Advertisement

ಮೈತ್ರಿ ಸರ್ಕಾರಕ್ಕೆ ಧಕ್ಕೆಯಾಗದಂತೆ ಶ್ರಮಿಸುತ್ತೇನೆ

06:20 AM Jul 15, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರಕ್ಕೆ ಧಕ್ಕೆಯಾಗದಂತೆ ಶ್ರಮಿಸುತ್ತೇನೆ. ವಯಸ್ಸು ಲೆಕ್ಕಿಸದೆ ಪಕ್ಷವನ್ನೂ ಸಂಘಟಿಸಿ ಅವಿಶ್ರಾಂತ ಹೋರಾಟ ಮಾಡುತ್ತೇನೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.

Advertisement

ಜೆಡಿಎಸ್‌ ವತಿಯಿಂದ ಶನಿವಾರ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಹಮ್ಮಿಕೊಂಡಿದ್ದ ನೂತನ ಮುಖ್ಯಮಂತ್ರಿ ಹಾಗೂ ನೂತನ ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರುಗಳಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೀಗ 85 ವರ್ಷ. ವಯಸ್ಸಾಗಿದೆ ಎಂದು ಸುಮ್ಮನೆ ಕೂರುವುದಿಲ್ಲ. ಶಕ್ತಿ ಮೀರಿ ಪಕ್ಷದ ಸಂಘಟನೆಗೆ ಹೋರಾಟ ಮಾಡುತ್ತೇನೆ. ಮೈತ್ರಿ ಸರ್ಕಾರಕ್ಕೆ ಧಕ್ಕೆಯಾಗದಂತೆ ಶ್ರಮಿಸುತ್ತೇನೆ. , ಈ ಹೋರಾಟದಲ್ಲಿ ತನ್ನೊಂದಿಗೆ ಕೈಜೋಡಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಭಾಗ ಹಾಗೂ ಮೈಸೂರು ಭಾಗದಲ್ಲಿ ಚುನಾವಣಾ ಸಂದರ್ಭದಲ್ಲಿ ನಿರೀಕ್ಷೆಗೂ ಮೀರಿ ಜನ ಸೇರುತ್ತಿದ್ದರು. ವಿಧಾನಸಭಾ ಚುನಾವಣೆಯಲ್ಲಿ ನೂರಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ನಿರೀಕ್ಷೆಯೂ ಇತ್ತು. ಆದರೆ, ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೀಡಿದ್ದ ಯೋಜನೆಗಳನ್ನು ಮತದಾರರಿಗೆ ತಿಳಿಸುವಲ್ಲಿ ಪಕ್ಷದ ಕಾರ್ಯಕರ್ತರು ವಿಫ‌ಲರಾಗಿದ್ದಾರೆ. ಇದನ್ನು ತಿದ್ಧಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ವಿಧಾನಸೌಧದ ಒಳಗೆ ಮತ್ತು ಹೊರಗೆ ನಡೆಯುತ್ತಿರುವ ಹೋರಾಟವನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಬಿಜೆಪಿಯವರು ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಎಲ್ಲ ಯೋಜನೆಗಳನ್ನು ಮುಂದುವರಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೂ, ಅಪ್ಪ-ಮಗನ, ಅಣ್ಣ-ತಮ್ಮನ ಬಜೆಟ್‌ ಎಂದು ಟೀಕಿಸುತ್ತಿದ್ದಾರೆ. ಅದಕ್ಕೆಲ್ಲಾ ಮುಖ್ಯಮಂತ್ರಿ ಕುಮಾರಸ್ವಾಮಿ ಸದನದಲ್ಲಿ ವಿರೋಧ ಪಕ್ಷಗಳಿಗೆ ಸಮರ್ಥವಾಗಿ ಉತ್ತರ ನೀಡಿದ್ದಾರೆ ಎಂದರು.

ಪಕ್ಷದ ಕಚೇರಿಗಳಿಗೆ ಭೇಟಿ ಕೊಡಿ:
ರಾಜ್ಯದ 17 ಜಿಲ್ಲೆಗಳಲ್ಲಿ ನಮ್ಮ ಪಕ್ಷದ ಪ್ರತಿನಿಧಿಗಳಿಲ್ಲ. ಹೀಗಾಗಿ, ಗೆದ್ದಿರುವ ಎಲ್ಲ ಸಚಿವರದ್ದೂ ನೈತಿಕ ಜವಾಬ್ದಾರಿ ಹೆಚ್ಚಿದೆ. ಜಿಲ್ಲೆಗಳಿಗೆ ಭೇಟಿ ನೀಡುವ ಪ್ರತಿಯೊಬ್ಬ ಸಚಿವರೂ ಪಕ್ಷದ ಕಚೇರಿಗೆ ಭೇಟಿ ನೀಡಬೇಕು. ಅಲ್ಲಿನ ಸ್ಥಳೀಯ ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಬೇಕು. ಅಲ್ಲದೆ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಮಾತನಾಡುವುದನ್ನು ಕಲಿಯಬೇಕು. ನಾವು ಏನು ಮಾಡಿದ್ದೇವೆ, ಮಾಡುತ್ತಿದ್ದೇವೆ ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

Advertisement

ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ದೇಶದ ಎಲ್ಲ ರಾಜ್ಯಗಳಿಂದ ಜಾತ್ಯಾತೀತ ನಾಯಕರು ಹಾಗೂ ಪ್ರಾದೇಶಿಕ ಪಕ್ಷಗಳ ಮುಖಂಡರು, ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮುಂದಿನ ರಾಜಕೀಯ ಭವಿಷ್ಯದ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಆ ನಿರ್ಣಯವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು  ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next