ಚಾಮರಾಜನಗರ: ಡಿ.6 ತನಕ ಏನೂ ಮಾತನಾಡಬೇಡ ಎಂದು ಹೈಕಮಾಂಡ್ ಹೇಳಿದೆ ಅಲ್ಲಿಯವರೆಗೆ ಕಾದು ನೋಡುತ್ತೇನೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಶುಕ್ರವಾರ ಹೇಳಿಕೆ ನೀಡಿ ಕುತೂಹಲ ಮೂಡಿಸಿದ್ದಾರೆ.
ನಗರಕ್ಕೆ ಖಾಸಗಿ ಭೇಟಿ ಸಂದರ್ಭ ಮಾಧ್ಯಮಗಳ ಪ್ರಶ್ನೆ ಗೆ ಉತ್ತರಿಸಿ,” ಕಾಂಗ್ರೆಸ್ ಹೋಗುವ ವಿಚಾರ ನನ್ನ ತಲೆಯಲ್ಲಿ ಇಲ್ಲ ಆ ಯೋಚನೆಯೂ ಇಲ್ಲ.ಮತ್ತೆ ಸೋಮನಹಳ್ಳಿ ಮುದುಕಿ ಕಥೆ ಹೇಳಿ, ನನ್ನ ಕೋಳಿಯಿಂದಲೆ ಬೆಳಕಾಗೋದು ಅಂತ ಕೆಲವರು ಎಂದು ಕೊಂಡಿದ್ದಾರೆ. ಆದರೆ ಅದೆಲ್ಲ ನಡೆಯುವುದಿಲ್ಲ. ಮುದುಕಿ ಯಾರು ಕೋಳಿ ಯಾರು ಎಂದು ನೀವೇ ತೀರ್ಮಾನಿಸಿ ಎಂದರು.
64 ವಿದ್ಯೆ ಕಥೆ ಹೇಳಿ,64 ವಿದ್ಯೆಯಲ್ಲಿ 62 ವಿದ್ಯೆಯಷ್ಟೆ ಅವರಿಗೆ ಗೊತ್ತಿದೆ.ಸ್ವಂತ ಬುದ್ದಿ ಇಲ್ಲ, ಬೇರೆ ಯಾರೂ ಹೇಳೋದನ್ನು ಕೇಳಲ್ಲ ಎಂದು ಪರೋಕ್ಷವಾಗಿ ವಿಜಯೇಂದ್ರ ಅವರಿಗೆ ಟಾಂಗ್ ಕೊಟ್ಟರು. ಬೆಲ್ಲದ್, ಲಿಂಬಾವಳಿ, ಯತ್ನಾಳ್ ಹೇಳಿಕೆಗಳನ್ನು ಸಮರ್ಥಿಸಿಕೊಂಡರು.
ಸಚಿವ ರಾಜಣ್ಣ ಅವರಿಗೆ ಕರೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದಗಂಗಾ ಮಠದ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಕರೆ ಮಾಡಿದ್ದೆ.ನಾನೇನು ಶಕ್ತಿ ಪ್ರದರ್ಶನಕ್ಕೆ ಮಠ ತಗೊಂಡು ಹೋಗಲ್ಲ. ಅಷ್ಟೊಂದು ಕಿರಾತಕ ನಾನಲ್ಲ.ನಮ್ಮ ಕುಟುಂಬದಿಂದ ಗುರು ಭವನ ಕಟ್ಟಿದ್ದೇವೆ.ಆ ಕಾರ್ಯಕ್ರಮಕ್ಕೆ ಎಲ್ಲ ಪಕ್ಷದವರು ಬರುತ್ತಾರೆ. ಅದೇ ರೀತಿ ಆ ಜಿಲ್ಲೆಯ ಎರಡು ಸಚಿವರನ್ನ ಆಹ್ವಾನ ಮಾಡಿದ್ದೇನೆ ಎಂದರು.
ಸಿಎಂ, ಡಿಸಿಎಂ ಭೇಟಿ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ”ನನ್ನ ಜೀವನದಲ್ಲಿ ನಾನು ಯಾರನ್ನೂ ಭೇಟಿ ಮಾಡುವ ಪರಿಸ್ಥಿತಿ ನನ್ನದಲ್ಲ.ನಾನು ಇನ್ನೊಬ್ಬರ ಹತ್ತಿರ ಹೋಗಿ ಹಲ್ಲು ಕಿಸಿದು, ನನ್ನ ಪಾರ್ಟಿಗೆ ಸೇರಿಸಿಕೊಳ್ಳಿ ಅಂತ ಹೇಳಲ್ಲ.ನನಗೆ ಆ ಗತಿ ಬಂದಿಲ್ಲ, ನಾನು ಸೋಮಣ್ಣ.ನಾನು ಬೆಳೆದಿರುವುದು ಜೆ.ಎಚ್.ಪಟೀಲ್, ದೇವೇಗೌಡ, ರಾಮಕೃಷ್ಣ ಹೆಗಡೆ ಗರಡಿಯಲ್ಲಿ.ಸ್ವಾಭಿಮಾನ, ಸಂಸ್ಕಾರ ಇಟ್ಟುಕೊಂಡು ಬದುಕಿದ್ದೇನೆ.ನಾನೆಲ್ಲೂ ಒಂದು ಕಡೆ ರಾಜ್ಯಾಧ್ಯಕ್ಷ ಹುದ್ದೆ ಕೇಳಿದ್ದೆ. ಆದರೆ ಅದು ಏನಾಗಿದೆ ಅಂತ ಡಿ.6 ರಂದು ಹೇಳುತ್ತೇನೆ ”ಎಂದರು.
ಯಡಿಯೂರಪ್ಪ ಸಂಪರ್ಕ ವಿಚಾರಕ್ಕೆ ಪ್ರತಿಕ್ರಿಯಿಸಿ,”ಯಡಿಯೂರಪ್ಪನೂ ಇಲ್ಲ ,ತಿಮ್ಮಪ್ಪ, ಯಾವ ಬೊಮ್ಮಪ್ಪನು ನನಗೆ ಯಾರೂ ಕರೆ ಮಾಡಿಲ್ಲ. ನಾನು ಯಾರನ್ನೂ ಸಂಪರ್ಕಿಸುವ ಪರಿಸ್ಥಿತಿಯೂ ಇಲ್ಲ” ಎಂದರು.
ಲೋಕಸಭೆ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ”ನಾನು ಕಂಟೆಂಟ್ರು ಅಲ್ಲ, ಕಾಂಪಿಟೇಟರೂ ಅಲ್ಲ.ಯಾರನ್ನೂ ಕೂಡ ನನ್ನ ಜತೆ ಹೋಲಿಕೆ ಮಾಡಬೇಡಿ. ನೀವು ನೋಡಿದ್ದೀರಾ ಏನೇನು ಹಲ್ಕಾ ಕೆಲ್ಸ ಆಯ್ತು ಅಂತ ನಿಮಗೆ ಗೊತ್ತಿದೆ. ನನಗೆ ನನ್ನದೇ ಆದ ದುಡಿಮೆ ಇದೆ. ಶ್ರಮ ಇದೆ. ಸೋಮಣ್ಣ ನಿಂತ ನೀರಲ್ಲ, ಹರಿಯುವ ನೀರು. ನನ್ನ ಅಂತರಾಳದ ನೋವನ್ನ ವರಿಷ್ಠರಿಗೆ ತಿಳಿಸಿದ್ದೇನೆ. ಎಲ್ಲೆಲ್ಲಿ ತಪ್ಪಾಗಿದೆ ಎನ್ನುವ ಮಾಹಿತಿಯನ್ನು ವರಿಷ್ಠರಿಗೆ ತಿಳಿಸಿದ್ದೇನೆ. ಡಿ.6 ರಂದು ಎಲ್ಲವನ್ನೂ ವಿವರಿಸುತ್ತೇನೆ” ಎಂದರು.