ಹೊಸದಿಲ್ಲಿ: ನಾಲ್ಕು ದೇಶಗಳ ಗುಂಪಾಗಿರುವ “ಐ2ಯು2′ ಧನಾತ್ಮಕ ಕಾರ್ಯಸೂಚಿಯನ್ನು ಸ್ಥಾಪಿಸಿದೆ. ಜಾಗತಿಕ ಅನಿಶ್ಚಿತತೆಯನ್ನು ಎದುರಿ ಸಲು ಉತ್ತಮ ಮಾದರಿ ರೂಪಿಸಿಕೊಟ್ಟಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಗುರುವಾರದಂದು ನಡೆದ ಮೊದಲನೇ ಐ2ಯು2 ಶೃಂಗಸಭೆಯಲ್ಲಿ ವರ್ಚುವಲ್ ಆಗಿ ಭಾಗವಹಿಸಿದ ಮೋದಿ ಈ ಮಾತುಗಳನ್ನಾಡಿ ದ್ದಾರೆ. ಶೃಂಗಸಭೆಯಲ್ಲಿ ಮೋದಿ ಅವರ ಜತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಇಸ್ರೇಲ್ ಪ್ರಧಾನಿ ಯೈರ್ ಲ್ಯಾಪಿಡ್ ಮತ್ತು ಅರಬ್ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿರುವ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಭಾಗವಹಿಸಿದ್ದರು. “ನಮ್ಮ ಗುಂಪು ಶಕ್ತಿ ಭದ್ರತೆ, ಆಹಾರ ಭದ್ರತೆ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತಮ ಕೊಡುಗೆ ನೀಡಲಿದೆ. ಜಲ, ಶಕ್ತಿ, ಸಾರಿಗೆ, ಬಾಹ್ಯಾಕಾಶ, ಆರೋಗ್ಯ ಮತ್ತು ಆಹಾರ ಭದ್ರತೆ ಕ್ಷೇತ್ರಗಳಲ್ಲಿ ಜಂಟಿ ಹೂಡಿಕೆಯನ್ನು ಹೆಚ್ಚಿಸಲಿದೆ’ ಎಂದು ಪ್ರಧಾನಿ ಅವರು ತಿಳಿಸಿದ್ದಾರೆ.
ಭಾರತಾದ್ಯಂತ ಸಮಗ್ರ ಆಹಾರ ಉದ್ಯಾನಗಳನ್ನು ನಿರ್ಮಿಸುವುದಕ್ಕೆ ಯುಎಇ 16,000 ಕೋಟಿ ರೂ. ಬಂಡವಾಳ ಹೂಡಲಿದೆ. ಉದ್ಯಾನ ನಿರ್ಮಿಸುವುದಕ್ಕೆ ಸೂಕ್ತ ಜಾಗವನ್ನು ಭಾರತವು ಕೊಡಲಿದೆ. ಅಮೆರಿಕ ಮತ್ತು ಇಸ್ರೇಲ್‌ನ ಖಾಸಗಿ ವಲಯದವರಿಗೆ ತಮ್ಮ ಪರಿಣತಿಯನ್ನು ಈ ಯೋಜನೆಗೆ ಕೊಡುಗೆ ನೀಡಲು ಆಹ್ವಾನಿಸಲಾಗಿದೆ.
ಗುಜರಾತ್‌ನ ಹೈಬ್ರಿಡ್ ನವೀಕರಿಸಬಹುದಾದ ಯೋಜನೆಯನ್ನೂ ಐ2ಯು2 ಗುಂಪು ಮುನ್ನಡೆಸಲಿದೆ ಎಂದು ಶೃಂಗಸಭೆಯು ಪ್ರಕಟನೆಯಲ್ಲಿ ತಿಳಿಸಿದೆ.
ಹವಾಮಾನ ಉಪಕ್ರಮಕ್ಕಾಗಿ ಕೃಷಿ ನಾವಿನ್ಯತೆ(ಎಐಎಂ) ಯೋಜನೆಗೆ ಕೈ ಜೋಡಿಸುವುದಕ್ಕೆ ಭಾರತ ಆಸಕ್ತಿ ತೋರಿಸಿರುವುದನ್ನು ಅಮೆರಿಕ, ಇಸ್ರೇಲ್ ಮತ್ತು ಯುಎಇ ರಾಷ್ಟ್ರಗಳು ಸ್ವಾಗತಿಸಿದ್ದು, ಭಾರತದ ಜತೆ ನಿಲ್ಲುವುದಾಗಿ ತಿಳಿಸಿವೆ.