ಲಕ್ನೋ: ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪುರುಷರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯ ವಿರುದ್ಧ 134 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ಅಮೋಘ ನಿರ್ವಹಣೆ ತೋರಿದ ದಕ್ಷಿಣ ಆಫ್ರಿಕಾ ಆಟಗಾರರು ಆಸ್ಟ್ರೇಲಿಯಕ್ಕೆ ಈ ವಿಶ್ವಕಪ್ ನಲ್ಲಿ ಎರಡನೇ ಸೋಲು ಉಣಿಸಿದರು. ಆಸೀಸ್ ಭಾರತದ ವಿರುದ್ಧ ಮೊದಲ ಪಂದ್ಯ ಸೋತಿತ್ತು.
ಆಸ್ಟ್ರೇಲಿಯ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಅವರ ಅಮೋಘ ಶತಕದ ನೆರವಿನಿಂದ ಮುನ್ನೂರರ ಗಡಿ ದಾಟಲು ಸಾಧ್ಯವಾಯಿತು. ಕಾಕ್ 106 ಎಸೆತಗಳಲ್ಲಿ 109 ರನ್ ಗಳಿಸಿ ಔಟಾದರು. 8ಬೌಂಡರಿ ಮತ್ತು 5 ಆಕರ್ಷಕ ಸಿಕ್ಸರ್ ಬಾರಿಸಿದ್ದರು. ತಾಳ್ಮೆಯ ಆಟವಾಡಿದ ನಾಯಕ ತೆಂಬ ಬವುಮ 55 ಎಸೆತಗಳಲ್ಲಿ 35 ರನ್ ಗಳಿಸಿ ಔಟಾದರು. ಇಬ್ಬರು ಮೊದಲ ವಿಕೆಟ್ ಗೆ 108 ರನ್ ಗಳ ಜತೆಯಾಟವಾಡಿ ಭದ್ರ ಬುನಾದಿ ನಿರ್ಮಿಸಿಕೊಟ್ಟರು. ಮಾರ್ಕ್ರಾಮ್ 56, ವ್ಯಾನ್ ಡೆರ್ ಡಸ್ಸೆನ್ 26, ಕ್ಲಾಸೆನ್ 29,ಮಿಲ್ಲರ್ 17,ಮಾರ್ಕೊ ಜಾನ್ಸೆನ್ 26 ರನ್ ಗಳಿಸಿ ಔಟಾದರು. 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 311 ರನ್ ಕಲೆ ಹಾಕಿತು.
ಗುರಿ ಬೆನ್ನಟ್ಟಿದ ಆಸೀಸ್ ಆರಂಭದಲ್ಲೇ ಎಡವಿತು. 27 ರನ್ ಆಗಿದ್ದ ವೇಳೆ 7 ರನ್ ಗಳಿಸಿ ಆಡುತ್ತಿದ್ದ ಮಿಚೆಲ್ ಮಾರ್ಷ್ ಅವರ ವಿಕೆಟ್ ಕಳೆದುಕೊಂಡಿತು. ಆರಂಭಿಕ ಆಘಾತದಿಂದ ಹೊರ ಬರಲು ಸಾಧ್ಯವಾಗದೆ 70 ರನ್ ಆಗುವಷ್ಟರಲ್ಲಿ ಪ್ರಮುಖ 6 ವಿಕೆಟ್ ಕಳೆದುಕೊಂಡು ಭಾರಿ ಸೋಲಿನ ಸುಳಿಗೆ ಸಿಲುಕಿತು.
ಡೇವಿಡ್ ವಾರ್ನರ್(13), ಸ್ಟೀವನ್ ಸ್ಮಿತ್(19), ಜೋಶ್ ಇಂಗ್ಲಿಸ್(5),ಗ್ಲೆನ್ ಮ್ಯಾಕ್ಸ್‌ವೆಲ್(3), ಮಾರ್ಕಸ್ ಸ್ಟೊಯಿನಿಸ್ (5) ಅವರು ನೆಲಕಚ್ಚಿ ಆಡುವಲ್ಲಿ ವಿಫಲವಾಗಿ ಬ್ಯಾಟಿಂಗ್ ಬರ ತೋರಿತು. ಲಬುಶೇನ್ 46, ಸ್ಟಾರ್ಕ್ 27, ನಾಯಕ ಕಮಿನ್ಸ್ 22 ,ಜಂಪಾ 11 ರನ್ ಗಳಿಸಿದರು. ಆಸೀಸ್ 40.5 ಓವರ್ ಗಳಲ್ಲಿ 177 ರನ್ ಗಳಿಸಿ ಆಲೌಟಾಯಿತು.
ರಬಾಡಾ 3 ವಿಕೆಟ್ ಪಡೆದರೆ, ಮಾರ್ಕೊ ಜಾನ್ಸೆನ್, ಕೇಶವ ಮಹಾರಾಜ ತಬ್ರೈಜ್ ಶಮ್ಸಿ ತಲಾ ಎರಡು ವಿಕೆಟ್ , ಬಿಗಿ ದಾಳಿ ನಡೆಸಿದ ಲುಂಗಿ ಎನ್ಗಿಡಿ ಒಂದು ವಿಕೆಟ್ ಪಡೆದರು.