ತೀರ್ಥಹಳ್ಳಿ : ಹುಟ್ಟಿದಾಗ ಉಸಿರು ಇರುತ್ತೆ ಹೆಸರು ಇರಲ್ಲ, ಸಾಯುವಾಗ ಹೆಸರು ಇರುತ್ತೆ ಉಸಿರು ಇರಲ್ಲ, ಈ ಉಸಿರು ಹೆಸರಿನ ಮಧ್ಯೆ ಇರುವುದೇ ಜೀವನ. ಸುದ್ದಿಗಾಗಿ ಸೇವೆ ಮಾಡಬೇಡ, ಸೇವೆ ಮಾಡಿ ಸುದ್ದಿ ಆಗಬೇಡ ಸದ್ದಿಲ್ಲದೇ ಸೇವೆ ಮಾಡು ಎಂದು ಹೇಳುತ್ತಾರೆ ಆ ನಿಟ್ಟಿನಲ್ಲಿ ನಾನು ವೃತ್ತಿಯಲ್ಲಿ ವೈದ್ಯನಾದರೂ ಪ್ರವೃತ್ತಿಯಲ್ಲಿ ನಾನು ಸ್ವಯಂ ಸೇವಕ. ಪ್ರತಿಯೊಬ್ಬ ಪದವಿಧರರ ಸಮಸ್ಯೆ ಏನು ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ, ಸಾಮಾನ್ಯ ಜನರ ಕಷ್ಟ ಏನು ಎಂಬುದು ಅರ್ಥವಾಗಿದೆ. ಖಂಡಿತವಾಗಿ ಅವರೆಲ್ಲರ ಧ್ವನಿಯಾಗಿ ವಿಧಾನ ಪರಿಷತ್ ನಲ್ಲಿ ಕೆಲಸ ಮಾಡುತ್ತೇನೆ ಎಂದು ಡಾ. ಧನಂಜಯ್ ಸರ್ಜಿ ಹೇಳಿದರು.
ಗುರುವಾರ ಪಟ್ಟಣದ ಮಯೂರ ಹೋಟೆಲ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಒಂದು ವರ್ಷಕ್ಕೆ ಮೂರು ಲಕ್ಷದ ಎಪ್ಪತ್ತು ಸಾವಿರ ಪದವಿಧರರು ಹೊರ ಹೊಮ್ಮುತ್ತಿದ್ದಾರೆ. ಬಹಳಷ್ಟು ಮಂದಿಗೆ ಉದ್ಯೋಗದ ಸಮಸ್ಯೆ ಇದೆ.ಅನುದಾನಿತ ಶಾಲಾ ಶಿಕ್ಷಕರಿಗೆ ಸಮಸ್ಯೆ ಇದೆ. ಓಪಿಎಸ್ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷವಾಯಿತು ಇಲ್ಲಿಯವರೆಗೆ ಒಂದು ಚಕಾರನ್ನು ಎತ್ತಿಲ್ಲ. ಬಹಳ ಮುಖ್ಯವಾಗಿ ಈ ಕ್ಷೇತ್ರ ಒಂದು ಟೂರಿಸ್ಟ್ ಕ್ಷೇತ್ರವಾಗಿದ್ದು ಎಲ್ಲವನ್ನು ಅಭಿವೃದ್ಧಿ ಮಾಡುವತ್ತ ನಾನು ಮತ್ತು ಎಸ್ ಎಲ್ ಭೋಜೆಗೌಡರು ಧ್ವನಿಯಾಗಿರುತ್ತೇವೆ ಎಂದರು.
ದಕ್ಷಿಣ ಕ್ಷೇತ್ರದ ಎಲ್ಲೆಡೆ ಪ್ರಚಾರ ನಡೆಸಿ ಕೊನೆಯದಾಗಿ ಶಿವಮೊಗ್ಗಕ್ಕೆ ಬಂದಿದ್ದೇನೆ ಎಲ್ಲಾ ಕಡೆ ವಾತಾವರಣ ಚೆನ್ನಾಗಿದೆ. ನೂರಕ್ಕೆ ನೂರರಷ್ಟು ಪ್ರಥಮ ಪ್ರಾಶಸ್ತ್ಯ ಮತದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ನಾನು ಮತ್ತು ಎಸ್ ಎಲ್ ಭೋಜೆಗೌಡರು ಖಂಡಿತವಾಗಿ ಗೆಲುವನ್ನು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿ ಪ್ರತಿಯೊಬ್ಬ ಮತದಾರರಿಗೂ ಮುಟ್ಟಿಸುವ ಮಾತನಾಡಿ ಮನವೊಲಿಕೆ ಮಾಡುವ ಶಕ್ತಿ ಇದೆ ಎಂದರೆ ಅದು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಎಂದು ಆತ್ಮವಿಶ್ವಾಸದಿಂದ ಹೇಳಿದರು.
