Advertisement

ಜೈಶಾಸುರ ಸಂಹಾರ ಜೈ ಹಿಂದ್‌

12:30 AM Feb 27, 2019 | |

ಪ್ರತೀಕಾರ ಎಂದರೆ ಏನು ಎಂಬುದನ್ನು ಭಾರತ ಸೇನೆಯು ಮಂಗಳವಾರ ಮುಂಜಾನೆ ಪಾಕಿಸ್ಥಾನ ಮೂಲದ ಉಗ್ರರಿಗೆ ತೋರಿಸಿಕೊಟ್ಟಿದೆ. ಪುಲ್ವಾಮಾದಲ್ಲಿ 12 ದಿನಗಳ ಹಿಂದೆ ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರು ನಡೆಸಿದ ದಾಳಿಗೆ ಮುಯ್ಯಿ ತೀರಿಸಿಕೊಂಡಿದೆ. ಪಾಕಿಸ್ಥಾನದ ಭೂ ಪ್ರದೇಶಕ್ಕೆ ನುಗ್ಗಿದ ಭಾರತೀಯ ಸೇನೆ 21 ನಿಮಿಷಗಳ ಕಾರ್ಯಾಚರಣೆಯಲ್ಲಿ ಉಗ್ರರ ಮೂರು ಕೇಂದ್ರಗಳನ್ನು ಚಿಂದಿ ಮಾಡಿದೆ. ಸೇನೆಯ ದಿಟ್ಟ ಕ್ರಮಕ್ಕೆ ದೇಶಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ.

Advertisement

ಹೊಸದಿಲ್ಲಿ: ಪುಲ್ವಾಮಾದಲ್ಲಿನ 40 ಯೋಧರ ಬಲಿದಾನಕ್ಕೆ ಪ್ರತಿಯಾಗಿ ಪಾಕಿಸ್ಥಾನದ “ಪಾಪಿ’ಗಳ ಎದೆಗೇ ಬಾಂಬ್‌ ಹಾಕಿರುವ ಭಾರತೀಯ ವಾಯುಪಡೆಯು ಜೈಶ್‌ ರಕ್ತಪಿಪಾಸುಗಳನ್ನು ಸದೆಬಡಿದಿದೆ. ಮಂಗಳವಾರ ಮುಂಜಾವ ಪಾಕಿಸ್ಥಾನದ ಬಾಲಕೋಟ್‌, ಪಾಕ್‌ ಆಕ್ರಮಿತ ಕಾಶ್ಮೀರ ದಲ್ಲಿರುವ ಮುಜಾಫ‌ರಾಬಾದ್‌ ಮತ್ತು ಚಕೋಟಿಯಲ್ಲಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿರುವ ವಾಯುಸೇನೆಯು ಜೈಶ್‌-ಎ-ಮೊಹಮ್ಮದ್‌ ಉಗ್ರರ ಅಡಗುದಾಣಗಳ ಮೇಲೆ ಬಾಂಬ್‌ ಹಾಕಿದೆ. ಈ ಸಂದರ್ಭದಲ್ಲಿ ಕನಿಷ್ಠ 350 ಉಗ್ರರು ಸತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ಮುಂಜಾವ 3.45ರಿಂದ 3.53ರ ವರೆಗೆಪಾಕ್‌ನಲ್ಲಿರುವ ಬಾಲಕೋಟ್‌ ಮೇಲೆ ಮೊದಲ ದಾಳಿ. ಇಲ್ಲಿ ಜೈಶ್‌ ಉಗ್ರ ಸಂಘಟನೆಯ ತರ ಬೇತಿ ಶಾಲೆ ಇದ್ದು, ಇದನ್ನು ಗುರಿಯಾಗಿಸಿ ದಾಳಿ ನಡೆಸಲಾಯಿತು. ನಿದ್ದೆಯಲ್ಲಿದ್ದ ಉಗ್ರರೆಲ್ಲರೂ ಒಂದೇ ಬಾರಿಗೆ ಸರ್ವನಾಶವಾದರು. ಇದಾದ ಬಳಿಕ 3.48ರಿಂದ 3.55ರ ವರೆಗೆ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಮುಜಾಫ‌ರಾಬಾದ್‌ ಮತ್ತು 3.55ಕ್ಕೆ ಚಕೋಟಿಯಲ್ಲಿ ದಾಳಿ ನಡೆಯಿತು. ವಿಶೇಷವೆಂದರೆ, 1971ರ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ವಾಯುಪಡೆ, ಗಡಿ ನಿಯಂತ್ರಣ ರೇಖೆ ದಾಟಿ ಹೋಗಿ ರಕ್ಕಸ ಉಗ್ರರನ್ನು ಹತ ಮಾಡಿದೆ. ಕಾರ್ಯಾಚರಣೆಗೆ ಭಾರತ ವಾಯು ಪಡೆಯ ಹಳೇ ಹುಲಿ, ಮಿರಾಜ್‌ 2000 ಯುದ್ಧ ವಿಮಾನಗಳನ್ನು ಬಳಸಿಕೊಳ್ಳಲಾಗಿದೆ. ಒಟ್ಟು 12 ಸಮರ ವಿಮಾನ ಗಳು ಈ ದಾಳಿಯಲ್ಲಿ ಭಾಗಿಯಾಗಿವೆ.

