ವಿಶ್ವಕಪ್‌ನಲ್ಲಿ ಭಾರತದ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಮೊಹಮ್ಮದ್ ಶಮಿ ಅವರ ಹೆಸರಿನಲ್ಲಿ ದಾಖಲಾಯಿತು. ಒಟ್ಟು 45 ವಿಕೆಟ್ ಪಡೆದಿದ್ದಾರೆ. ಜಹೀರ್ ಖಾನ್ 44 ವಿಕೆಟ್ ಪಡೆದಿದ್ದರು.

ಸಿರಾಜ್ ಕೂಡ ಘಾತಕ ದಾಳಿ ನಡೆಸಿ 3 ವಿಕೆಟ್ ಕಿತ್ತು ಲಂಕಾ ತಂಡಕ್ಕೆ ಆರಂಭದಲ್ಲೇ ತಲೆ ಎತ್ತದಂತೆ ಮಾಡಿದರು. ಬುಮ್ರಾ ಒಂದು ವಿಕೆಟ್ ಪಡೆದರು. ಕೊನೆಯಲ್ಲಿ ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದರು.

Advertisement

ಕೊನೆಯಲ್ಲಿ ಬಂದ ಮಹೇಶ್ ತೀಕ್ಷಣ ಔಟಾಗದೆ 12, ಕಸುನ್ ರಜಿತಾ 14 ಮತ್ತು ದಿಲ್ಶನ್ ಮಧುಶನಕ 5 ರನ್ ಗಳಿಸಿ ಹೀನಾಯ ದಾಖಲೆ ನಿರ್ಮಾಣವಾಗದಂತೆ ತಡೆದರು. ಏಂಜೆಲೊ ಮ್ಯಾಥ್ಯೂಸ್12 ರನ್ ಗಳಿಸಿ ಔಟಾದರು.

ಗಿಲ್, ಕೊಹ್ಲಿ,ಅಯ್ಯರ್ ಬ್ಯಾಟಿಂಗ್ ಕಮಾಲ್
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ ಪಟ್ಟ ಭಾರತ ತಂಡ ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಬೃಹತ್ ಮೊತ್ತ ಕಲೆ ಹಾಕಿತು.

ನಾಯಕ ರೋಹಿತ್ ಶರ್ಮ 4 ರನ್ ಗಳಿಸಿ ಔಟಾಗುವ ಮೂಲಕ ಆರಂಭಿಕ ಆಘಾತ ಅನುಭವಿಸಿತು. ಆ ಬಳಿಕ ಗಿಲ್ ಮತ್ತು ಕೊಹ್ಲಿ ಅಮೋಘ ಜತೆಯಾಟವಾಡಿದರು. ಅತ್ಯಮೋಘ ಆಟವಾಡಿದ ಗಿಲ್ ಶತಕದ ಹೊಸ್ತಿಲಲ್ಲಿ ಎಡವಿದರು. 92 ಎಸೆತಗಳಲ್ಲಿ 92 ರನ್ ಗಳಿಸಿದ್ದ ವೇಳೆ ದಿಲ್ಶನ್ ಮಧುಶನಕ ಎಸೆದ ಚೆಂಡನ್ನು ಕುಸಲ್ ಮೆಂಡಿಸ್ ಕೈಗಿತ್ತು ಭಾರೀ ನಿರಾಶರಾದರು. ಕೊಹ್ಲಿ 88 ರನ್ ಗಳಿಸಿದ್ದ ವೇಳೆ ಔಟ್ ಮಾಡುವಲ್ಲಿ ಮಧುಶನಕ ಯಶಸ್ವಿಯಾದರು.

ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್ 56 ಎಸೆತಗಳಲ್ಲಿ 82 ರನ್ ಗಳಿಸಿ ಔಟಾದರು. 6 ಭರ್ಜರಿ ಸಿಕ್ಸರ್ ಮತ್ತು 3 ಬೌಂಡರಿ ಬಾರಿಸಿದ್ದರು. ಕೆಎಲ್ ರಾಹುಲ್21, ಸೂರ್ಯಕುಮಾರ್ ಯಾದವ್ 12 , ರವೀಂದ್ರ ಜಡೇಜಾ 35, ಮೊಹಮ್ಮದ್ ಶಮಿ 2 ರನ್ ಗಳಿಸಿ ಔಟಾದರು. 50 ಓವರ್ ಗಳಲ್ಲಿ8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತು.

ಲಂಕಾ ವೇಗಿ ಮಧುಶನಕ ದುಬಾರಿ ಎನಿಸಿದರೂ 10 ಓವರ್ ಗಳಲ್ಲಿ 80 ರನ್ ನೀಡಿ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next