ಇನ್ನು ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡಿ ಎಲ್ಲಿಂದ ಪಿಕ್ ಪಾಕೆಟ್ ಮಾಡಿ ಎಲ್ಲಿಗೆ ಕೊಡುತ್ತಿದ್ದಾರೆ ಎಂದು ಯಾರಿಗೆ ಕರೆಂಟ್ ಬಿಲ್ ಜಾಸ್ತಿ ಮಾಡಿ ಯಾರಿಗೆ ಫ್ರಿ ಕೊಟ್ರು,ಯಾರಿಗೆ ಬಸ್ ನಲ್ಲಿ ಫ್ರಿ ಕೊಟ್ರು ಎಂದು ತಿಳಿದಿದೆ. ವಿಕಾಸ ಶಾಲಾ ಕೊಠಡಿ ಎಂದು ಕೊಡುತ್ತಿದ್ದರು. ಸರ್ಕಾರಿ ಶಾಲಾ ಕೊಠಡಿಯನ್ನು ನಿರ್ಮಾಣ ಅಥವಾ ಉನ್ನತಿಕರಣಕ್ಕೆ ಅಲ್ಲಿನ ಶಾಸಕರಿಗೆ ಅನುದಾನ ನೀಡಲಾಗುತ್ತಿತ್ತು ಅದನ್ನು ಕೂಡ ಪಿಕ್ ಪಾಕೆಟ್ ಮಾಡಿದ್ದಾರೆ. ಬರದ ಸಂದರ್ಭದಲ್ಲಿ ಬಿಜೆಪಿ ನಮಗೆ ಏನು ಕೊಟ್ಟಿಲ್ಲ ಎಂದು ಚೊಂಬು ಹಿಡಿದು ಪ್ರದರ್ಶನ ಮಾಡುತ್ತಿದ್ದರು. ಚೊಂಬಿನ ಮೇಲೆ ಕಾಯಿ ಇಟ್ಟು ಮುಂದೆ ವೀಳ್ಯದೆಲೆ ಇಟ್ಟರೆ ಕಲಶವಾಗುತ್ತದೆ. ಭಾರತೀಯ ಜನತಾ ಪಕ್ಷ ಕೊಡುವುದು ಕಲಶ ಕಾಂಗ್ರೆಸ್ ಕೊಡುವುದು ಚಿಪ್ಪು ಎಂದು ಹರಿಹಾಯ್ದರು.
ಈಶ್ವರಪ್ಪನವರ ಗುಂಡಿನ ಪಾರ್ಟಿ ಹೇಳಿಕೆ ಬಗ್ಗೆ ಮಾತನಾಡಿ ಕೈಲಾಗದ ಶತ್ರುವಿನ ಕೊನೆಯ ಆಯುಧವೇ ಅಪಪ್ರಚಾರ. ಡಾ. ಸರ್ಜಿ ಯಾವ ರೀತಿಯ ವ್ಯಕ್ತಿತ್ವದ ವ್ಯಕ್ತಿ ಎಂದು ಎಲ್ಲರಿಗೂ ತಿಳಿದಿದೆ. ನಾನು ಅವಾಗಲು ಸ್ವಯಂ ಸೇವಕ ಈಗಲೂ ಸ್ವಯಂ ಸೇವಕ, ಸಮಾಜಕ್ಕೆ ಒಳ್ಳೆಯ ಸೇವೆ ಮಾಡಲು ಮುಂದೆ ಬಂದಿದ್ದೇನೆ. ಅವರಿಗೆ ಜೂ 4 ರ ಲೋಕಸಭಾ ಚುನಾವಣೆ ಫಲಿತಾಂಶದಂದು ತಿಳಿಯಲಿದೆ. ಅವರಿಗೆ ಉತ್ತರ ಕೊಡಲು ನಾನು ತುಂಬಾ ಸಣ್ಣವನಿದ್ದೇನೆ ಅವರಿಗೆ ಜನರೇ ಉತ್ತರ ಕೊಡುತ್ತಾರೆ ಎಂದರು.
ಪ್ರಜ್ವಲ್ ರೇವಣ್ಣ ಬಗ್ಗೆ ಮಾತನಾಡಿ ಈಗಾಗಲೇ ಮೋದಿಯವರು ಹೇಳಿದ್ದಾರೆ ತಪ್ಪಿತಸ್ಥ ಯಾರೇ ಇದ್ದರು ಅವರಿಗೆ ಶಿಕ್ಷೆ ಆಗಲೇಬೇಕು. ಅದು ಅವರ ವಯಕ್ತಿಕ ವಿಚಾರ, ವ್ಯಕ್ತಿಗಿಂತ ಪಕ್ಷ ಮುಖ್ಯ ಪಕ್ಷಕ್ಕಿಂತ ದೇಶ ಮುಖ್ಯ ಎಂದು ಹೇಳಿರುವ ಪಕ್ಷ ನಮ್ಮದು ಹಾಗಾಗಿ ಯಾರೇ ತಪ್ಪಿತಸ್ಥರು ಇದ್ದರು ಅವರಿಗೆ ಶಿಕ್ಷೆ ಆಗಬೇಕು ಎಂದರು.
ವಿವಿಧ ಕಾಲೇಜುಗಳಿಗೆ ಭೇಟಿ
ತೀರ್ಥಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಗೆ ಭೇಟಿ ನೀಡಿದರು.ಅಲ್ಲಿನ ಆಡಳಿತ ವರ್ಗ , ಉಪನ್ಯಾಸ ವರ್ಗ ಮತ್ತು ಸಿಬ್ಬಂದಿ ವರ್ಗದವರೊಂದಿಗೆ ಸಂವಾದ ನಡೆಸಿ ತಮ್ಮನ್ನು ಬೆಂಬಲಿಸಿ ಅಧಿಕ ಮತಗಳ ಅಂತರದಿಂದ ಗೆಲ್ಲಿಸುವಂತೆ ಮತಯಾಚಿಸಿದರು
ಈ ವೇಳೆ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ, ನವೀನ್ ಹೆದ್ದೂರು, ನಾಗರಾಜ್ ಶೆಟ್ಟಿ, ಜೆಡಿಎಸ್ ನ ಕುಣಜೆ ಕಿರಣ್ ಸೇರಿ ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.