ಪಾಕ್‌ ಗೊಂದಲದ ಹೇಳಿಕೆ
ಇಡೀ ದಿನ ತೀರಾ ಬೆದರಿದಂತೆ ಕಂಡು ಬಂದದ್ದು ಪಾಕಿಸ್ಥಾನ ಸರಕಾರ ಮಾತ್ರ. ಬೆಳ್ಳಂಬೆಳಗ್ಗೆಯೇ ಪಾಕ್‌ ಸೇನೆ ಭಾರತೀಯ ವಾಯು ಸೇನೆಯ ದಾಳಿ ಬಗ್ಗೆ ಟ್ವೀಟ್‌ ಮಾಡುತ್ತಿದ್ದಂತೆ, ಇಡೀ ಪಾಕಿಸ್ಥಾನ ಸರಕಾರವೇ ದಿಢೀರೆಂದು ಎದ್ದು ಕುಳಿತಿತು. ಅದರಲ್ಲೂ ಭಾರತ ಇಷ್ಟು ಬೇಗ ಪ್ರತೀಕಾರಕ್ಕೆ ಮುಂದಾಗುತ್ತದೆ ಎಂಬ ಅರಿವು ಇಲ್ಲದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, ಇನ್ನೂ ಶಾಂತಿಯ ಮಾತುಗಳನ್ನಾಡುತ್ತಿರುವ ಹೊತ್ತಿಗೆ ಭಾರತ ದಾಳಿ ನಡೆಸಿಬಿಟ್ಟಿದೆ ಎಂದು ಬಡಬಡಾಯಿಸಿದರು. ನಾವೂ ಯುದ್ಧಕ್ಕೆ ಸಿದ್ಧರಿದ್ದೇವೆ, ನಾಗರಿಕರೇ ತಯಾರಾಗಿ ಎಂದು ಹೇಳಿಬಿಟ್ಟರು.  ಪಾಕ್‌ ಸೇನೆಯಂತೂ, ನಮ್ಮ ಮೇಲೆ ದಾಳಿಯೇ ಆಗಿಲ್ಲ ಎಂದು ಬೆಳಗ್ಗೆ ಹೇಳಿದರೆ ಸಂಜೆ ದಾಳಿ ನಡೆದಿರುವುದು ಹೌದು ಎಂದಿತು. 

