ಮುಂಬೈ: ಮಹಾತ್ಮ ಗಾಂಧಿ ಹಾಗೂ ನಾಥೂರಾಂ ಗೋಡ್ಸೆ ಕುರಿತು ವಿವಾದಾತ್ಮಕ ಟ್ವೀಟ್ ಮಾಡುವ ಮೂಲಕ ಮಹಾರಾಷ್ಟ್ರದ ಐಎಎಸ್ ಅಧಿಕಾರಿಯೊಬ್ಬರು ವಿವಾದಕ್ಕೆ ಸಿಲುಕಿದ್ದಾರೆ. ಅವರ ಟ್ವೀಟ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಅವರನ್ನು ಕೂಡಲೇ ಹುದ್ದೆಯಿಂದ ವಜಾ ಮಾಡಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿವೆ.
ಮೇ 17ರಂದು ಟ್ವೀಟ್ ಮಾಡಿದ್ದ ಬಿಎಂಸಿ ಡೆಪ್ಯುಟಿ ಮುನ್ಸಿಪಲ್ ಕಮಿಷನರ್ ಆಗಿರುವ ನಿಧಿ ಚೌಧರಿ ಅವರು, ‘ಗಾಂಧೀಜಿಯ 150ನೇ ಜನ್ಮ ದಿನಾಚರಣೆಯನ್ನು ಎಷ್ಟೊಂದು ಅದ್ದೂರಿಯಾಗಿ ನಡೆಸಲಾಗುತ್ತಿದೆ. ನಾವು ಈಗ ಅವರ ಭಾವಚಿತ್ರವನ್ನು ಕರೆನ್ಸಿ ನೋಟುಗಳಿಂದ ಕಿತ್ತುಹಾಕುವ, ಜಗತ್ತಿನಾದ್ಯಂತ ಇರುವ ಮಹಾತ್ಮನ ಪ್ರತಿಮೆಗಳನ್ನು ಧ್ವಂಸಗೊಳಿಸುವ ಮತ್ತು ಗಾಂಧಿಯ ಹೆಸರಲ್ಲಿರುವ ರಸ್ತೆ ಹಾಗೂ ಸಂಸ್ಥೆಗಳ ಹೆಸರನ್ನು ಬದಲಾಯಿಸುವ ಸಮಯ ಬಂದಿದೆ. ಅದುವೇ ನಾವೆಲ್ಲರೂ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ! 30-01-1948ಕ್ಕಾಗಿ ಗೋಡ್ಸೆಗೊಂದು ಥ್ಯಾಂಕ್ಸ್’ ಎಂದು ಬರೆದಿದ್ದರು.
Advertisement
ಈ ಟ್ವೀಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗಿದೆ ಮಾತ್ರವಲ್ಲ, ಎನ್‌ಸಿಪಿ, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಕೂಡ ಚೌಧರಿ ಅವರನ್ನು ಹುದ್ದೆಯಿಂದ ವಜಾ ಮಾಡುವಂತೆ ಆಗ್ರಹಿಸಿವೆ. ಆದರೆ, ಚೌಧರಿ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, ನಾನು ಗಾಂಧೀಜಿಗೆ ಅವಹೇಳನ ಮಾಡಲು ಈ ರೀತಿ ಬರೆದಿರಲಿಲ್ಲ. ನನ್ನ ಟ್ವೀಟ್ ಅನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ.