ಕೊಪ್ಪಳ: ಕೃಷ್ಣಾ ನ್ಯಾಯಾಧಿಕರಣದ ತೀರ್ಪು-2ರ ಅಧಿ ಸೂಚನೆ ಹೊರಡಿಸುವ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಬಾಕಿಯಿದ್ದು, ಫೆಬ್ರವರಿಯಲ್ಲಿ ವಿಚಾರಣೆಗೆ ಬರಲಿದೆ. ನನ್ನನ್ನು ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡುವಂತೆ ಅರ್ಜಿ ಸಲ್ಲಿಸಿ, ಕೋರ್ಟ್ ಮೆಟ್ಟಿಲೇರಿ ನಾನೇ ವಾದ ಮಂಡಿಸಲಿದ್ದೇನೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ಯಲಬುರ್ಗಾದ ತಮ್ಮ ನಿವಾಸದಲ್ಲಿ “ಕೃಷ್ಣಾ ಬಿ ಸ್ಕೀಂ ನೀರಾವರಿ ಯೋಜನೆಯ ವಸ್ತುಸ್ಥಿತಿ ಹಾಗೂ ಸತ್ಯಾಂಶ’ ಕುರಿತು ತಾವೇ ಬರೆದಿದ್ದ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಕೃಷ್ಣಾ ನೀರು ಈ ಭಾಗಕ್ಕೆ ಹರಿಯಬೇಕಿದೆ. ಹೀಗಾಗಿ ಈ ಭಾಗದ ರೈತರ ಪರವಾಗಿ ನಾನೇ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲಿದ್ದೇನೆ.
ಸುಪ್ರೀಂ ಕೋರ್ಟ್‌ನ ನನ್ನ ಆತ್ಮೀಯ ವಕೀಲರೊಂದಿಗೆ ಚರ್ಚಿಸಿದ್ದೇನೆ. ನ್ಯಾಯಾ ಧಿಕರಣದ ತೀರ್ಪಿನ ವಿಚಾರಣೆ ಪ್ರಕರಣದಲ್ಲಿ ನನ್ನನ್ನು ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡುವಂತೆ ಫೆ.8ರಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿದ್ದೇನೆ. ಜತೆಗೆ ಫೆ.19ರಂದು ನ್ಯಾಯಾ ಧಿಕರಣ ವಾದವು ವಿಚಾರಣೆಗೆ ಬರಲಿದ್ದು, ಅಲ್ಲಿ ನಾನೇ ವಾದ ಮಂಡಿಸಲಿದ್ದೇನೆ ಎಂದರು.
ನ್ಯಾ| ಬ್ರಿಜೇಶ್ ಕುಮಾರ ನೇತೃತ್ವದಲ್ಲಿ ಕೃಷ್ಣಾ ಜಲ ವಿವಾದದ ನ್ಯಾಯಾಧಿಕರಣ ತೀರ್ಪು-2 2012ರಲ್ಲಿಯೇ ಕೃಷ್ಣಾ ಯೋಜನೆಗಳಿಗೆ ನೀರು ಹಂಚಿಕೆ ಮಾಡಿ ಆದೇಶಿಸಿದೆ. ಕೇಂದ್ರ ಸರ್ಕಾರ ಆ ನ್ಯಾಯಾ ಧಿಕರಣದ ತೀರ್ಪನ್ನು ಗೆಜೆಟ್ ಅ ಧಿಸೂಚನೆ ಹೊರಡಿಸಬೇಕು. ಆದರೆ ಆಂಧ್ರಪ್ರದೇಶವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಗೆಜೆಟ್ ಅಧಿ ಸೂಚನೆ ಹೊರಡಿಸದಂತೆ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತಂದಿದೆ. ಅಲ್ಲಿಂದ ಬರಿ ವಿಚಾರಣೆ ಮುಂದೂಡುತ್ತಲೇ ಬಂದಿದೆ. ಮೋದಿ ಸರ್ಕಾರವೂ ಇದರ ಬಗ್ಗೆ ಕಾಳಜಿ ವಹಿಸಿಲ್ಲ. ಇದನ್ನು ತೆರವು ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು. ಇಲ್ಲವೇ ಪ್ರಧಾನಿ ಮೋದಿ ನಾಲ್ಕು ರಾಜ್ಯಗಳ ಸಿಎಂಗಳೊಂದಿಗೆ ಚರ್ಚೆ ನಡೆಸಿ ಮಹದಾಯಿ ಹಾಗೂ ಕೃಷ್ಣಾ ನದಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಬೇಕು ಎಂದರು.