Advertisement
ಸೋಮವಾರ ವೀರಶೈವ ಮುಖಂಡರ ಸಭೆ ಬಳಿಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ , ಕೇಂದ್ರ ಸಚಿವ ಅಮಿತ್ ಶಾ ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ ವೇಳೆ ನಡೆದ ಸಮಾವೇಶದಲ್ಲಿ ಜೆಡಿಎಸ್ ಕುರಿತು ಮಾಡಿರುವ ಟೀಕೆಗಳಿಗೆ ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಮಂಡ್ಯ ಜಿಲ್ಲೆಗೆ ಬಿಜೆಪಿ ಕೊಡುಗೆ ಏನೆಂದು ತಿಳಿಸಲಿ. ಮಂಡ್ಯದಲ್ಲಿ ನಡೆದ ಬಿಜೆಪಿ ಸಮಾವೇಶಕ್ಕೆ ಹಣಕೊಟ್ಟು ಜನರನ್ನು ಕರೆದುಕೊಂಡು ಬಂದಿದ್ದರು. ಆದರೆ ನಾನು ಹೋದೆಡೆಯೆಲ್ಲಾ ಜನರು ಸ್ವಯಂ ಪ್ರೇರಣೆಯಿಂದ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಮೇಲುಗೈ ಸಾಧಿಸಲು ಸಾಧ್ಯವಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರುವುದಿಲ್ಲ. ನಾನು ಚಾಲೆಂಜ್ ಮಾಡಿ ಹೇಳುತ್ತೀನಿ, ಮುಂದಿನ ಚುನಾವಣೆಯಲ್ಲಿ ಕನ್ನಡಿಗರ ಪಕ್ಷ ಜೆಡಿಎಸ್ ಬಹುಮತ ಪಡೆಯಲಿದೆ ಎಂದರು.
ಯಾವುದೇ ಕಾರಣಕ್ಕೂ ಅತಂತ್ರ ಫಲಿತಾಂಶ ಬರುವುದಿಲ್ಲ. ರಾಜ್ಯದ ಜನರು ಜೆಡಿಎಸ್ ಗೆ ಅಧಿಕಾರ ನೀಡಲಿದ್ದಾರೆ. ಮುಂದಿನ ಸಂಕ್ರಾಂತಿ ನಂತರ ಎರಡು ಪಟ್ಟಿ ಬಿಡುಗಡೆ ಮಾಡುತ್ತೇವೆ.ನಾಲ್ಕೈದು ಕ್ಷೇತ್ರಗಳ ಪಟ್ಟಿ ಬಿಡುಗಡೆ ಸಂಬಂಧ ಪ್ರಮುಖರ ಸಭೆ ಕರೆದು ತೀರ್ಮಾನ ಮಾಡುತ್ತೇನೆ.ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮಂಡ್ಯಕ್ಕೆ ಬಂದು ಸಾರ್ವಜನಿಕವಾಗಿ ಟೀಕೆ ಮಾಡಿದ್ದಾರೆ. ರಾಜ್ಯ ನಮ್ಮ ಕುಟುಂಬದ ಎಟಿಎಂ ಎಂದಿದ್ದಾರೆ. ಯಾವುದಾದರೂ ಪ್ರಕರಣದಲ್ಲಿ ದೇವೇಗೌಡ ಅವರು ಪ್ರಧಾನಿ ಆಗಿದ್ದಾಗ, ನಾನು ಸಿಎಂ ಆಗಿದ್ದಾಗ ಸರ್ಕಾರದ ಖಜಾನೆ ಲೂಟಿ ಮಾಡಿದ ಒಂದೇ ಒಂದು ಪ್ರಕರಣ ತೋರಿಸಲಿ.ಇಂದು ಬಿಜೆಪಿ ಲೂಟಿ ಮಾಡುತ್ತಿರೋದು ಎಲ್ಲರಿಗೂ ಗೊತ್ತಿದೆ ಎಂದರು.
ಅಮಿತ್ ಶಾ ಅವರ ಮಗನಿಗೆ ಬಿಸಿಸಿಐ ನ ಹುದ್ದೆ ಕೊಟ್ಟರು. ಯಾವ ಆಧಾರದ ಮೇಲೆ ಕೊಟ್ಟಿರಿ. ಕೋರ್ಟ್ ಆದೇಶಗಳಾದರೂ ಕೊಟ್ಟಿರಿ ಎಂದು ಪ್ರಶ್ನಿಸಿದರು.
ಇದು ಕನ್ನಡಿಗರ, 6.5 ಕೋಟಿ ಕನ್ನಡಿಗರ ಎಟಿಎಂ.ಹೊಂದಾಣಿಕೆ ಮಾಡಿಕೊಳ್ಳಲು ನಾನು ಬಿಜೆಪಿಯವರ ಮನೆ ಬಾಗಿಲಿಗೆ ಹೋಗಿಲ್ಲ. ನಾನು ಅಮಿತ್ ಶಾ ಮನೆಗೆ ಹೋಗಿದ್ದೀನಾ.ಹೊಂದಾಣಿಕೆ ಬಗ್ಗೆ ಯಾಕೆ ಮಾತನಾಡುತ್ತೀರಿ. ನಾನು ಪಂಚರತ್ನ ಯಾತ್ರೆ ಮಾಡ್ತಿರೋದು ಯಾರ ಮನೆ ಬಾಗಿಲಿಗೂ ಹೋಗಲು ಅಲ್ಲ.ಮಾರ್ಚ್ 20 ರವರೆಗೆ ಪಂಚರತ್ನ ಯಾತ್ರೆ ಮಾಡಲಿದ್ದೇನೆ ಎಂದರು.
ಶಾ ಅವರು ಹೆಚ್.ಡಿ. ದೇವೇಗೌಡರನ್ನು ಗೆಜ್ಜಲಗೆರೆಯಲ್ಲಿ ಹಾಡಿ ಹೊಗಳಿದ ಬಳಿಕ ಮಂಡ್ಯದಲ್ಲಿ ಟೀಕಿಸಿದ್ದಾರೆ.ದೇವೇಗೌಡರ ವಿರುದ್ದವೂ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅಮಿತ್ ಶಾ ರ ಇಂತಹ ಹೇಳಿಕೆಗಳೇ ಕರ್ನಾಟಕದಲ್ಲಿ ಬಿಜೆಪಿ ಪತನಕ್ಕೆ ಕಾರಣವಾಗಲಿದೆ. ಕರ್ನಾಟಕದಿಂದಲೇ ಬಿಜೆಪಿಯ ಪತನ ಆರಂಭವಾಗಲಿದೆ ಎಂದರು.
ವೀರಶೈವ ಲಿಂಗಾಯತ ಸಮುದಾಯವನ್ನು ಬಿಜೆಪಿ ದುರುಪಯೋಗ ಮಾಡಿಕೊಂಡಿದೆ. ಬಿಜೆಪಿ ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ. ಬಸವರಾಜ ಬೊಮ್ಮಾಯಿ ಹೆಸರಿಗಷ್ಟೇ ಮುಖ್ಯಮಂತ್ರಿ ಆಗಿದ್ದಾರೆ. ಮಂತ್ರಿಗಳನ್ನು ನೇಮಕ ಮಾಡಿಕೊಳ್ಳಲು ಬಸವರಾಜ ಬೊಮ್ಮಾಯಿಗೆ ಸಾಧ್ಯವಾಗ್ತಿಲ್ಲ. ಎಲ್ಲವೂ ದೆಹಲಿ ಬಿಜೆಪಿ ನಾಯಕರ ಅಣತಿಯಂತೆ ನಡೆಯುತ್ತಿದೆ ಎಂದರು.