Advertisement

ಬಾಲ್ಯದಿಂದಲೇ ಐಎಎಸ್‌ ಸಾಧನೆ ಆಸೆ ಇತ್ತು: ಧ್ಯಾನ್‌ಚಂದ್ರ

12:38 PM Jun 26, 2017 | Team Udayavani |

ಹೊನ್ನಾಳಿ: ನಮ್ಮ ತಂದೆ, ದೊಡ್ಡಪ್ಪ ಇಂಜಿನಿಯರ್‌, ತಾಯಿ ಶಿಕ್ಷಕಿ ಇವರೆಲ್ಲರ ಮಾರ್ಗದರ್ಶನ ಹಾಗೂ  ಬಾಲ್ಯದಿಂದಲೇ ಐಎಎಸ್‌ ಪಾಸಾಗುವ ಉತ್ಕಟ ಆಸೆ ನನ್ನಲ್ಲಿ ಹುದುಗಿ, ಚಿಗುರೊಡೆದು ಹೆಮ್ಮರವಾಗಿ ಬೆಳೆದ ಕಾರಣ ನಾನು ಇಂದು ದೇಶದ ಪ್ರತಿಷ್ಠಿತ ಐಎಎಸ್‌ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣನಾದೆ ಎಂದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಗ್ರಾಮದ ಎಚ್‌.ಎಂ. ಧ್ಯಾನ್‌ಚಂದ್ರ ಹೇಳಿದರು.

Advertisement

 ಪಟ್ಟಣದ ತಮ್ಮ ಸಂಬಧಿಕರಾದ ವರ್ತಕ ಎಚ್‌.ಎ. ಉಮಾಪತಿ ಅವರ  ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಪಂಚದಲ್ಲಿ ಮನುಷ್ಯನಿಗೆ ಯಾವುದು ಅಸಾಧ್ಯವಲ್ಲ. ಸಾಧಿಸಬೇಕು ಎನ್ನುವ ಛಲವೊಂದಿದ್ದರೆ ಏನನ್ನಾದರೂ ಸಾಧಿ  ಸಬಹುದು. ಅದಕ್ಕೆ ಸತತ ಶ್ರಮ, ಸಹಕಾರ ಅಗತ್ಯ ಎಂದು ಹೇಳಿದರು. 

ಬಾಲ್ಯದಲ್ಲಿಯೇ ಐಎಎಸ್‌ ಆಗುವ ಮನಸ್ಸು ಹುಟ್ಟಿದ್ದು ಹೇಗೆ ಎನ್ನುವ ಪ್ರಶ್ನೆಗೆ, ನಾನು 4, 5ನೇ ತರಗತಿಯಲ್ಲಿ ಅಭ್ಯಾಸ ಮಾಡುವ ಸಂದರ್ಭದಲ್ಲಿ ನನ್ನ ತಂದೆ ಹಾಲೇಶಪ್ಪ ಉನ್ನತ ಅಧಿಕಾರಿಗಳಾದ ಉಪ ವಿಭಾಗಾಧಿಕಾರಿ, ಜಿಲ್ಲಾ ಧಿಕಾರಿಗಳ ಕಚೇರಿಗೆ ಕರೆದೊಯ್ಯುತ್ತಿದ್ದರು. ಕಚೇರಿಗಳ  ವ್ಯವಸ್ಥೆ, ಜಿಲ್ಲಾಧಿಕಾರಿಗಳ ಬಗ್ಗೆ ಗಮನ ಹರಿಸುತ್ತಿದ್ದೆ.

