ನವದೆಹಲಿ: ಪೂರ್ವ ಲಡಾಖ್ ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ನಡೆದಿರುವ ಹಿನ್ನೆಲೆಯಲ್ಲಿ ಭಾರತೀಯ ವಾಯು ಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ಲೇಹ್ ಮತ್ತು ಶ್ರೀನಗರ್ ವಾಯುನೆಲೆಗೆ ಭೇಟಿ ನೀಡಿರುವುದಾಗಿ ವರದಿ ತಿಳಿಸಿದೆ.
ಇಂಡಿಯನ್ ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಅವರು, ಲೇಹ್ ಮತ್ತು ಶ್ರೀನಗರದಲ್ಲಿ ವಾಯುಪಡೆ ಸಿದ್ಧತೆಯ ವೀಕ್ಷಣೆ ನಡೆಸಲು ತೆರಳಿರುವುದಾಗಿ ವರದಿ ವಿವರಿಸಿದೆ. ಚೀನಾ ಗಡಿ ಕ್ಯಾತೆ ನಿಟ್ಟಿನಲ್ಲಿ ಗಡಿ ಪ್ರದೇಶದಲ್ಲಿ ಭಾರತೀಯ ವಾಯುಪಡೆ ಕಾರ್ಯಾಚರಣೆ ನಡೆಸಲು ಸಿದ್ದವಾಗಿರುವುದಾಗಿ ತಿಳಿಸಿದೆ.
ಐಎಎಫ್ ವರಿಷ್ಠ ಲೇಹ್, ಶ್ರೀನಗರ್ ಪ್ರದೇಶಕ್ಕೆ ಎರಡು ದಿನಗಳ ಭೇಟಿ ನೀಡಿದ್ದು, ಎಲ್ಲಾ ರೀತಿಯ ಸಿದ್ಧತೆಗೆ ಮುಂದಾಗಿರುವುದಾಗಿ ವರದಿ ಹೇಳಿದೆ. ಪೂರ್ವ ಲಡಾಖ್ ಪ್ರದೇಶದಲ್ಲಿ ಯಾವುದೇ ಕಾರ್ಯಾಚರಣೆ ನಡೆಸುವುದಿದ್ದರೂ ತುಂಬಾ ಕಠಿಣವಾಗಿದೆ ಎಂದು ತಿಳಿಸಿದ್ದಾರೆ.
ಲಡಾಖ್ ನಲ್ಲಿ ಚೀನಾ, ಭಾರತ ನಡುವೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಅಲ್ಲದೇ ಸೆರೆಹಿಡಿದಿದ್ದ ಹತ್ತು ಮಂದಿ ಯೋಧ(ಇಬ್ಬರು ಮೇಜರ್)ರನ್ನು ಚೀನಾ ಬಿಡುಗಡೆ ಮಾಡಿದೆ. ಗಾಲ್ವಾನ್ ಕಣಿವೆ ಪ್ರದೇಶದಲ್ಲಿನ ಘರ್ಷಣೆ ಇದೀಗ ಉಭಯ ದೇಶಗಳ ನಡುವೆ ಮತ್ತಷ್ಟು ಬಿರುಕು
ಮೂಡಿಸಿರುವ ನಿಟ್ಟಿನಲ್ಲಿ ಗಡಿಯಲ್ಲಿ ಉಭಯ ದೇಶಗಳ ಸೇನೆಯ ಚಟುವಟಿಕೆ ಬಿರುಸುಗೊಂಡಿರುವುದಾಗಿ ವರದಿ ತಿಳಿಸಿದೆ.