Advertisement

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಇಬ್ರಾಹಿಂ ಅವರಿಗೂ ಗೊತ್ತಿದೆ : ಸಿದ್ದರಾಮಯ್ಯ

04:21 PM Jan 28, 2022 | Team Udayavani |

ಬೆಂಗಳೂರು: ನನ್ನ ಪ್ರಕಾರ ಸಿ.ಎಂ ಇಬ್ರಾಹಿಂ ಅವರು ಪಕ್ಷ ತೊರೆಯುದಿಲ್ಲ, ಜೆಡಿಎಸ್ ಸೇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿಕೆ ನೀಡಿದ್ದಾರೆ.

Advertisement

ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ  ಸಿದ್ದರಾಮಯ್ಯ ಅವರು, ರಾಜ್ಯದ ಜನರ ಆಶೀರ್ವಾದ ಇರುವ ವರೆಗೆ ಯಾರೂ ತಬ್ಬಲಿಯಾಗಲ್ಲ, ಅದು ಇಬ್ರಾಹಿಂ ಆದರೂ ಅಷ್ಟೇ, ನಾನೇ ಆದರೂ ಅಷ್ಟೆ. ಜನರ ಪ್ರೀತಿ ವಿಶ್ವಾಸ ಮಾತ್ರ ಮುಖ್ಯ ಎಂದರು.

ಈ ಹಿಂದೆ ಅವರಿಗೆ ರಾಜ್ಯ ಸಭಾ ಸ್ಥಾನವನ್ನು ತಪ್ಪಿಸಿದ್ದೇ ದೇವೇಗೌಡರು ಹಾಗಾಗಿ ಅವರು ಮತ್ತೆ ಜೆಡಿಎಸ್ ಗೆ ಹೋಗಲ್ಲ ಎಂದು ನನಗನಿಸುತ್ತಿದೆ ಎಂದರು. ಇಬ್ರಾಹಿಂ ಅವರು ಕೋಪದಲ್ಲಿ ಕಾಂಗ್ರೆಸ್ ಬಿಡುತ್ತೇನೆ ಎಂದಿರಬಹುದು, ನಾನು ಅವರ ಜೊತೆ ಮಾತನಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಅವರಿಗೂ ಗೊತ್ತಿದೆ. ನನಗೆ ಬಾದಾಮಿಯಿಂದ ಸ್ಪರ್ಧೆ ಮಾಡಿ ಎಂದು ಹೇಳಿದವರಲ್ಲಿ ಇಬ್ರಾಹಿಂ ಕೂಡ ಒಬ್ಬರು. ಅವರು ನನಗೆ ಒಳ್ಳೆ ಸ್ನೇಹಿತ, ನನ್ನ ಬಗ್ಗೆ ಏನೇ ಹೇಳಿದ್ರೂ ಅದು ನನಗೆ ಶುಭ ಹಾರೈಸಿದ ಹಾಗೆ ಅನ್ಕೊತೀನಿ ಎಂದರು.

ಸಮಾಜ ಒಡೆಯುವವರು

ಆರ್.ಎಸ್.ಎಸ್ ಹಿನ್ನೆಲೆಯಿಂದ ಬಂದ ಸುನೀಲ್ ಕುಮಾರ್ ಕಾರ್ಕಳ ಅವರಿಂದ ಇನ್ನೇನು ನಿರೀಕ್ಷೆ ಮಾಡಬಹುದು? ಅವರು ಸಮಾಜ ಒಡೆಯುವವರು. ಹಿಂದೂ ಬೇರೆ, ಹಿಂದುತ್ವ ಬೇರೆ. ನಾವು ಹಿಂದೂಗಳು ಒಟ್ಟಿಗೆ ಬಾಳಲು ಕರೆ ಕೊಟ್ಟರೆ, ಅವರು ಹಿಂದುತ್ವದ ಹೆಸರಲ್ಲಿ ಸಮಾಜ ಒಡೆಯುವವರು. 2013 ರಲ್ಲಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಪಕ್ಷ ಏಳು ಸ್ಥಾನ ಗೆದ್ದಿತ್ತು, ಬಿಜೆಪಿ ಒಂದೇ ಗೆದ್ದಿತ್ತು. ಯಾವುದು ಯಾರ ಭದ್ರ ಕೋಟೆನೂ ಅಲ್ಲ ಎಂದು ಕಿಡಿ ಕಾರಿದರು.

Advertisement

ಸಂವಿಧಾನ ಜಾರಿಗೆ ಬಂದ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಣೆ ಮಾಡುತ್ತೇವೆ. ಸಂವಿಧಾನ ರಚನೆ ಮಾಡಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಅವರ ಫೋಟೊವನ್ನು ತೆಗೀರಿ ಎಂದು ನ್ಯಾಯಾಧೀಶರು ಹೇಳಿರುವುದು ಅಕ್ಷಮ್ಯ ಅಪರಾಧ. ಅವರ ಮೇಲೆ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಈ ಸರ್ಕಾರದ ಸಚಿವರು, ಶಾಸಕರು ತಾವೇ ಮಾಡಿದ ಕೊವಿಡ್ ನಿಯಮಗಳನ್ನು ಮೀರುತ್ತಿದ್ದಾರೆ. ಇವರಿಗೆ ನಿಯಮಗಳು ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next