Advertisement

ಜಂತಕಲ್‌ ಗಣಿಗಾರಿಕೆ ಪ್ರಕರಣ : ಐಎಎಸ್‌ ಅಧಿಕಾರಿ ಬಡೇರಿಯಾ ಬಂಧನ

03:45 AM May 16, 2017 | Team Udayavani |

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣ ರಾಜ್ಯದಲ್ಲಿ ಮತ್ತೂಮ್ಮೆ ಧೂಳೆಬ್ಬಿಸಿದ್ದು, ಜಂತಕಲ್‌ ಗಣಿಗಾರಿಕೆ ಪ್ರಕರಣ ಸಂಬಂಧ ಹಿರಿಯ ಐಎಎಸ್‌ ಅಧಿಕಾರಿ ಗಂಗಾರಾಮ್‌ ಬಡೇರಿಯಾ ಅವರನ್ನು ಸೋಮವಾರ ವಿಶೇಷ ತನಿಖಾ ದಳ ಬಂಧಿಸಿದೆ.

Advertisement

ಮಾಜಿ ಮುಖ್ಯಮಂತ್ರಿಗಳಾದ ಎಚ್‌. ಡಿ. ಕುಮಾರಸ್ವಾಮಿ ಅವರೂ ಭಾಗಿಯಾಗಿದ್ದಾರೆ ಎನ್ನಲಾದ ಈ ಪ್ರಕರಣ ರಾಜ್ಯದಲ್ಲಿ ರಾಜಕೀಯ ಸಂಚಲನ ಮೂಡಿಸಿದೆ. ಇದರೊಂದಿಗೆ,  ರಾಜ್ಯದಲ್ಲಿ ಭಾರೀ ಕೋಲಾಹಲ ಮೂಡಿಸಿದ್ದ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಸಲ್ಲಿಸಿದ್ದ ಅಕ್ರಮ ಗಣಿಗಾರಿಕೆ ವರದಿಗೆ ಮತ್ತೆ ಜೀವ ಬಂದಿದ್ದು, ಪ್ರಕರಣದಲ್ಲಿ ಮೊದಲ ಐಎಎಸ್‌ ಅಧಿಕಾರಿ ಬಂಧನಕ್ಕೊಳಗಾದಂತಾಗಿದೆ.

ಜಂತಕಲ್‌ ಎಂಟರ್‌ಪ್ರೈಸಸ್‌ಗೆ ಅಕ್ರಮವಾಗಿ ಗಣಿಗಾರಿಕೆಗೆ ಅನುಮತಿ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾದ ಸಂದರ್ಭ ಸದ್ಯ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ)ಕಾರ್ಯದರ್ಶಿಯಾಗಿರುವ ಗಂಗಾರಾಮ್‌ ಬಡೇರಿಯಾ ಅವರನ್ನು ಬಂಧಿಸಲಾಗಿದೆ. ಸಿಟಿ ಸಿವಿಲ್‌ ಸೆಷನ್ಸ್‌ ನ್ಯಾಯಾಲಯದ ಆವರಣದಲ್ಲಿರುವ ಎಸ್‌ಐಟಿ ವಿಶೇಷ ಕೋರ್ಟ್‌ಗೆ ಹಾಜರು ಪಡಿಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮೇ 18ರವರೆಗೆ ವಿಶೇಷ ತನಿಖಾ ದಳದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಜಂತಕಲ್‌ ಎಂಟರ್‌ಪ್ರೈಸಸ್‌ ಮಾಲೀಕ ವಿನೋದ್‌ ಗೋಯೆಲ್‌ ಸಲ್ಲಿಸಿದ್ದ ನಕಲಿ ದಾಖಲೆ ಆಧರಿಸಿ ಕಬ್ಬಿಣದ ಅದಿರು ಸಾಗಣೆಗೆ ಈ ಹಿಂದೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರಾಗಿದ್ದ ಬಡೇರಿಯಾ ಅನುಮತಿ ನೀಡಿದ್ದರೆನ್ನುವುದು ಅವರ ಮೇಲಿನ ಆರೋಪ.

2007ರ ಸೆಪ್ಟಂಬರ್‌ನಲ್ಲಿ 1,1100 ಲಕ್ಷ ಮೆಟ್ರಿಕ್‌ ಟನ್‌ ಅದಿರನ್ನು ಅಕ್ರಮವಾಗಿ ಮಾರಾಟ ಮಾಡಲು ಜಂತಕಲ್‌ ಮೈನಿಂಗ್‌ ಕಂಪನಿಯ ಮುಖ್ಯಸ್ಥ ವಿನೋದ್‌ ಗೋಯಲ್‌ಗೆ ಅನುಮತಿ ನೀಡಿದ್ದರು. ಅಲ್ಲದೇ ಇದಕ್ಕೂ ಮೊದಲು ಅಂದರೆ ಜುಲೈನಲ್ಲಿ ಗಂಗಾರಾವ್‌ ಬಡೇರಿಯಾ ಪುತ್ರ ಗಗನ್‌ ಬಡೇರಿಯಾ ಹೆಸರಿನ ಖಾತೆಗೆ ವಿನೋದ್‌ ಗೋಯಲ್‌ 10 ಲಕ್ಷ ರೂಪಾಯಿ ಚೆಕ್‌ ನೀಡಿದ್ದರು. ಇದನ್ನು ಪುತ್ರ ಗಗನ್‌ ಕೂಡ ತಮ್ಮ ಖಾತೆಗೆ ಜಮಾ ಮಾಡಿಕೊಂಡಿದ್ದರು. ಈ ಬಗ್ಗೆ ಎಸ್‌ಐಟಿಗೆ ಸಾಕ್ಷಿ ಸಮೇತ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ವಿಚಾರಣೆಗೆ ಕರೆಸಿ ಗಂಗಾರಾಮ್‌ ಬಡೇರಿಯಾ ಅವರನ್ನು ಬಂಧಿಸಲಾಗಿದೆ.

Advertisement

ಈ ಹಿಂದೆಯೂ ಅವರು ಮೂರು ಬಾರಿ ವಿಶೇಷ ತನಿಖಾ ದಳದ ವಿಚಾರಣೆಗೆ ಹಾಜರಾಗಿದ್ದರು. ಆದರೆ, ಸೂಕ್ತ ಸಾûಾ$Âಧಾರಗಳು ಪತ್ತೆಯಾಗಿರಲಿಲ್ಲ. ಇದೀಗ ಅವರ ಬಲವಾದ ಸಾಕ್ಷ್ಯ ದೊರೆತಿದ್ದರಿಂದ ಬಂಧಿಸಲಾಗಿದೆ. ಆದರೆ, ಪುತ್ರ ಗಗನ್‌ ಬಡೇರಿಯಾ ಅವರನ್ನು ವಶಕ್ಕೆ ಪಡೆಯುವ ಕುರಿತು ಚರ್ಚೆ ನಡೆದಿದ್ದು, ವಿಚಾರಣೆ ಹಾಜರಾಗುವಂತೆ ಸೂಚಿಸುವ ಸಾಧ್ಯತೆಯಿದೆ ಎಂದು ಎಸ್‌ಐಟಿಯ ಮೂಲಗಳು ತಿಳಿಸಿವೆ. 2011ರಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಅವರು, ಬಳ್ಳಾರಿಯ ಜಂತಕಲ್‌ ಮೈನಿಂಗ್‌ ಕಂಪನಿಗೆ ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ, ಜಂತಕಲ್‌ ಮೈನಿಂಗ್‌ ಕಂಪನಿಯ ಮುಖ್ಯಸ್ಥ ವಿನೋದ್‌ ಗೋಯಲ್‌, ಗಂಗಾರಾಮ್‌ ಬಡೇರಿಯಾ ಸೇರಿದಂತೆ 6 ಮಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಏನಿದು ಪ್ರಕರಣ
ಜಂತಕಲ್‌ ಎಂಟರ್‌ಪ್ರೈಸಸ್‌ ಮಾಲೀಕ ವಿನೋದ್‌ ಗೋಯೆಲ್‌ ಅವರು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಕಬ್ಬಿಣದ ಅದಿರು ಸಾಗಣೆಗೆ ಅನುಮತಿ ನೀಡಿದೆ ಎಂಬುದಾಗಿ ಎರಡು ಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ಆ ಪತ್ರಗಳನ್ನು ಆಧರಿಸಿ ಗಂಗಾರಾಮ್‌ ಬಡೇರಿಯಾ ಅವರು ಅದಿರು ಸಾಗಣೆಗೆ ಅವಕಾಶ ನೀಡಿ ಆದೇಶ ನೀಡಿರುತ್ತಾರೆ. ಆದರೆ ಈ ಪತ್ರಗಳ ಸತ್ಯಾಸತ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅರಣ್ಯ ಅಧಿಕಾರಿಗಳು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದಲ್ಲಿ ಪರಿಶೀಲಿಸಿದಾಗ ಆ ರೀತಿಯ ಯಾವುದೇ ಅನುಮತಿ ಪತ್ರ ನೀಡದಿರುವುದು ಬಯಲಾಗುತ್ತದೆ.

ತಕ್ಷಣವೇ ಅಧಿಕಾರಿಗಳು ವಿನೋದ್‌ ಗೋಯೆಲ್‌ ವಿರುದ್ಧ ಚಿತ್ರದುರ್ಗದ ಪೊಲೀಸ್‌ ಠಾಣೆಯೊಂದರಲ್ಲಿ ಪ್ರಕರಣ ದಾಖಲಿಸುತ್ತಾರೆ. ನಂತರ ವಿನೋದ್‌ ಗೋಯೆಲ್‌ ನ್ಯಾಯಾಲಯದಲ್ಲಿ ತಡೆಯಾಜ್ಞೆ ಪಡೆಯುತ್ತಾರೆ. 2014ರಲ್ಲಿ ಪ್ರಕರಣವು ಚಿತ್ರದುರ್ಗ ಪೊಲೀಸರಿಂದ ಗಣಿ ಅಕ್ರಮ ಸಂಬಂಧ ರಚನೆಯಾದ ವಿಶೇಷ ತನಿಖಾ ತಂಡಕ್ಕೆ ವರ್ಗಾವಣೆಯಾಗುತ್ತದೆ. ನಂತರ ತನಿಖೆಯನ್ನು ಚುರುಕುಗೊಳಿಸಿದ ಎಸ್‌ಐಟಿ 2015ರಲ್ಲಿ ವಿನೋದ್‌ ಗೋಯೆಲ್‌ ಪಡೆದಿದ್ದ ತಡೆಯಾಜ್ಞೆ ತೆರವುಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಹಾಗೆಯೇ ಬಾಕಿಯಿದ್ದ ಕೆಲ ತಡೆಯಾಜ್ಞೆ ತಿಂಗಳ ಹಿಂದೆ ತೆರವಾಗಿತ್ತು.

ಆ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡವು ಮತ್ತೆ ನಕಲಿ ದಾಖಲೆ ಪ್ರಕರಣದ ತನಿಖೆಯನ್ನು ಆರಂಭಿಸಿತ್ತು. ಈ ನಡುವೆ ಗಂಗಾರಾಮ್‌ ಬಡೇರಿಯಾ ಪುತ್ರ ಗಗನ್‌ ಬಡೇರಿಯಾ ಅವರಿಗೆ ವಿನೋದ್‌ ಗೋಯೆಲ್‌ 10 ಲಕ್ಷ ರೂ. ಮೊತ್ತದ ಚೆಕ್‌ ನೀಡಿದ್ದ ವಿಚಾರ ಪ್ರಕರಣಕ್ಕೆ ಮಹತ್ತರ ತಿರುವು ನೀಡಿತ್ತು.

