ಬೀದರ: ಕನ್ನಡ ಸಾಹಿತ್ಯ ಪರಿಷತ್ತು ನನ್ನ ಅವಧಿಯಲ್ಲಿ ಜನಸಾಮಾನ್ಯರ, ಜನಪರ ಮತ್ತು ಜನೋಪಯಾಗಿರುವ ಪರಿಷತ್ತಾಗಿ ಕೆಲಸ ಮಾಡಲಿದೆ. ಸಾಮಾನ್ಯನೂ ಕೂಡ ನಾನೂ ಪರಿಷತ್ ಸದಸ್ಯ ಎಂದು ಗರ್ವದಿಂದ ತಲೆಯೆತ್ತಿ ಹೇಳಿಕೊಳ್ಳುವ ಮತ್ತು ಯಾರಿಗೂ ಭಾರವಾಗದ ರೀತಿಯಲ್ಲಿ ಕಸಾಪ ಕಾರ್ಯನಿರ್ವಹಿಸಲಿದೆ ಎಂದು ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ| ಮಹೇಶ ಜೋಶಿ ಹೇಳಿದರು.
ನಗರದ ರಂಗ ಮಂದಿರದಲ್ಲಿ ಜಿಲ್ಲಾ ಕಸಾಪ ಹಮ್ಮಿಕೊಂಡಿದ್ದ ಕೇಂದ್ರ ಕಸಾಪ ನೂತನ ಅಧ್ಯಕ್ಷರಿಗೆ ಅಭಿನಂದನೆ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧಿ ಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಯಾರ ನಿರೀಕ್ಷೆ ಹುಸಿಗೊಳಿಸದಂತೆ ಕೆಲಸ ನಿರ್ವಹಿಸುವೆ. ನನ್ನ ಅವ ಧಿಯಲ್ಲಿ ಯಾವೊಂದು ಕನ್ನಡ ಶಾಲೆ ಮುಚ್ಚಲು ಬಿಡುವುದಿಲ್ಲ. ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿಯದೇ ಸೌಹಾರ್ದಯುತವಾಗಿ ಕನ್ನಡದ ಕೆಲಸ ಮಾಡಲು ಪ್ರಯತ್ನಿಸುವೆ. ಕನ್ನಡ ಹಿತರಕ್ಷಣೆ ವಿಷಯದಲ್ಲಿ ಅಗತ್ಯ ಬಿದ್ದಲ್ಲಿ ಹೋರಾಟಕ್ಕೂ ಸಿದ್ಧ ಎಂದರು. ಕಸಾಪ ಆಜೀವ ಸದಸ್ಯತ್ವ ಶುಲ್ಕ 500ರಿಂದ 250 ರೂ. ಇಳಿಸಲಾಗುತ್ತಿದೆ.
ಹಾಗೆಯೇ ಗಡಿ ಕಾಯುವ ಕನ್ನಡದ ಸೈನಿಕರು ಮತ್ತು ನಿವೃತ್ತ ಯೋಧರು, ವಿಕಲಚೇತನರಿಗೆ ಶುಲ್ಕವಿಲ್ಲದೇ ಅವರ ಮನೆಗೆ ಹೋಗಿ ಪರಿಷತ್ತಿನ ಸದಸ್ಯತ್ವ ನೀಡಲಾಗುವುದು. ರಾಜ್ಯದಲ್ಲಿ 7 ಕೋಟಿ ಜನರಿದ್ದು, ಕೇವಲ 3.40 ಲಕ್ಷ ಸದಸ್ಯರಿದ್ದಾರೆ. ಪ್ರತಿಯೊಬ್ಬ ಕನ್ನಡಿಗನೂ ಕಸಾಪ ಗೌರವ ಸದಸ್ಯರಾಗಬೇಕೆಂಬ ಸದಾಶಯ ಹೊಂದಿದ್ದು, ಅದರಂತೆ 1 ಕೋಟಿ ಆಜೀವ ಸದಸ್ಯತ್ವ ಪಡೆಯುವ ಗುರಿ ಹೊಂದಲಾಗಿದೆ ಎಂದರು.
