ಹೊಸದಿಲ್ಲಿ : ಭಾರತ ಒಂದೊಮ್ಮೆ ನಮ್ಮ ಅಣ್ವಸ್ತ್ರ ಸಂಗ್ರಹಾಲಯಗಳ ಮೇಲೆ ದಾಳಿ ಮಾಡಿದಲ್ಲಿ ನಮ್ಮಿಂದ ಯಾರೂ ಸಹನೆ, ತಾಳ್ಮೆಯನ್ನು ನಿರೀಕ್ಷಿಸಬಾರದು” ಎಂದು ಪಾಕಿಸ್ಥಾನ ಭಾರತಕ್ಕೆ ಎಚ್ಚರಿಕೆ ನೀಡಿದೆ.
ಭಾರತೀಯ ವಾಯು ಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಶಲ್ ಬಿ ಎಸ್ ಧನೋವಾ ಅವರು ಒಂದು ದಿನದ ಹಿಂದಷ್ಟೇ, “ಪಾಕ್ ಅಣ್ವಸ್ತ್ರ ಸಂಗ್ರಹಾಲಯಗಳ ಮೇಲೆ ದಾಳಿ ಮಾಡಿ ಅವುಗಳನ್ನು ನಾಶಪಡಿಸುವ ಸಾಮರ್ಥ್ಯ ಭಾರತಿಯ ವಾಯು ಪಡೆಗೆ ಇದೆ’ ಎಂದು ನೀಡಿದ್ದ ಹೇಳಿಕೆಗೆ ಪಾಕ್ ವಿದೇಶ ಸಚಿವ ಖ್ವಾಜಾ ಆಸೀಫ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
“ಮೊನ್ನೆ ಬುಧವಾರ ಭಾರತೀಯ ವಾಯು ಪಡೆಯ ಮುಖ್ಯಸ್ಥ ಇನ್ನೊಂದು ಸರ್ಜಿಕಲ್ ದಾಳಿ ನಡೆಸುವ ಮೂಲಕ ಪಾಕಿಸ್ಥಾನದ ಅಣ್ವಸ್ತ್ರ ಸಂಗ್ರಹಾಗಾರಗಳನ್ನು ನಾಶಪಡಿಸುವುದಾಗಿ ಹೇಳಿದ್ದಾರೆ. ಒಂದೊಮ್ಮೆ ಅದು ಸಂಭವಿಸಿದಲ್ಲಿ ಯಾರೂ ನಮ್ಮಿಂದ ತಾಳ್ಮೆ, ಸಹನೆಯನ್ನು ನಿರೀಕ್ಷಿಸಬಾರದು. ರಾಜಕೀಯ ಮುತ್ಸದ್ದಿತನದ ಗರಿಷ್ಠ ಸಜ್ಜನಿಕೆಯಾಗಿ ನಾನು ಈ ಭಾಷೆಯನ್ನು ಬಳಸಬಹುದಾಗಿದೆ’ ಎಂದು ಆಸಿಫ್ ಎಚ್ಚರಿಸಿದರು.
“ಭಾರತ ಏಕಕಾಲದಲ್ಲಿ ಪಾಕಿಸ್ಥಾನ ಮತ್ತು ಚೀನದೊಂದಿಗೆ ಯುದ್ದ ನಡೆಸುವ ಶಕ್ತಿ ಸಾಮರ್ಥ್ಯ, ತಂತ್ರಜ್ಞಾನಗಳನ್ನು ಹೊಂದಿದೆ. ಚೀನದ ವಿರುದ್ಧ ಹೋರಾಡುವ ನಮ್ಮ ಸಾಮರ್ಥ್ಯ ಪರ್ಯಾಪ್ತವಾಗಿದೆ’ ಎಂದು ಭಾರತೀಯ ವಾಯು ಪಡೆಯ ಮುಖ್ಯಸ್ಥ ಧನೋವಾ ಹೇಳಿದ್ದರು.
ವಾಷಿಂಗ್ಟನ್‌ನಲ್ಲಿನ ಚಿಂತನ ಚಾವಡಿ “ಯುಎಸ್ ಇನ್‌ಸ್ಟಿಟ್ಯೂಟ್ ಆಫ್ ಪೀಸ್’ ಸಂಘಟಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಆಸಿಫ್ “ಪ್ರಕೃತ ಭಾರತ ಮತ್ತು ಪಾಕಿಸ್ಥಾನದ ನಡುವಿನ ಬಾಂಧವ್ಯ ಅತ್ಯಂತ ಕೆಳ ಸ್ತರವನ್ನು ತಲುಪಿದೆ. ಭಾರತದೊಂದಿಗೆ ದ್ವಿಪಕ್ಷೀಯ ಬಾಂಧವ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಪಾಕಿಸ್ಥಾನ ನಡೆಸಿರುವ ಯತ್ನಗಳಿಗೆ ಭಾರತ ಸ್ಪಂದಿಸದಿರುವುದು ದುರದೃಷ್ಟಕರ’ ಎಂದು ಹೇಳಿದರು.