ಸುರಕ್ಷಿತ ಕೈಗಳಲ್ಲಿ ದೇಶವಿದೆ
ಭಾರತ ದೇಶ ಅತ್ಯಂತ ಸುರಕ್ಷಿತ ಕೈಗಳಲ್ಲಿದೆ ಮತ್ತು ದೇಶ ಇತರರ ಮುಂದೆ ತಲೆ ಬಾಗುವಂತಾಗಲು ಅವಕಾಶ ನೀಡುವುದೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಾರಿದ್ದಾರೆ. ಸರ್ಜಿಕಲ್‌ ದಾಳಿಯಾದ ಅನಂತರ ರಾಜಸ್ಥಾನದ ಚುರುವಿನಲ್ಲಿ ನಡೆದ ರ್ಯಾಲಿಯಲ್ಲಿ ಅವರು ಈ ಭರವಸೆ ನೀಡಿದರು. 2014ರ ಚುನಾವಣೆಯಲ್ಲಿ ಗೆದ್ದ ಬಳಿಕ ನನ್ನ ದೇಶವನ್ನು ನಾಶ ಮಾಡಲು ಅವಕಾಶ ಕೊಡುವುದಿಲ್ಲ, ಅದು ಸ್ಥಗಿತಗೊಳ್ಳಲು ಬಿಡುವುದಿಲ್ಲ. ನನ್ನ ಮಾತೃಭೂಮಿ ಯಾವುದೇ ಕಾರಣಕ್ಕೂ ಸೋಲೊಪ್ಪಿಕೊಳ್ಳಲು ಬಿಡುವುದಿಲ್ಲ ಎಂದಿದ್ದೆ. ಅದನ್ನೇ ನಾನು ಪುನರುಚ್ಚರಿಸುತ್ತೇನೆ’ ಎಂದು ಹೇಳಿದರು. ಆದರೆ ಚುರುವಿನ ಕಾರ್ಯಕ್ರಮದಲ್ಲಿ ದಾಳಿಯ ಬಗ್ಗೆ ಯಾವುದೇ ನೇರ ಪ್ರಸ್ತಾವ ಮಾಡಲಿಲ್ಲ. 

Advertisement

ಸಂಜೆ ಹೊಸದಿಲ್ಲಿಯಲ್ಲಿ ಇಸ್ಕಾನ್‌ ವತಿಯಿಂದ 670 ಪುಟಗಳ ಮತ್ತು 800 ಕೆ.ಜಿ. ತೂಕದ ಬೃಹತ್‌ ಭಗವದ್ಗೀತೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಮಾನವತೆಯನ್ನು ಶತ್ರುಗಳಿಂದ ಮತ್ತು ರಾಕ್ಷಸೀ ಶಕ್ತಿಗಳಿಂದ ರಕ್ಷಿಸಲು ಯಾವತ್ತೂ ದೈವಿಕ ಶಕ್ತಿ ಇರುತ್ತದೆ. ಅಂಥ ಶಕ್ತಿಗಳಿಗೆ ನಾವು ಕೊಡುವ ಸಂದೇಶ ಇದುವೇ’ ಎಂದರು. ಎಲ್ಲ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿಯೇ ಉತ್ತರ ಇದೆ ಎಂದು ಪ್ರಧಾನಿ ಹೇಳಿದರು.

ಮುಂಜಾನೆ 3.30ರ ರಹಸ್ಯ
ಅಷ್ಟಕ್ಕೂ ಪಾಕಿಸ್ಥಾನದ ವಿರುದ್ಧ ದಾಳಿ ನಡೆಸಲು ಬೆಳಗಿನ ಜಾವ 3.30ರ ಸಮಯವನ್ನೇ ಭಾರತ ಆಯ್ಕೆ ಮಾಡಿಕೊಂಡಿದ್ದೇಕೆ ಎಂಬುದರ ಹಿಂದೆಯೂ ಒಂದು ಸ್ವಾರಸ್ಯಕರ ವಿಚಾರವೊಂದಿದೆ. ಅದು ಯಾವುದೇ ದೇಶವಾಗಿ ರಲಿ, ಬೆಳಗಿನ ಜಾವ 3.30ರಿಂದ 4 ಗಂಟೆಯ ಹೊತ್ತು ಕೊಂಚ ಮಂಪರಿನದ್ದು. ಇಲ್ಲಿಯತನಕ ಏನೂ ಆಗಲಿಲ್ಲವಲ್ಲ ಎಂಬ ಆಲಸ್ಯವೇ ದೇಹಕ್ಕೆ ಸ್ವಲ್ಪ ವಿಶ್ರಾಂತಿ ಕೋರುತ್ತದೆ ಎಂಬುದು ಸಾಮಾನ್ಯ ಅಭಿಪ್ರಾಯ. ಹಾಗೆಯೇ, ಪಾಕ್‌ಸೇನೆ ಎಚ್ಚೆತ್ತುಕೊಳ್ಳುವ ಹೊತ್ತಿಗೆ “ಕೆಲಸ ಮುಗಿಸಿ’ ಬರಬಹುದು ಎಂಬ ಲೆಕ್ಕಾಚಾರದಲ್ಲೇ ದಾಳಿ ನಡೆಸಲಾಯಿತು.

ಇತಿಹಾಸದಲ್ಲಿ ಬೆಳಗಿನ ಜಾವದ ಕಾರ್ಯಾಚರಣೆಗಳು ಅತೀ ಹೆಚ್ಚು ಯಶಸ್ವಿಯಾಗಿವೆ. ಈ ಹಿಂದೆ ಅಮೆರಿಕದ ಮಿಡ್‌ವೇ ಅಟೋಲ್‌ ಮೇಲೆ ಜಪಾನ್‌ ದಾಳಿ ನಡೆಸಿದ್ದೂ ಬೆಳಗಿನ ಜಾವ 4 ಗಂಟೆ ಸುಮಾರಿಗೆ. ಎರಡನೇ ಮಹಾಯುದ್ಧದ ವೇಳೆ ಜರ್ಮನಿ ನಡೆಸಿದ್ದ “ಬ್ಯಾಟಲ್‌ ಆಫ್ ಬಲ್ಜ್’ನ ಅನೇಕ ಸಂಘಟಿತ ದಾಳಿಗಳು ನಡೆದಿದ್ದೂ ಬೆಳಗಿನ ಜಾವದ ಸಮಯದಲ್ಲೇ. ಇನ್ನು, ಬ್ರಿಟಿಷ್‌ ಹ್ಯಾರಿಯರ್‌ಗಳು ದಕ್ಷಿಣ ಜಾರ್ಜಿಯಾದ ಫಾಲ್ಕ್ಲ್ಯಾಂಡ್‌ ಪಡೆಗಳ ಮೇಲೆ ದಾಳಿ ನಡೆಸಿದ್ದು ಹೆಚ್ಚಾ ಕಡಿಮೆ ಇದೇ ವೇಳೆಯಲ್ಲೇ. ಅಮೆರಿಕದ ವಿಶೇಷ ಪಡೆಗಳ ಮೇಲೆ ವಿಯೆಟ್ನಾಂನ ತೀವ್ರ ವಾದಿಗಳ ಗುಂಪಾದ “ವೆಯೆಟ್‌ ಕಾಂಗ್‌’ ದಾಳಿ ನಡೆಸಿದ್ದು ಇಂಥ ನಸುಕಿಗೂ ಮುನ್ನದ ಅವಧಿಯಲ್ಲಿ.

ಪಾಕ್‌ ಎಚ್ಚೆತ್ತಾಗ ಎಲ್ಲ ಮುಗಿದಿತ್ತು
ಇಡೀ ಕಾರ್ಯಾಚರಣೆ ಕೇಂದ್ರ ಮತ್ತು ಪಶ್ಚಿಮ ಕಮಾಂಡ್‌ಗಳ ಹೊಂದಾಣಿಕೆಯಲ್ಲಿ ನಡೆದಿದೆ. ಯುದ್ಧ ವಿಮಾನಗಳು ಮತ್ತು ಇತರ ವಾಹಕಗಳು ಪಶ್ಚಿಮ ಮತ್ತು ಕೇಂದ್ರ ಕಮಾಂಡ್‌ ನೆಲೆಗಳಿಂದ ಏಕಕಾಲಕ್ಕೆ ಜಿಗಿದಿವೆ.  ಈ ತಂತ್ರಗಾರಿಕೆ ಯಾವ ಮಟ್ಟದಲ್ಲಿ ಯಶಸ್ವಿಯಾಗಿದೆ ಎಂದರೆ, ಈ ಎಲ್ಲ ವಿಮಾನಗಳು ಏಕೆ ಮತ್ತು ಎಲ್ಲಿಗೆ ಹೋಗುತ್ತಿವೆ ಎಂಬುದನ್ನು ಅರಿಯುವಲ್ಲಿ ಪಾಕಿಸ್ಥಾನ ಸಂಪೂರ್ಣ ಸುಸ್ತಾಗಿತ್ತು. ಇವುಗಳನ್ನು ಬೆನ್ನಟ್ಟಬೇಕೆಂದು ಎಚ್ಚೆತ್ತುಕೊಳ್ಳುವಷ್ಟರಲ್ಲಿ ಭಾರತದ ಎಲ್ಲ ಯುದ್ಧ ವಿಮಾನಗಳು ಕೆಲಸ ಮುಗಿಸಿದ್ದವು.

ಪಾಕ್‌ ಸುಮ್ಮನಿತ್ತು, ನಾವು ಸುಮ್ಮನಿರಲಾಗುತ್ತದೆಯೇ?
ಹೌದು, ದಾಳಿ ನಡೆಸಿದ್ದೇವೆ; ನಮ್ಮ ವೈಮಾನಿಕ ದಾಳಿಯಲ್ಲಿ ನೂರಾರು ಭಯೋತ್ಪಾದಕರು ಸತ್ತಿದ್ದಾರೆ…
ಇದು, ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಜಯ ಗೋಖಲೆ ಅವರು ನೀಡಿದ ಮಾಹಿತಿ. ಸರ್ಜಿಕಲ್‌ ದಾಳಿ ಬಗ್ಗೆ ವಿವರಿಸಿದ ಅವರು, ಗುಪ್ತಚರ ಸಂಸ್ಥೆಗಳ ಮಾಹಿತಿ ಆಧರಿಸಿಯೇ ದಾಳಿ ನಡೆಸಿದ್ದೇವೆ ಎಂದರು. ದಾಳಿಯಲ್ಲಿ ಉಗ್ರರು, ಅವರ ತರಬೇತುದಾರರು, ಹಿರಿಯ ಕಮಾಂಡರ್‌ಗಳೂ ಹತ ರಾಗಿದ್ದಾರೆ ಎಂದರು. 

“ಪಾಕಿಸ್ಥಾನ ಮತ್ತು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ತರಬೇತಿ ಶಿಬಿರಗಳ ಬಗ್ಗೆ ಪದೇ ಪದೆ ಮಾಹಿತಿ ನೀಡುತ್ತಿದ್ದರೂ ಅವುಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಜತೆಗೆ ತರಬೇತಿ ಕೇಂದ್ರಗಳೇ ಇಲ್ಲ ಎಂದು ಪಾಕ್‌ ವಾದಿಸುತ್ತಿತ್ತು. ಪಾಕಿಸ್ಥಾನಕ್ಕೆ ಅರಿವು ಇಲ್ಲದೆ ಇಂಥ ಕೇಂದ್ರಗಳ ಕಾರ್ಯಾಚರಣೆ ಸಾಧ್ಯವೇ ಇಲ್ಲ’ ಎಂದೂ ವಿದೇಶಾಂಗ ಕಾರ್ಯದರ್ಶಿಗಳು ಹೇಳಿದರು.

“ವಸತಿ ಪ್ರದೇಶದಿಂದ ದೂರವಾಗಿ, ದಟ್ಟ ಅರಣ್ಯ ಪ್ರದೇಶದ ಗುಡ್ಡದ ತುದಿಯಲ್ಲಿರುವ ಬಾಲಕೋಟ್‌ನಲ್ಲಿರುವ ಜೈಶ್‌ ಉಗ್ರ ತರಬೇತಿ ಶಿಬಿರದ ನೇತೃತ್ವವನ್ನು ಮೌಲಾನಾ ಯೂಸುಫ್ ಅಜರ್‌ ಅಲಿಯಾಸ್‌ ಉಸ್ತಾದ್‌ ಘೋರಿ ಎಂಬಾತ ವಹಿಸಿದ್ದ. ಈತ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನ ಅಳಿಯ’ ಎಂದು ಮಾಹಿತಿ ನೀಡಿದರು.

ರಾತ್ರಿ ಪೂರ್ತಿ ಎದ್ದಿದ್ದ ಮೋದಿ
ಇಡೀ ಸರ್ಜಿಕಲ್‌ ದಾಳಿ ಮೋದಿ ಕಣ್ಗಾವಲಿನಲ್ಲೇ ನಡೆದಿದೆ. ಸೋಮವಾರ ರಾತ್ರಿ ಖಾಸಗಿ ಕಾರ್ಯಕ್ರಮ ಮುಗಿಸಿದ ಅವರು, ಅನಂತರ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡರು. ಆದರೆ ಅವರು ತಮ್ಮ ನಿವಾಸದಲ್ಲಿದ್ದರೇ, ನಿಯಂತ್ರಣ ಕೇಂದ್ರದಲ್ಲಿದ್ದರೇ ಎಂಬ ಬಗ್ಗೆ ಮಾಹಿತಿ ಇಲ್ಲ. ರಾತ್ರಿಯಿಡೀ ಮಾಹಿತಿ ಪಡೆಯುತ್ತಿದ್ದ ಅವರು, ಕಾರ್ಯಾಚರಣೆ ಯಶಸ್ವಿಯಾದೊಡನೆ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ನಿರ್ಗಮಿಸಿದರು.

200 ಗಂಟೆಗಳ ಯೋಜನೆ?
ಬಾಲಕೋಟ್‌ ಮೇಲಿನ ದಾಳಿ ಕೇವಲ ಒಂದು ದಿನದ ಯೋಜನೆ ಅಲ್ಲವೇ ಅಲ್ಲ. ಬರೋಬ್ಬರಿ 200 ಗಂಟೆಗಳ ಪ್ಲಾನ್‌ ಇದು. ಪುಲ್ವಾಮಾದಂತೆಯೇ ಉಗ್ರರು ಇನ್ನೊಂದು ಆತ್ಮಾಹುತಿ ದಾಳಿ ನಡೆಸಬಹುದು ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿತ್ತು. ಇದರನ್ವಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಮತ್ತು ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರು ಉಗ್ರರಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ಕೇಂದ್ರದ ಮುಂದೆ ಹೇಳಿದ್ದರು. ಆದರೆ ದಾಳಿ ನಡೆಸುವ ಬಗ್ಗೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ, ಗೃಹ ಸಚಿವ ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಅಜಿತ್‌ ದೋವಲ್‌ ಮತ್ತು ಏರ್‌ ಚೀಫ್ ಮಾರ್ಷಲ್‌ ಬಿರೇಂದರ್‌ ಸಿಂಗ್‌ ಧಾನುವಾ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಯಿತು.

ಸುಮಾರು 200 ಗಂಟೆಗಳ ಕಾಲ ಯಾವ ರೀತಿ ದಾಳಿ ನಡೆಸಬೇಕು ಎಂಬ ಬಗ್ಗೆ ಚರ್ಚಿಸಲಾಯಿತು. ಕೊನೆಗೆ ಪುಲ್ವಾಮಾ ಘಟನೆ ನಡೆದ 12ನೇ ದಿನಕ್ಕೆ ಸರ್ಜಿಕಲ್‌ ಸ್ಟ್ರೈಕ್‌ ನಡೆಸಲು ತೀರ್ಮಾನಿಸಲಾಯಿತು. ಬಳಿಕ 12 ಮಿರಾಜ್‌ 2000 ಮತ್ತು 16 ಸುಕೋಯ್‌ ಸಮರ ವಿಮಾನಗಳನ್ನು ಬಳಸಿ ಗಡಿ ನಿಯಂತ್ರಣ ರೇಖೆ ದಾಟಿ ದಾಳಿ ನಡೆಸಲಾಯಿತು. ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ಮಿರಾಜ್‌ 2000 ಸಮರ ವಿಮಾನಗಳು ಹೊರಟರೆ, ಪಂಜಾಬ್‌ನ ಅದಂಪುರ್‌ನ ಆಗಸದಲ್ಲಿ ಆಗಸದಲ್ಲೇ ಇಂಧನ ತುಂಬಿಸಿಕೊಳ್ಳಲಾಯಿತು.

ಸೇನೆಯ ಕವನ
ನಮ್ಮ ವಾಯುಪಡೆಯು ಪಾಕಿಸ್ಥಾನ ನೆಲದಲ್ಲಿನ ಉಗ್ರರ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿದ ಒಂದು ಗಂಟೆ ತರುವಾಯ ಭಾರತೀಯ ಸೇನೆಯು (@adgpi) ಹಿಂದಿ ಕವನ ವೊಂದನ್ನು ಟ್ವೀಟ್‌ ಮಾಡಿದೆ. ಕೌರವ-ಪಾಂಡವರ ಉದಾಹರಣೆ ಹೊಂದಿರುವ ಕವನ, “ನೀನು ಕ್ಷಮೆ, ವಿನಯ, ಶಾಂತಿ ಎನ್ನುತ್ತಾ ಕುಳಿತರೆ ಶತ್ರುಗಳು ನಿನ್ನನ್ನು ಹೇಡಿ ಎಂದು ಭಾವಿಸುತ್ತಾರೆ’ ಎಂಬ ಸಾರ ಹೊಂದಿದೆ. ಕವಿ ದಿನಕರ್‌ ಅವರ ಕವನದ ಕನ್ನಡ ರೂಪ ಇಲ್ಲಿದೆ.

ವೈರಿಗಳ ಎದುರು ನೀನು 
ಎಷ್ಟು  ಕ್ಷಮಾಶೀಲನಾಗಿರುವೆಯೋ
ನೀನು ಎಷ್ಟು ವಿನೀತ ಭಾವದಿಂದಿರುವೆಯೋ
ದುಷ್ಟ ಕೌರವರು ನಿನ್ನನ್ನು ಅಷ್ಟೇ ಹೇಡಿ ಎಂದು ಭಾವಿಸುತ್ತಾರೆ.
ಸತ್ಯ ಹೇಳುವೆ ಕೇಳು, ವಿನಯದ ದೀಪ ಬೆಳಗುವುದು ಮನೆಯಲ್ಲಿ ಮಾತ್ರ
ಶಾಂತಿ ದೂತನೇ, ವೈರಿ ಮುಂದೆ ತೋರಬೇಕಿರುವುದು ವಿನಯವಲ್ಲ, ಶಕ್ತಿ!

ಮಿರಾಜ್‌ 2000 
ಇಡೀ ದಾಳಿಯ ನೇತೃತ್ವ  ವಹಿಸಿದ್ದು ಮಿರಾಜ್‌ 2000 ಯುದ್ಧ ವಿಮಾನ. ಭಾರತದ ವಾಯು ಪಡೆಯ ಬತ್ತಳಿಕೆಯಲ್ಲಿರುವ ಹಿರಿಯ ಅಸ್ತ್ರ ಇದು.

ಈ ಮಣ್ಣಿನ ಮೇಲೆ ನಾನು ಮಾಡುತ್ತಿರುವ ಶಪಥವಿದು- ದೇಶವನ್ನು ನಾಶ ಮಾಡಲು ನಾನು ಬಿಡೆನು, ದೇಶವನ್ನು ಸ್ಥಗಿತಗೊಳ್ಳಲು ಬಿಡೆನು, ದೇಶ ತಲೆಬಾಗಿಸಲೂ ಅವಕಾಶ ಕೊಡೆನು… ಭಾರತಮಾತೆಗೆ ನಾನು ಕೊಡುತ್ತಿರುವ ವಚನವಿದು- ನಿನ್ನ ಶಿರಬಾಗಿಸಲು ನಾನು ಬಿಡೆನು.
ನರೇಂದ್ರ ಮೋದಿ, ಪ್ರಧಾನಿ

ಸೇನೆಗೆ ಅಭಿನಂದನೆ
ನಮ್ಮ ಸಶಸ್ತ್ರ ಪಡೆಯ ಧೈರ್ಯ ಮತ್ತು ಪರಾಕ್ರಮಕ್ಕೆ ಅಭಿನಂದನೆಗಳು. ಇವತ್ತಿನ ಈ ಕ್ರಮ ಪ್ರಧಾನಿ ಮೋದಿ ಅವರ ಬಲಿಷ್ಠ ಮತ್ತು ನಿರ್ಣಾಯಕ ನಾಯಕತ್ವದಲ್ಲಿ ಭಾರತವು ಸುರಕ್ಷಿತ ಎಂಬುದಕ್ಕೆ ಸಾಕ್ಷಿ. 
ಅಮಿತ್‌ ಶಾ