ಜಿಲ್ಲಾ ಕಸಾಪ ನಿಕಟಪೂರ್ವ ಕಾರ್ಯದರ್ಶಿ ಡಾ| ಬಸವರಾಜ ಬಲ್ಲೂರ ಪ್ರಾಸ್ತಾವಿಕ ಮಾತನಾಡಿ, ಕನ್ನಡ ಭಾಷೆ, ಜಿಲ್ಲಾ ಕಸಾಪ ಹುಟ್ಟು, ಏಳ್ಗೆ ಹಾಗೂ ಗಮನಾರ್ಹ ಕೆಲಸ ಕಾರ್ಯಗಳ ಬಗ್ಗೆ ವಿವರಣೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಕನ್ನಡ ಧ್ವಜ ನೀಡುವ ಮೂಲಕ ಜಿಲ್ಲಾ ಕಸಾಪ ನೂತನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅವರಿಗೆ ಅಧಿ ಕಾರ ಹಸ್ತಾಂತರಿಸಿದರು. ಹಿರಿಯ ಸಾಹಿತಿ ಶಿವಕುಮಾರ ಕಟ್ಟೆ ಸ್ವಾಗತಿಸಿದರು. ಶಿವಶಂಕರ ಟೋಕರೆ ನಿರೂಪಿಸಿದರು. ನೂಪುರ ನೃತ್ಯ ಅಕಾಡೆಮಿ ವತಿಯಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ ಕುಮಾರ ಗಂದಗೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರರೆಡ್ಡಿ ಮಾಲಿಪಾಟೀಲ, ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಕಲ್ಯಾಣ ಕರ್ನಾಟಕ ಸಂಸ್ಥೆ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ, ಶಾಹೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಅಬ್ದುಲ್ ಖದೀರ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ದೆ, ಪ್ರಮುಖರಾದ ಬಾಬುರಾವ್ ವಡ್ಡೆ, ಬಾಲಾಜಿ ಬಿರಾದಾರ, ಬಾಬು ದಾನಿ, ವಿಜಯಕುಮಾರ ಸೊನಾರೆ, ಎಂ.ಜಿ ಗಂಗನಪಳ್ಳಿ, ರಮೇಶ ಬಿರಾದಾರ, ಸಾರಿಕಾ ಗಂಗಾ, ಕಸ್ತೂರಿ ಪಟಪಳ್ಳಿ ಇತರರಿದ್ದರು.
ವಚನ ಸಾಹಿತ್ಯದ ಮೂಲಕ ಕನ್ನಡ ಜನ ಸಾಮಾನ್ಯರಿಗೂ ತಲುಪಿಸಿದ ಬಸವಣ್ಣನವರ ಭಾವಚಿತ್ರ ಸಾಹಿತಿಗಳ ಜೊತೆಗೆ ಅಳವಡಿಸಲಾಗುವುದು. ಭಾಲ್ಕಿ ಶ್ರೀಗಳ ಕೋರಿಕೆಯಂತೆ ಗಡಿ ಭಾಗದಲ್ಲಿ ಕನ್ನಡ ಭಾಷೆ ಉಳಿಸಿ-ಬೆಳೆಸಲು ಶ್ರಮಿಸಿದ್ದ ಲಿಂ. ಚನ್ನಬಸವ ಪಟ್ಟದೇವರ ಜನ್ಮದಿನ ಕಸಾಪದ ಎಲ್ಲ ಘಟಕಗಳಲ್ಲಿ ಆಚರಿಸಲಾಗುವುದು. ಹಾಗೆಯೇ 5 ವರ್ಷಗಳ ಅವ ಧಿಯಲ್ಲಿ ಬೀದರ ಜಿಲ್ಲೆಯಲ್ಲಿ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಚರಿಸುವಂತೆ ಬೇಡಿಕೆಯಿದೆ. ಬಸವಕಲ್ಯಾಣದಲ್ಲಿ ಒಂದು ಕೇಂದ್ರ ಸಮ್ಮೇಳನ ಆಯೋಜಿಸಲು ಪ್ರಯತ್ನಿಸುತ್ತೇನೆ.
ಡಾ| ಮಹೇಶ ಜೋಶಿ, ಕಸಾಪ ರಾಜ್ಯಾಧ್ಯಕ್ಷ
ಜಿಲ್ಲೆಯ ಕನ್ನಡಾಭಿಮಾನಿಗಳು ಕನ್ನಡ ಸೇವೆ ಸಲ್ಲಿಸಲು ಎರಡನೇ ಬಾರಿಗೆ ಅವಕಾಶ ನೀಡಿದ್ದಾರೆ. ಎಲ್ಲರ ನಿರೀಕ್ಷೆಯಂತೆ ಕನ್ನಡ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ. ಕನ್ನಡ ಭಾಷೆಯನ್ನು ದೇವಭಾಷೆಯನ್ನಾಗಿಸಿದ ಕೀರ್ತಿ ಈ ಭಾಗಕ್ಕೆ ಸಲ್ಲುತ್ತದೆ. ಇಲ್ಲಿ ಯಾವೊಂದು ಕನ್ನಡ ಶಾಲೆ ಮುಚ್ಚಲು ಬಿಡುವುದಿಲ್ಲ. ಗಡಿ ಭಾಗವಾದ ಇಲ್ಲಿ ಕನ್ನಡ ಭಾಷೆ ಅಭಿವೃದ್ಧಿಗೆ ಇರುವ ತೊಡಕು ನಿವಾರಿಸಲು ಪ್ರಯತ್ನಿಸುವೆ.
ಸುರೇಶ ಚನಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