ಬೆಂಗಳೂರು: ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರನ್ನು ಪಕ್ಷ ತೊರೆಯದಂತೆ ಮನವೊಲಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಆಪ್ತರ ಮೂಲಕ ಪ್ರಯತ್ನ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಧಾನ ಪರಿಷತ್ ವಿಪಕ್ಷ ನಾಯಕನ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಇಬ್ರಾಹಿಂ ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದು, ಶೀಘ್ರವೇ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರಲು ನಿರ್ಧರಿಸಿದ್ದಾರೆ.
ಈ ನಡುವೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಆಪ್ತರ ಮೂಲಕ ಇಬ್ರಾಹಿಂ ಕಾಂಗ್ರೆಸ್‌ನಲ್ಲಿಯೇ ಉಳಿಯುವಂತೆ ಅವರ ಮನ ವೊಲಿಸಲು ಕಸರತ್ತು ನಡೆಸಿದ್ದಾರೆ. ರವಿವಾರ ಜಮೀರ್ ಅಹ್ಮದ್, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಅನಂತರ ಖಾಸಗಿ ಕಾರ್ಯಕ್ರಮದಲ್ಲಿ ಇಬ್ರಾಹಿಂ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಹಾದೇವಪ್ಪ ಸಂಧಾನ
ಇಬ್ರಾಹಿಂ ಅವರ ಜತೆ ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ, ದೂರವಾಣಿ ಮೂಲಕ ಸುಮಾರು ಅರ್ಧಗಂಟೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಇಬ್ರಾಹಿಂ ತಮಗೆ ಆಗಿರುವ ಅನ್ಯಾಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಸೂಚನೆಯಂತೆ ಇಬ್ರಾಹಿಂ ಜತೆ ಮಾತನಾಡಿದ್ದೇನೆ. ಅವರಿಗೆ ಪಕ್ಷ ತಮ್ಮನ್ನು ನಡೆಸಿಕೊಂಡಿರುವ ಬಗ್ಗೆ ಬೇಸರವಿದೆ. ಶೀಘ್ರವೇ ಅವರನ್ನು ಭೇಟಿ ಮಾಡಿ ಮತ್ತೆ ಮಾತನಾಡುತ್ತೇನೆ ಎಂದು ಹೇಳಿದರು.
ಏತನ್ಮಧ್ಯೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಇಬ್ರಾಹಿಂ ನನ್ನ ಒಳ್ಳೆಯ ಸ್ನೇಹಿತ. ಅವರು ಏನೇ ಮಾಡಿದರೂ ಪಕ್ಷ ಬಿಡುವುದಿಲ್ಲ. ನಾನು ಶಾಸಕಾಂಗ ಪಕ್ಷದ ನಾಯಕ ಆಗಿರುವುದರಿಂದ ಅವರಿಗೆ ನನ್ನ ಮೇಲೆ ಕೋಪ ಇದೆ. ಅವರ ಕೋಪ ಕಡಿಮೆಯಾದ ಮೇಲೆ ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು.