ರಾಯಚೂರು: ಬೇರೆ ಪಕ್ಷದ ಜತೆ ಬಿಜೆಪಿ ಶಾಸಕರ ಸಂಪರ್ಕದ ಬಗ್ಗೆ ಗೊತ್ತಿಲ್ಲ. ಆದರೆ, ನನಗೆ ರಾಜಕೀಯ ಬದ್ಧತೆ ಇದ್ದು, ನಾನು ಎಲ್ಲಿಯೂ ಹೋಗುವುದಿಲ್ಲ ಎಂದು ಸಕ್ಕರೆ ಮತ್ತು ಜವಳಿ ಖಾತೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ತಿಳಿಸಿದರು.
ನಗರದ ಡಿಎಆರ್ ಪರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯನವರು ಜನತಾ ಪರಿವಾರದಿಂದಲೂ ಆತ್ಮೀಯರು. ಇಂದಿಗೂ ಅದೇ ಆತ್ಮೀಯತೆ ಇದೆ. ಆದರೆ ಬಿಜೆಪಿ ಶಾಸಕರು ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಎನ್ನುವುದು ಕಾಂಗ್ರೆಸ್‌ನವರ ರಾಜಕೀಯ ಹೇಳಿಕೆ. ತಾವು ಅಧಿಕಾರಕ್ಕೆ ಬರಬೇಕು ಎನ್ನುವ ಉತ್ಸಾಹದಲ್ಲಿ ಕಾಂಗ್ರೆಸ್ ನವರು ಮಾತನಾಡುತ್ತಿದ್ದಾರೆ. ಚುನಾವಣೆ ಮುಂದಿಟ್ಟುಕೊಂಡು ಅಧಿಕಾರದಾಸೆಗೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಇದನ್ನೂ ಓದಿ:ಆಯಾ ಜಿಲ್ಲೆಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡುವುದು ಉತ್ತಮ: ಶೆಟ್ಟರ್
ಇದು ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರಿಗೆ ಇದು ಶೋಭೆ ತರುವಂಥದ್ದಲ್ಲ. ಈಗಾಗಲೇ ಕಾಂಗ್ರೆಸ್ ನಿಂದ ಗೆದ್ದ ಶಾಸಕರು, ಸಚಿವರು ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದಿದ್ದಾರೆ. ನಮ್ಮ ಪಕ್ಷದಲ್ಲಿ ಗುಂಪುಗಾರಿಕೆ ಆರಂಭವಾಗಿಲ್ಲ. ನಮ್ಮ ಹಿರಿಯರು ಅನುಭವಿಗಳಿದ್ದಾರೆ. ಹೈಕಮಾಂಡ್, ರಾಜ್ಯಾಧ್ಯಕ್ಷರ ನಿರ್ಣಯಕ್ಕೆ ಎಲ್ಲರೂ ಬದ್ಧ ಎಂದರು.
ಕಾಂಗ್ರೆಸ್ ನ 16 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ರಮೇಶ ಜಾರಕಿಹೊಳಿ ಮಾತು ನಿಜವಾಗಿರಬಹುದು. ನಮ್ಮ ಸರ್ಕಾರ ಬರಲು ರಮೇಶ ಜಾರಕಿಹೊಳಿ ಪ್ರಮುಖರು. ಕಾಂಗ್ರೆಸ್ ನಲ್ಲಿ ಅವರಿಗೆ ಸಾಕಷ್ಟು ಜನ ಸಂಪರ್ಕದಲ್ಲಿದ್ದಾರೆ ಎಂದರು.