ನನ್ನ ತಂದೆಯವರು ಒಮ್ಮೊಮ್ಮೆ ನೀನು ಕೂಡಾ ಓದಿ ಅಂತಹ ಅಧಿಕಾರಿಯಾಗಬೇಕು ಎನ್ನುತ್ತಿದ್ದರು. ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಮುಂದೆ ಸಾಗಿದೆ ಎಂದರು. ಸಮಾಜ ಸೇವೆ ನನ್ನ ಮುಖ್ಯ ಗುರಿ. ಅದರಲ್ಲೂ ಶೋಷಿತವರ್ಗವಾದ ಮಹಿಳೆಯರ ಕಡೆ ಹೆಚ್ಚು ಗಮನ ಹರಿಸುವ ಗುರಿಯನ್ನಿಟ್ಟುಕೊಂಡಿದ್ದೇನೆ, ಮೊದಲು ನಾನು ಕೆಲಸ ಮಾಡುವ ಸ್ಥಳದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತೇನೆ.

ಕಾನೂನು ಮತ್ತು ಆಡಳಿತ್ಮಾಕ ಜವಾಬ್ದಾರಿಗಳನ್ನು ನಿಯಮಬದ್ಧವಾಗಿ ನಿಭಾಹಿಸುವ ಹೊಣೆ ನನ್ನದಾಗಿದೆ ಎಂದರು. ನಾನು ಐಎಎಸ್‌ ಆಗಲು ಸಹಕರಿಸಿದ ನನ್ನ ತಾಯಿ,ತಂದೆ, ದೊಡ್ಡಪ್ಪ ಇವರುಗಳಿಗೆ ಚಿರಋಣಿಯಾಗಿದ್ದೇನೆ. ನನ್ನ ಆರಂಭದ ಸೇವೆಗೆ ನನ್ನ ಮಾತೃ ರಾಜ್ಯ ಕರ್ನಾಟಕ ನಂತರ ಆಂಧ್ರಪ್ರದೇಶ ರಾಜ್ಯವನ್ನು ಆರಿಸಿಕೊಂಡಿದ್ದೇನೆ ಎಂದು ಹೇಳಿದರು. 

Advertisement

ಧ್ಯಾನ್‌ಚಂದ್ರ ಅವರ ದೊಡ್ಡಪ್ಪ ಇಂಜಿನಿಯರ್‌ ಎಸ್‌.ಎಲ್‌. ಆನಂದಪ್ಪ ಮಾತನಾಡಿ, ನಮ್ಮ ಕುಟುಂಬದಲ್ಲಿ ವೈದ್ಯರು, ಇಂಜಿನಿಯರಗಳು ಇದ್ದಾರೆ. ಕುಟುಂಬದಿಂದ ಒಬ್ಬರು ಐಎಸ್‌  ಆಗಬೇಕು ಎನ್ನುವ ಮಹಾದಾಸೆ ಇತ್ತು. ಅದನ್ನು ನನ್ನ ತಮ್ಮನ ಮಗ ಈಡೇರಿಸಿದ್ದಾನೆ. ಇದು ಅತ್ಯಂತ ಸಂತಸ ಕ್ಷಣ ಎಂದು ತಿಳಿಸಿದರು. 

ಎಚ್‌.ಎ. ಉಮಾಪತಿ ಮಾತನಾಡಿ, ನಮ್ಮ ಸಬಂಧಿ ಒಬ್ಬ ಐಎಎಸ್‌ನಂತಹ ಪ್ರತಿಷ್ಠಿತ ಪರೀಕ್ಷೆಯಲ್ಲಿ ದೇಶಕ್ಕೆ 47ನೆ ಹಾಗೂ ರಾಜ್ಯಕ್ಕ 4ನೇ ಸ್ಥಾನ ಪಡೆದಿರುವುದು ನಮ್ಮ ತಾಲೂಕಿಗೆ  ಹೆಮ್ಮೆಯ ವಿಷಯ. ಇಂತಹ ಯುವಕನ ಓದಿನ ಸಾಧನೆ ಇತರ ಯುವಕರಿಗೆ ಮಾದರಿಯಾಗಬೇಕು ಎಂದು ಹೇಳಿದರು. ಧ್ಯಾನಚಂದ್ರ ಅವರ ತಂದೆ ಹಾಲೇಶಪ್ಪ, ತಾಯಿ ಮಮತಾ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next