ಮತ್ತೆ ಕುಮಾರಸ್ವಾಮಿ ವಿಚಾರಣೆ?
ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಈ ಹಿಂದೆ ವಿಚಾರಣೆಗೆ ಹಾಜರಾಗಿದ್ದರು. ಜತೆಗೆ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಹಾಗಾಗಿ ಅವರನ್ನು ಬಂಧಿಸುವ ಅಥವಾ ವಶಕ್ಕೆ ಪಡೆಯುವ ಅಗತ್ಯವಿಲ್ಲ. ಒಂದು ವೇಳೆ ಅಗತ್ಯವಿದ್ದರೆ ಅವರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತೇವೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಗಂಗಾರಾಮ್‌ ಬಡೇರಿಯಾ
ಗಂಗಾರಾಮ್‌ ಬಡೇರಿಯಾ ಅವರು 1989ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್‌ ಅಧಿಕಾರಿ. ಬೆಳಗಾವಿ, ಕಲಬುರಗಿಯಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ನಂತರ ಹಟ್ಟಿ ಗಣಿ ವಿಭಾಗದ ನಿರ್ದೇಶಕರಾಗಿ, ಕಂದಾಯ ಇಲಾಖೆಯ ಭೂಮಿ ವಿಭಾಗದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟ್‌ ನಿರ್ದೇಶನ
2011ರಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಅವರು, 14,200 ಮೆಟ್ರಿಕ್‌ ಟನ್‌ ಅದಿರು ಮಾರಾಟ ಮಾಡಲು ಜಂತಕಲ್‌ ಮೈನಿಂಗ್‌ ಕಂಪನಿಗೆ ಅಕ್ರಮವಾಗಿ ಪರವಾನಿಗೆ ನೀಡಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ಸಂಬಂಧ ವಿಚಾರಣೆ ತೀವ್ರಗೊಳಿಸಿದ ಅಂದಿನ ಲೋಕಾಯುಕ್ತ ನ್ಯಾ. ಸಂತೋಷ್‌ ಹೆಗ್ಡೆ ಅವರು 1,700 ಪುಟಗಳ ಸಮಗ್ರ ವರದಿ ಸಿದ್ದ ಪಡಿಸಿ ಬಿಡುಗಡೆ ಮಾಡಿದ್ದರು. ಅಲ್ಲದೇ ಇದರಿಂದ ರಾಜ್ಯ ಸರ್ಕಾರಕ್ಕೆ 31, 01, 89, 185 ಕೋಟಿ ನಷ್ಟವಾಗಿದೆ ಎಂದು ಉಲ್ಲೇಖೀಸಿದ್ದರು. ಈ ವರದಿಯಲ್ಲಿ ಗಂಗಾರಾಮ್‌ ಬಡೇರಿಯಾ ಅವರ ಹೆಸರು ಕೂಡ ಇತ್ತು. ಈ ವರದಿಯನ್ನು ಅಧರಿಸಿ ದೂರುದಾರ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಾಹಂ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾ. ಪಿನಾಕಿ ಚಂದ್ರ ಗೋಷ್‌ ಮತ್ತು ರೋಹಿನಟನ್‌ ಎಫ್ ನಾರಿಮನ್‌ನ ದ್ವಿಸದಸ್ಯ ಪೀಠ, ಪ್ರಕರಣ ವಿಚಾರಣೆಯನ್ನು ರಾಜ್ಯ ಎಸ್‌ಐಟಿ ತನಿಖೆ ನಡೆಸಬೇಕು. ಬಳಿಕ ತನಿಖೆಯ ಸಂಪೂರ್ಣ ವರದಿಯನ್ನು ಮೂರು ತಿಂಗಳ ಒಳಗೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು. ಜತೆಗೆ ಈ ಪ್ರಕರಣದಲ್ಲಿ ಯಾವುದೇ ಸಂದರ್ಭದಲ್ಲೂ ಕೆಳ ಹಂತದ ನ್ಯಾಯಾಲಯಗಳ ಆದೇಶ ನೀಡುವಂತಿಲ್ಲ. ಸುಪ್ರೀಂ ಕೋರ್ಟ್‌ ಆದೇಶವೇ ಅಂತಿಮ ಎಂದು ಎಚ್ಚರಿಕೆ ನೀಡಿತ್ತು.

2011ರಿಂದ 2017ರವರೆಗೆ ಕಾನೂನು ಹೋರಾಟ ನಡೆಸಿದಕ್ಕೆ ಸಿಕ್ಕ ಜಯವಿದು. ತಪ್ಪು ಎಸಗಿದವರು ನ್ಯಾಯಾಲಯದ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ಗಂಗಾರಾವ್‌ ಬಡೇರಿಯಾ ಅವರ ಬಂಧನವೇ ಸಾಕ್ಷಿ. ಎಸ್‌ಐಟಿ ಹಾಗೂ ಸುಪ್ರೀಂ ಕೋರ್ಟ್‌ನ ವಿಚಾರಣೆಯ ನಡೆ ಸಂತೋಷ ಕೊಟ್ಟಿದೆ. ಪ್ರಕರಣದಲ್ಲಿ ಇನ್ನಷ್ಟು ಮಂದಿ ಬಂಧನವಾಗುವ ಸಾಧ್ಯತೆಯಿದೆ.
-ಟಿ.ಜೆ.ಅಬ್ರಾಹಂ, ಸಾಮಾಜಿಕ ಕಾರ್ಯಕರ್ತ, ಪ್ರಕರಣದ ದೂರುದಾರರು

Advertisement

Udayavani is now on Telegram. Click here to join our channel and stay updated with the latest news.

Next