ನವದೆಹಲಿ: ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಗೋವಾ ಸಿಎಂ ಮನೋಹರ್ ಪರ್ರಿಕರ್ ಜತೆ ಚರ್ಚೆ ನಡೆಸಿದರು.
ನವದೆಹಲಿಯಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿಎಸ್ ವೈ, ಮಹದಾಯಿ ವಿವಾದದ ಪರಿಹಾರಕ್ಕೆ ಸಂಬಂಧಿಸಿದಂತೆ ಶಾ ಅವರು ಪರ್ರಿಕರ್ ಜತೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ.
ರಾಜ್ಯ ನಾಯಕರ ಸಲಹೆಯನ್ನೂ ಪರ್ರಿಕರ್ ಆಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಮನೋಹರ್ ಪರ್ರಿಕರ್ ಅವರು ಫ್ಯಾಕ್ಸ್ ಮೂಲಕ ಕಳುಹಿಸುವ ಅಂತಿಮ ನಿರ್ಧಾರದ ಸಂದೇಶವನ್ನು ಹುಬ್ಬಳ್ಳಿಯಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಓದಿ ಹೇಳುವುದಾಗಿ ಬಿಎಸ್ ವೈ ಹೇಳಿದರು.
ಶಾ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ಮಾತುಕತೆ ನಡೆದಿತ್ತು. ಮಹದಾಯಿಗೆ ಸಂಬಂಧಿಸಿದಂತೆ ನಾಳೆಯೊಳಗೆ ಅನುಮತಿ ನೀಡುವ ಬಗ್ಗೆ ಪರ್ರಿಕರ್ ಅವರು ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹದಾಯಿ, ಕಳಸಾ ಬಂಡೂರಿ ವಿವಾದವನ್ನು ಒಂದು ತಿಂಗಳೊಳಗಾಗಿ ಬಗೆಹರಿಸುತ್ತೇನೆ ಎಂದು ಬಿಎಸ್ ಯಡಿಯೂರಪ್ಪ ಬಹಿರಂಗ ಸಭೆಯಲ್ಲಿ ಹೇಳಿದ್ದರು, ಈ ಹಿನ್ನೆಲೆಯಲ್ಲಿ ನಾಳೆ ಹುಬ್ಬಳ್ಳಿಯಲ್ಲಿ ನಡೆಯುವ ಬಿಜೆಪಿ ಸಮಾವೇಶದಲ್ಲಿ ಮಹದಾಯಿ ವಿವಾದಕ್ಕೆ ತೆರೆ ಬೀಳಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.