Advertisement
ಬೆಟ್ಟ ಮತ್ತು ಕಣಿವೆಗಳಿಂದ ಆವೃತವಾದ ಪ್ರದೇಶದಲ್ಲಿರುವ ಲೇಹ್ ಹಾಗೂ ಥೋಯ್ಸ್ ಸೇನಾವಾಯುನೆಲೆಗಳಲ್ಲಿ ಯುದ್ಧ ವಿಮಾನ ಅಥವಾ ಸೇನಾ ಸಾಮಾಗ್ರಿ ಸಾಗಾಟದ ವಿಮಾನವೊಂದನ್ನು ಇಳಿಸಬೇಕಾದರೆ ಆ ಪೈಲಟ್ ಗೆ ಅಪರಿಮಿತ ಚಾಕಚಕ್ಯತೆ ಹಾಗೂ ನಿಖರ ಲೆಕ್ಕಾಚಾರಗಳ ಅಗತ್ಯವಿರುತ್ತದೆ. ಆದರೂ ಕೆಲವೊಮ್ಮೆ ಕೆಲವು ಪೈಲಟ್ ಗಳ ಈ ಎಲ್ಲಾ ಲೆಕ್ಕಾಚಾರಗಳೂ ಕೈಕೊಡುವುದೂ ಉಂಟು. ಪ್ರತೀಕೂಲ ಹವಾಮಾನ ಸೇರಿದಂತೆ ಇನ್ನಿತರ ವ್ಯತಿರಿಕ್ತ ಸನ್ನಿವೇಶಗಳಲ್ಲಿ ಇಂತಹ ದುರ್ಗಮ ವಾಯುನೆಲೆಗಳಲ್ಲಿ ವಿಮಾನವೊಂದನ್ನು ಇಳಿಸಲು ನುರಿತ ಪೈಲಟ್ ಸಹ ಅಧೀರಗೊಳ್ಳುವ ಸನ್ನಿವೇಶಗಳು ಎದುರಾಗಬಹುದು.
ವಾಯುಪಡೆಯ ಐಎಲ್-76 ಎಂ.ಡಿ. ಎಂಬ ದೈತ್ಯ ವಿಮಾನವನ್ನು ಏಪ್ರಿಲ್ 30ರಂದು ಲೇಹ್ /ಥೋಯ್ಸ್ ವಾಯುನೆಲೆಯಲ್ಲಿ ಸುರಕ್ಷಿತವಾಗಿ ಇಳಿಸುವ ಮೂಲಕ ಕ್ಯಾಪ್ಟನ್ ಛಾಬ್ರಾ ಅವರು ಭಾರತೀಯ ವಾಯುಪಡೆಯಲ್ಲಿ ಈ ಅಪರೂಪದ ಸಾಧನೆ ಮಾಡಿದ ಪ್ರಪ್ರಥಮ ಸಾಧಕರಾಗಿ ಮೂಡಿಬಂದಿದ್ದಾರೆ. ಈ ಎರಡೂ ವಾಯುನೆಲೆಗಳು ಸಮುದ್ರಮಟ್ಟದಿಂದ ಬರೋಬ್ಬರಿ ಹತ್ತು ಸಾವಿರ ಅಡಿಗಳಷ್ಟು ಎತ್ತರದಲ್ಲಿವೆ. ಮತ್ತು ಈ ಎರಡೂ ವಾಯುನೆಲೆಗಳ ಸ್ವರೂಪ ಸವಾಲಿನಿಂದ ಕೂಡಿರುವುದರಿಂದ ಇವುಗಳನ್ನು ಪ್ರಪಂಚದ ಕಠಿಣ ವಾಯುನೆಲೆಗಳೆಂದೇ ಗುರುತಿಸಲಾಗುತ್ತಿದೆ.
Related Articles
Advertisement
ಡೆಹ್ರಾಡೂನ್ ಮೂಲದವರಾದ ಕ್ಯಾಪ್ಟನ್ ಛಾಬ್ರಾ ಅವರು ಇಲ್ಲಿನ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನ ಹಳೇವಿದ್ಯಾರ್ಥಿಯಾಗಿದ್ದಾರೆ ಹಾಗೂ ಖಡಕ್ವಾಸಲ್ಲಾ ರಾಷ್ಟ್ರೀಯ ಭದ್ರತಾ ಅಕಾಡೆಮಿಯಲ್ಲಿ ತರಬೇತು ಹೊಂದಿದವರಾಗಿದ್ದಾರೆ.
