Advertisement

ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುತ್ತೇನೆ

11:02 PM Jun 01, 2019 | Lakshmi GovindaRaj |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಡಿ ಸಂಸದೀಯ ವ್ಯವಹಾರಗಳ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವುದರ ಜತೆಗೆ ಕಲ್ಲಿದ್ದಲು ಖಾತೆಯ ಸಚಿವನಾಗಿ ರಾಜ್ಯದ ಬೇಡಿಕೆಗೆ ತಕ್ಕಂತೆ ಕಲ್ಲಿದ್ದಲು ಪೂರೈಕೆಯಾಗುವಂತೆ ನೋಡಿಕೊಳ್ಳುತ್ತೇನೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಂಸದೀಯ ವ್ಯವಹಾರ, ಕಲ್ಲಿದ್ದಲು ಹಾಗೂ ಗಣಿ ಖಾತೆ ಪಡೆದಿರುವ ಹುಬ್ಬಳ್ಳಿ-ಧಾರವಾಡದ ಸಂಸದ ಪ್ರಹ್ಲಾದ್‌ ಜೋಶಿಯವರ ಮಾತುಗಳಿವು.

Advertisement

ಬೆಂಗಳೂರಿನಲ್ಲಿರುವ ಬಿಜೆಪಿ ರಾಜ್ಯ ಕಚೇರಿಗೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ “ಉದಯವಾಣಿ’ಗೆ ಸಂದರ್ಶನ ನೀಡಿದ ಅವರು, ಉತ್ತರ ಕರ್ನಾಟಕ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸುವುದರ ಜತೆಗೆ ಸಮಗ್ರ ಕರ್ನಾಟಕದ ಅಭಿವೃದ್ದಿಗೂ ಶ್ರಮಿಸಲಿದ್ದೇನೆ ಎಂದು ಹೇಳಿದರು.

ಸಂದರ್ಶನದ ಸಾರಾಂಶ
* ಸಂಸದೀಯ ವ್ಯವಹಾರದಂತಹ ಮಹತ್ವದ ಖಾತೆ ತಮಗೆ ಲಭಿಸಿರುವ ಬಗ್ಗೆ ಹೇಗನಿಸುತ್ತದೆ?
ಈಗ ಉಪರಾಷ್ಟ್ರಪತಿಗಳಾಗಿರುವ ವೆಂಕಯ್ಯ ನಾಯ್ಡು ಹಾಗೂ ನಮ್ಮ ನಾಯಕರಾಗಿದ್ದ ದಿವಂಗತ ಅನಂತ ಕುಮಾರ್‌ ಅವರು ಕೇಂದ್ರದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಸಂದರ್ಭದಲ್ಲಿ ನಾನೂ ಕೂಡ ಸಂಸತ್ತಿನಲ್ಲಿದ್ದೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲೇ ಖಾತೆಯನ್ನು ಮುನ್ನಡೆಸುತ್ತೇನೆ. ನನಗೆ ಈ ಖಾತೆ ನೀಡಿರುವುದು ಸಂತಸ ತಂದಿದೆ. ಖಾತೆಯ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸಲಿದ್ದೇನೆ.

* ಸಂಸದೀಯ ವ್ಯವಹಾರಗಳ ಖಾತೆಯನ್ನು ಹೇಗೆ ನಿಭಾಯಿಸುವಿರಿ?
ಸಂಸದೀಯ ವ್ಯವಹಾರಗಳ ಖಾತೆಗೆ ಹೊಸ ಆಯಾಮ ತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜತೆ ಚರ್ಚೆ ಮಾಡಲಿದ್ದೇನೆ. ಜೂನ್‌ 17ರಿಂದ ಆರಂಭವಾಗಲಿರುವ 17ನೇ ಲೋಕಸಭೆಯ ಮೊದಲ ಅಧಿವೇಶನವನ್ನು ಯಶಸ್ವಿಯಾಗಿ ನಡೆಸುವ ಸಂಬಂಧ ಪ್ರಧಾನಿ ಮೋದಿಯವರು ಅನೇಕ ರೀತಿಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅಗಾಧವಾದ ಮಾಹಿತಿ ಮತ್ತು ಸಾಮರ್ಥ್ಯ ಇರುವಂತಹ, ಅನುಭವಿ ಪ್ರಧಾನಿಯವರ ನೇತೃತ್ವದಲ್ಲಿ ಈಗಾಗಲೇ ಕೆಲಸ ಆರಂಭ ಮಾಡಿದ್ದೇನೆ. ಇದರ ಫ‌ಲಿತಾಂಶ ಮುಂದೆ ಜನರಿಗೆ ತಿಳಿಯುತ್ತದೆ.

