Advertisement
ವ್ಯಾಪಕ ಟೀಕೆ: ಸೋಮವಾರ, ಸಚಿವಾಲಯದ ಆದೇಶ ಹೊರಬೀಳುತ್ತಿದ್ದಂತೆಯೇ ಟೀಕೆ ಮಾಡಿದ್ದ ಕಾಂಗ್ರೆಸ್‌ನ ಅಹ್ಮದ್ ಪಟೇಲ್, ಸರಕಾರಕ್ಕೆ ಮುಜುಗರ ತರುವಂಥ ವರದಿಗಳನ್ನು ಮಾಡುವುದರಿಂದ ಪತ್ರಕರ್ತರನ್ನು ಈ ಮೂಲಕ ನಿಯಂತ್ರಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದ್ದರು. ಕಾಂಗ್ರೆಸ್‌ನ ಮತ್ತೂಬ್ಬ ನಾಯಕ ರಣದೀಪ್ ಸುರ್ಜೆವಾಲಾ ಟ್ವೀಟ್ ಮಾಡಿ, ಮೋದಿ ಸರಕಾರದ ನಿರಂಕುಶ ಆಡಳಿತ ತಾರಕ್ಕಕೇರಿದ್ದು, ಈಗ ಸ್ವತಂತ್ರವಾಗಿ ಬರೆಯುವ ಹಕ್ಕನ್ನು ಕಸಿದುಕೊಳ್ಳಲು ಹೆಜ್ಜೆಯಿಟ್ಟಿದೆ ಎಂದು ಟೀಕಿಸಿದ್ದರು. ವಿಶ್ವ ಹಿಂದೂ ಪರಿಷತ್ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಕೂಡ ಸಚಿವಾಲಯದ ನಡೆಯನ್ನು ‘ಅಘೋಷಿತ ತುರ್ತು ಪರಿಸ್ಥಿತಿ’ ಎಂದು ಬಣ್ಣಿಸಿದ್ದರು. ಸಿಪಿಎಂ ನಾಯಕ ಸೀತಾರಾಂ ಯೆಚೂರಿ, ಆಮ್ ಆದ್ಮಿ ಪಾರ್ಟಿಯ ಅಶುತೋಷ್ ಕೂಡ ಇದಕ್ಕೆ ದನಿಗೂಡಿಸಿದ್ದರು. ಅತ್ತ, ಪ. ಬಂಗಾಲ ಸಿಎಂ ಮಮತಾ ಬ್ಯಾನರ್ಜಿ, ಸಚಿವಾಲಯದ ನಡೆ ನಿರ್ಲಜ್ಜೆಯಿಂದ ಕೂಡಿರು ವಂಥದ್ದು ಎಂದರು.
ಭಾರತದಲ್ಲಿ ಸುಳ್ಳು ಸುದ್ದಿಗಳನ್ನು ಕಟ್ಟಿಹಾಕುವ ಪ್ರಯತ್ನಕ್ಕೆ ಹಿನ್ನಡೆಯಾಗಿದ್ದರೂ ಮಲೇಷ್ಯಾದಲ್ಲಿ ಅಲ್ಲಿನ ಸರಕಾರ ಈ ನಿಟ್ಟಿನಲ್ಲಿ ಇಟ್ಟಿದ್ದ ಹೆಜ್ಜೆ ಸಫಲವಾಗಿದೆ. ಅಲ್ಲಿನ ಪ್ರಧಾನಿ ನಜೀಬ್ ರಜಾಕ್ ನೇತೃತ್ವದ ಸರಕಾರ ಮಂಡಿಸಿದ್ದ ಸುಳ್ಳು ಸುದ್ದಿ ನಿಗ್ರಹ ಮಸೂದೆಯನ್ನು ಮಲೇಷ್ಯಾ ಸಂಸತ್ತು ಅನುಮೋದಿಸಿದೆ. ಮಸೂದೆಯ ಪ್ರಕಾರ, ಸುಳ್ಳು ಸುದ್ದಿ ಹರಡುವವರಿಗೆ ಆರು ವರ್ಷಗಳವರೆಗೆ ಕಠಿನ ಶಿಕ್ಷೆ ವಿಧಿಸುವ ಬಗ್ಗೆ ಪ್ರಸ್ತಾವಿಸಲಾಗಿದೆ.