ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಯು ಟಿ20 ಮಾದರಿ ಕ್ರಿಕೆಟ್ ಪಂದ್ಯಗಳಿಗೆ ಹೊಸ ನಿಯಮಗಳನ್ನು ರೂಪಿಸಿದೆ. ಶುಕ್ರವಾರ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು, ಸ್ಲೋ ಓವರ್ ರೇಟ್ ತಪ್ಪಿಸಲು ಐಸಿಸಿ ಹೊಸ ನಿಯಮವನ್ನು ತಂದಿದೆ.
ಸ್ಲೋ ಓವರ್ ಹೊಂದಿದ ಇನ್ನಿಂಗ್ಸ್ ನ ಉಳಿದ ಓವರ್ ನಲ್ಲಿ ಕಡಿಮೆ ಫೀಲ್ಡರ್ ಗೆ ಅವಕಾಶ ಮತ್ತು ಡ್ರಿಂಕ್ಸ್ ಬ್ರೇಕ್ ಕುರಿತಾಗಿ ಹೊಸ ನಿಯಮಗಳನ್ನು ಐಸಿಸಿ ಪ್ರಕಟ ಮಾಡಿದೆ.
“ಓವರ್ ರೇಟ್ ನಿಯಮಾವಳಿ ಪ್ರಕಾರ ಫೀಲ್ಡಿಂಗ್ ತಂಡವು ಇನ್ನಿಂಗ್ಸ್‌ನ ಅಂತಿಮ ಓವರ್‌ನ ಮೊದಲ ಚೆಂಡನ್ನು ಇನ್ನಿಂಗ್ಸ್ ನ ಅಂತ್ಯಕ್ಕೆ ನಿಗದಿತ ಅಥವಾ ಮರುನಿಗದಿಪಡಿಸಿದ ಸಮಯದೊಳಗೆ ಬೌಲ್ ಮಾಡುವ ಸ್ಥಿತಿಯಲ್ಲಿರಬೇಕು” ಎಂದು ಐಸಿಸಿ ಹೇಳಿದೆ.
“ಒಂದು ವೇಳೆ ತಂಡವು ಈ ಸ್ಥಿತಿಯಲ್ಲಿ ಇರದಿದ್ದರೆ, ದಂಡದ ರೂಪದಲ್ಲಿ ಇನ್ನಿಂಗ್ಸ್ ನ ಉಳಿದ ಓವರ್ ಗಳಲ್ಲಿ 30 ಯಾರ್ಡ್ ಸರ್ಕಲ್ ನಿಂದ ಹೊರಗಡೆ ಓರ್ವ ಫೀಲ್ಡರ್ ಕಡಿಮೆ ನಿಲ್ಲಬೇಕಾಗುತ್ತದೆ” ಎಂದು ಐಸಿಸಿ ಹೇಳಿದೆ.
ಇದನ್ನೂ ಓದಿ:ರಿಷಭ್ ಪಂತ್ ಜೊತೆ ಮಾತನಾಡುವ ಅಗತ್ಯವಿದೆ: ಕೋಚ್ ರಾಹುಲ್ ದ್ರಾವಿಡ್
ಐಸಿಸಿಯ ಕ್ರಿಕೆಟ್ ಕಮಿಟಿಯು ಈ ನಿಯಮಗಳನ್ನು ರೂಪಿಸಿದೆ. ಇದಲ್ಲದೆ ಇನ್ನಿಂಗ್ಸ್ ನ ಮಧ್ಯದಲ್ಲಿ ಎರಡೂವರೆ ನಿಮಿಷಗಳ ಡ್ರಿಂಕ್ಸ್ ಬ್ರೇಕ್ ತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ.
ಈ ನಿಯಮಗಳು ಜನವರಿ 16ರಿಂದ ಜಮೈಕಾದಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ಪಂದ್ಯದಿಂದ ಜಾರಿಗೆ ಬರಲಿದೆ.