* ಗಣಿ ಹಾಗೂ ಕಲ್ಲಿದ್ದಲು ಖಾತೆಯ ಹೊಣೆಗಾರಿಕೆಯೂ ಇದೆಯಲ್ಲವೇ?
ದೇಶದ ಒಂದೇ ಒಂದು ಉಷ್ಣ ವಿದ್ಯುತ್‌ ಸ್ಥಾವರ, ಕಲ್ಲಿದ್ದಲು ಕೊರತೆಯಿಂದ ಒಂದು ದಿನ ಅಥವಾ ಒಂದು ಗಂಟೆಯೂ ಸ್ಥಗಿತವಾಗದಂತೆ ಖಾತೆಯನ್ನು ನಿಭಾಯಿಸುತ್ತೇನೆ. ಇದು ಜನರಿಗೆ ಕೇಂದ್ರ ಸರ್ಕಾರದಿಂದ ನೀಡುವ ಭರವಸೆ.

Advertisement

* ರಾಜ್ಯದ ವಿದ್ಯುತ್‌ ಕೊರತೆ ನೀಗಿಸಲು ಸಹಕಾರ ನೀಡುವಿರಾ?
ರಾಜ್ಯ ಸರ್ಕಾರ ಗರಿಷ್ಠ ಮಟ್ಟದಲ್ಲಿ ವಿದ್ಯುತ್‌ ಉತ್ಪಾದನೆ ಮಾಡಲಿ. 24 ಅಥವಾ 25 ದಿನಕ್ಕೆ ಬೇಕಾಗುವಷ್ಟು ಕಲ್ಲಿದ್ದಲು ಸಂಗ್ರಹ ಇರಬೇಕು. ಆದರೆ, ರಾಜ್ಯದಲ್ಲಿ ಈಗ 15 ಅಥವಾ 16 ದಿನಕ್ಕೆ ಬೇಕಾಗುವಷ್ಟು ಸಂಗ್ರಹ ಇದೆ. ಕಲ್ಲಿದ್ದಲು ಸಂಗ್ರಹ ಇಲ್ಲ ಎಂದು ಉಷ್ಣ ವಿದ್ಯುತ್‌ ಸ್ಥಾವರ ಬಂದ್‌ ಆಗಲು ಬಿಡುವುದಿಲ್ಲ. ಒಂದು ದಿನ ಅಲ್ಲ, ಒಂದು ಗಂಟೆಯೂ ಉತ್ಪಾದನೆ ಬಂದ್‌ ಆಗಲು ಬಿಡುವುದಿಲ್ಲ. ದೇಶಾದ್ಯಂತ ಕಲ್ಲಿದ್ದಲು ಉತ್ಪಾದನೆಯ ಸಂಗ್ರಹ ಶೇ.84ರಷ್ಟಿದೆ. ಕರ್ನಾಟಕದಲ್ಲಿ ಶೇ.86ರಷ್ಟಿದೆ. ರಾಷ್ಟ್ರೀಯ ಮಟ್ಟಕ್ಕಿಂತಲೂ ಕರ್ನಾಟಕ ಮುಂದಿದೆ. ಕರ್ನಾಟಕದ ಬೇಡಿಕೆಗೆ ಸಂಬಂಧಿಸಿದಂತೆ ನಾಲ್ಕು ವಿದ್ಯುತ್‌ ಉತ್ಪಾದನಾ ಘಟಕದಲ್ಲೂ ಸಾಕಷ್ಟು ಸಂಗ್ರಹ ಇದೆ. ಕರ್ನಾಟಕಕ್ಕೆ ಎಷ್ಟು ಬೇಡಿಕೆ ಇದೆಯೋ ಅಷ್ಟು ಪೂರೈಸಲು ನಾವು ಸಿದ್ಧರಿದ್ದೇವೆ.

* ಉತ್ತರ ಕರ್ನಾಟಕದ ಭಾಗದವರು ನಿಮ್ಮಿಂದ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರಲ್ಲವೇ?
ನಾನು ಆ ಭಾಗದಿಂದ ಆಯ್ಕೆಯಾಗಿರುವುದರಿಂದ ಸಹಜವಾಗಿ ಆ ನಿರೀಕ್ಷೆ ಇದ್ದೇ ಇರುತ್ತದೆ. ಆದರೆ, ಉತ್ತರ ಕರ್ನಾಟಕದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದರ ಜತೆಗೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಕೆಲಸ ಮಾಡಲಿದ್ದೇನೆ. ರಾಜ್ಯದ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಹಿರಿಯರ ಮಾರ್ಗದರ್ಶನ ಪಡೆದು ಮುನ್ನಡೆಯಲಿದ್ದೇನೆ.

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next