ಹೊಸದಿಲ್ಲಿ : ಐಸಿಸಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅತ್ಯಾಶ್ಚರ್ಯಕರವಾಗಿ ಇಂದು ಬುಧವಾರ ಪ್ರಧಾನಿ ಮೋದಿ ಅವರಿಗೆ ಸಂಬಂಧಿಸಿದ ಪೋಸ್ಟ್ ಕಂಡು ಬಂದ ಬಗ್ಗೆ ಭಾರೀ ವಿವಾದ, ಗೊಂದಲ ಉಂಟಾಗಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇದಕ್ಕಾಗಿ ಕ್ಷಮೆ ಯಾಚಿಸಿದೆ ಮತ್ತು ಈ ಪೋಸ್ಟ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಕಾಣಿಸಿಕೊಂಡದ್ದು ಹೇಗೆ ಎಂಬ ಬಗ್ಗೆ ತನಿಖೆಗೆ ಆದೇಶಿಸಿದೆ
“ಇವತ್ತು ನಮ್ಮ ಟ್ವಿಟರ್ ಖಾತೆಯಲ್ಲಿ ಕ್ಷಣಕಾಲಕ್ಕೆ ಕಂಡು ಬಂದಿರುವ ಕ್ರಿಕೆಟ್‌ಗೆ ಹೊರತಾಗಿ ಪೋಸ್ಟ್ ನಮಗೆ ತೀವ್ರ ಅಚ್ಚರಿ ಉಂಟು ಮಾಡಿದೆ. ಈ ಪೋಸ್ಟ್ ನಿಂದಾಗಿ ಯಾರಿಗೇ ಆದರೂ ನೋವಾಗಿದ್ದಲ್ಲಿ ನಾವು ಕ್ಷಮೆ ಯಾಚಿಸುತ್ತೇವೆ’ ಎಂದು ಹೇಳಿರುವ ಐಸಿಸಿ, ವಿವಾದಿತ ಪೋಸ್ಟನ್ನು ಆ ಬಳಿಕ ತನ್ನ ಟ್ವಿಟರ್ ಖಾತೆಯಿಂದ ಅಳಿಸಿ ಹಾಕಿದೆ. ಆದರೆ ಅಷ್ಟರೊಳಗಾಗಿ ಈ ಪೋಸ್ಟ್‌ನ ಸ್ಕ್ರೀನ್ ಶಾಟ್ ಅತ್ಯಧಿಕ ಸಂಖ್ಯೆಯಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಳ್ಳಲ್ಪಟ್ಟಿದೆ.
“ಈ ಪ್ರಮಾದ ಹೇಗಾಯಿತು ಎಂಬ ಬಗ್ಗೆ ನಾವು ತನಿಖೆಗೆ ಆದೇಶಿಸಿದ್ದೇವೆ’ ಎಂದು ಐಸಿಸಿ ಹೇಳಿದೆ.
ಐಸಿಸಿ ಟ್ವಿಟರ್‌ನಲ್ಲಿ ಕಾಣಿಸಿಕೊಂಡಿದ್ದ ಕ್ರಿಕೆಟೇತರ ಪೋಸ್ಟ್ ಪ್ರಧಾನಿ ನರೇಂದ್ರ ಮೋದಿ ಮತ್ತು ಇಂದು ರೇಪ್ ಕೇಸಿನಲ್ಲಿ ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟ ಆಸಾರಾಂ ಬಾಪು ಗೆ ಸಂಬಂಧಿಸಿದ್ದಾಗಿದೆ. ಅನೇಕರು ಈ ಪೋಸ್ಟ್ ಕಂಡು “ಐಸಿಸಿ ಟ್ವಿಟರ್ ಖಾತೆಯನ್ನು ಯಾರು ಹ್ಯಾಂಡಲ್ ಮಾಡುತ್ತಿದ್ದಾರೆ?’ ಎಂದು ಪ್ರಶ್ನಿಸಿದ್ದಾರೆ.