ಹೊಸದಿಲ್ಲಿ : ಎಂಟು ಚಾಲಕ ಸಿಬಂದಿಗಳು ಮತ್ತು ಇತರ ಐವರು ಸೇರಿದಂತೆ ಒಟ್ಟು 13 ಜನರಿದ್ದ ಭಾರತೀಯ ವಾಯು ಪಡೆಯ ಸರಕು ಸಾಗಣೆಯ ಎಎನ್-32 ವಿಮಾನ ಅಸ್ಸಾಮಿನ ಜೋರ್ಹಾಟ್ ವಾಯುನೆಲೆಯಿಂದ ಇಂದು ಸೋಮವಾರ ಮಧ್ಯಾಹ್ನ 12.25ರ ಸುಮಾರಿಗೆ ಟೇಕಾಫ್ ಆದ 35 ನಿಮಿಷಗಳ ಒಳಗೆ ಭೂ ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಡಿದುಕೊಂಡಿತೆಂದು ಅಧಿಕೃತ ಮೂಲಗಳು ತಿಳಿಸಿವೆ.
ನಾಪತ್ತೆಯಾಗಿರುವ ವಿಮಾನವನ್ನು ಪತ್ತೆ ಹಚ್ಚಲು ಭಾರತೀಯ ವಾಯು ಪಡೆ ತನ್ನೆಲ್ಲ ಸಂಪನ್ಮೂಲಗಳನ್ನು ಕ್ರಿಯಾಶೀಲಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಎಎನ್-32 ವಿಮಾನ ಅರುಣಾಚಲ ಪ್ರದೇಶದ ಮೆಂಚುಕಾ ವಾಯು ಪಟ್ಟಿಯಲ್ಲಿ ಇಳಿಯುವುದಿತ್ತು. ಆದರೆ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಅದು ಸಂಪರ್ಕ ಕಡಿದುಕೊಂಡಿತೆಂದು ಮೂಲಗಳು ಹೇಳಿವೆ.
ಎಎನ್-32 ವಿಮಾನ ಮೆಂಚುಕಾ ಅಡ್ವಾನ್ಸ್ ಲ್ಯಾಂಡಿಂಗ್ ಗ್ರೌಂಡ್ ತಲುಪದಿದ್ದಾಗ ಐಎಎಫ್ ಕೂಡಲೇ ಶೋಧ ಕಾರ್ಯಾಚರಣೆ ಆರಂಭಿಸಿತು.
ಅಂತೆಯೇ ಒಂದು ಸುಖೋಯಿ-30 ಯುದ್ಧ ವಿಮಾನ ಮತ್ತು ಸಿ-130 ವಿಶೇಷ ಕಾರ್ಯಾಚರಣೆ ವಿಮಾನವನ್ನು ಶೋಧ ಕಾರ್ಯಕ್ಕೆ ನಿಯೋಜಿಸಲಾಯಿತು.
2016ರಲ್ಲಿ ಇನ್ನೊಂದು ಎನ್-32 ಸರಕು ಸಾಗಣೆ ವಿಮಾನ ಚೆನ್ನೈನಿಂದ ಪೋರ್ಟ್ ಬ್ಲೇರ್ ಗೆ ಟೇಕಾಫ್ ಆಗಿದ್ದ ಸ್ವಲ್ಪವೇ ಹೊತ್ತಿನಲ್ಲಿ ಕಣ್ಮರೆಯಾಗಿತ್ತು. ಆ ವಿಮಾನದಲ್ಲಿ ಏಳು ಮಂದಿ ಇದ್ದರು. ವಿಮಾನ ನಾಪತ್ತೆಯ ಬಳಿಕ ವ್ಯಾಪಕ ಶೋಧ ಕಾರ್ಯ ನಡೆಸಿದರೂ ವಿಮಾನ ಮತ್ತು ಅದರೊಳಗಿದ್ದವರು ಪತ್ತೆಯಾಗಿರಲಿಲ್ಲ.