1992ರಲ್ಲಿ ಭಾರತೀಯ ವಾಯುಸೇನೆಯ ಸಾಗಾಟ ವಿಭಾಗಕ್ಕೆ ಸೇರ್ಪಡೆಗೊಂಡ ಕ್ಯಾಷ್ಟನ್ ಛಾಬ್ರಾ ಅವರು ಪ್ರಾರಂಭದಲ್ಲಿ ಡಬಲ್ ಎಂಜಿನ್ ವಿಮಾನವಾಗಿರುವ ಎ.ಎನ್.-32 ಅನ್ನು ಚಲಾಯಿಸುತ್ತಿದ್ದರು. ಈ ವಿಮಾನವನ್ನು ಉತ್ತರಾಖಂಡದ ಬೆಟ್ಟ ಗುಡ್ಡಗಳ ದುರ್ಗಮ ಪ್ರದೇಶಗಳಲ್ಲಿ ಮತ್ತು ಈಶಾನ್ಯ ರಾಜ್ಯಗಳಲ್ಲಿ ಇವರು ಹಾರಿಸುತ್ತಿದ್ದರು. ಬಳಿಕ ತಮ್ಮ ಅನುಭವದ ನೆಲೆಯಲ್ಲಿ ಕ್ಯಾಪ್ಟನ್ ಛಾಬ್ರಾ ಅವರು ಐ.ಎಲ್.-76/78 ದೈತ್ಯ ವಿಮಾನಗಳಿಗೆ ಪೈಲಟ್ ಆಗಿ ಭಡ್ತಿ ಹೊಂದಿದರು. ಸದ್ಯ ಇವರು ಐ.ಎಲ್.-78 ದಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
8500 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿರುವ ಗ್ರೂಪ್ ಕ್ಯಾಪ್ಟನ್ ಛಾಬ್ರಾ ಅವರು ಐ.ಎಲ್.-76/78 ವಿಮಾನಗಳಲ್ಲೇ 5000 ಗಂಟೆಗಳ ಹಾರಾಟದ ಅನುಭವವನ್ನು ಪಡೆದುಕೊಂಡಿದ್ದಾರೆ. ಇದೀಗ ಕ್ಯಾಪ್ಟನ್ ಛಾಭ್ರಾ ಅವರ ಈ ವಿಶೇಷ ಸಾಧನೆಯನ್ನು ಭಾರತೀಯ ವಾಯುಸೇನೆ ಗುರುತಿಸಿ ಅವರ ಸೇವೆಯನ್ನು ಕೊಂಡಾಡಿದೆ.
‘ದೇಶದ ರಕ್ಷಣೆಯಲ್ಲಿ ಗ್ರೂಪ್ ಕ್ಯಾಪ್ಟನ್ ಎಸ್.ಎಸ್. ಛಾಭ್ರಾ ಅವರು ಸಲ್ಲಿಸಿರುವ ಸೇವೆ ಅಮೂಲ್ಯವಾದುದು ಮತ್ತು ದೇಶದ ಈಶಾನ್ಯ ಭಾಗಗಳಲ್ಲಿ ನಮ್ಮ ಸಶಸ್ತ್ರ ದಳಗಳನ್ನು ಇಳಿಸುವಲ್ಲಿ ಇವರು ಸ್ಥಿರ ಸಾಧನೆಯನ್ನು ತೋರುತ್ತಿದ್ದಾರೆ’ ಎಂದು ಐ.ಎ.ಎಫ್. ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದೆ.
ಗಡಿಯಲ್ಲಿ ನಿಂತು ದೇಶ ಕಾಯುವ ಯೋಧರಷ್ಟೇ ಪ್ರಾಮುಖ್ಯತೆ, ಯೋಧರನ್ನು ಸಕಾಲದಲ್ಲಿ ನಿಗದಿತ ಪ್ರದೇಶಗಳಿಗೆ ಸುರಕ್ಷಿತವಾಗಿ ತಲುಪಿಸುವ ಮತ್ತು ನಮ್ಮ ದೇಶದ ದುರ್ಗಮ ಗಡಿಭಾಗಗಳಿಗೆ ಸೇನಾ ಸಾಮಾಗ್ರಿಗಳನ್ನು ನಿಗದಿತ ಸಮಯಕ್ಕೆ ತಲುಪಿಸುವ ಸೇನಾ ವಿಮಾನಗಳ ಪೈಲಟ್ ಗಳಿಗೂ ಅಷ್ಟೇ ಪ್ರಾಮುಖ್ಯತೆ ಇದೆ. ಇಂತಹ ದುರ್ಗಮ ವಾಯುನೆಲೆಗಳಲ್ಲಿ ಒಂದಾಗಿರುವ ಲೇಹ್ ಹಾಗೂ ಥೋಯ್ಸ್ ವಾಯುನೆಲೆಗಳಲ್ಲಿ ಒಂದು ಸಾವಿರ ಬಾರಿ ಸೇನಾ ವಿಮಾನವನ್ನು ಇಳಿಸಿರುವ ಈ ಸಾಧಕನಿಗೆ ನಮ್ಮದೊಂದು ‘ಬಿಗ್ ಸೆಲ್ಯೂಟ್’.