ಯೋಧರಿಗೆ ನನ್ನ ಸೆಲ್ಯೂಟ್‌
ಭಾರತೀಯ ವಾಯುಪಡೆಗೆ ನನ್ನದೊಂದು ಸೆಲ್ಯೂಟ್‌. ಭಾರತವನ್ನು ಸುರಕ್ಷಿತವಾಗಿಡುವಲ್ಲಿ ವಾಯು ಪಡೆ ತೋರುತ್ತಿರುವ ಸ್ಥಿರ ಮತ್ತು ದೃಢವಾದ ಕ್ರಮ ಹಾಗೂ ಬದ್ಧತೆಯನ್ನು ನಾವು ಅಭಿನಂದಿಸಲೇಬೇಕು. ಜೈ ಹಿಂದ್‌.
ರಾಹುಲ್‌ ಗಾಂಧಿ

ಅತ್ಯಂತ ವೃತ್ತಿಪರವಾಗಿ ದಾಳಿ ನಡೆಸಿದ ವಾಯುಪಡೆಗೆ ಮತ್ತು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಪುಲ್ವಾಮಾ ದಾಳಿಯ ನಂತರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದರಲ್ಲಿ ಅನುಮಾನವಿಲ್ಲ ಎಂದು ನನ್ನ ಮನಸ್ಸು ಹೇಳುತ್ತಿತ್ತು. 
ಲೆ.ಜ. ಡಿ.ಎಸ್‌.ಹೂಡಾ, 2016ರ ಸರ್ಜಿಕಲ್‌ ದಾಳಿ ಹೀರೋ

ಪತಿಯ ಪುಣ್ಯತಿಥಿ ದಿನದಂದೇ ಉಗ್ರರ ಮೇಲೆ ಪ್ರತೀಕಾರ ತೀರಿಸಿಕೊಂಡಿರುವುದು ಖುಷಿಯಾಗಿದೆ. ನಮ್ಮ ಸೈನಿಕರ ಬಗ್ಗೆ
ಹೆಮ್ಮೆಯೆನಿಸುತ್ತಿದೆ. ಪಾಕ್‌ ವಿರುದಟಛಿ ಇಂಥ ಪ್ರತೀಕಾರದ ದಾಳಿಗಳು ಮುಂದುವರಿಯುತ್ತಿರಬೇಕು. ಪಾಕಿಸ್ತಾನ ನಿರ್ನಾಮವಾಗಬೇಕು.

ಕಲಾವತಿ, ಹುತಾತ್ಮ ಯೋಧ ಎಚ್‌.ಗುರು ಅವರ ಪತ್ನಿ

ಮುಂದೇನು?
ಭಾರತ
1 ಜಾಗತಿಕ ಮಟ್ಟದಲ್ಲಿ ಪಾಕ್‌ ಅನ್ನು ಒಬ್ಬಂಟಿ ಮಾಡಲು ಸತತ ಪ್ರಯತ್ನ.
2 ನಮ್ಮ ತಂಟೆಗೆ ಬಂದರೆ ಹುಷಾರ್‌ ಎಂದು ಉಗ್ರರಿಗೆ ಎಚ್ಚರಿಕೆ.
3 ಯುದ್ಧ  ಮಾಡಲು ಹಿಂಜರಿಯುವುದಿಲ್ಲ  ಎಂದು ಪಾಕ್‌ಗೆ ಮುನ್ಸೂಚನೆ.

ಪಾಕಿಸ್ಥಾನ
1  ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೂರು ನೀಡಬಹುದು.
2  ಮತ್ತೆ ಚೀನದ ಕಾಲಿಗೆ ಬಿದ್ದು ಅನ್ಯಾಯವಾಗುತ್ತಿದೆ ಎಂದು     ಗೋಳಿಡುವುದು.
3  ಭಾರತದ ವಿರುದ್ಧ ಪ್ರತೀಕಾರ ತೀರಿಸಲು ಉಗ್ರರಿಗೆ ಮತ್ತಷ್ಟು ನೆರವು ನೀಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next