Advertisement

Expulsion; ನನಗೀಗ 49 ವರ್ಷ…ಇನ್ನೂ 30 ವರ್ಷ ಹೋರಾಡುತ್ತೇನೆ: ಮಹುವಾ ಕೆಂಡಾಮಂಡಲ

05:18 PM Dec 08, 2023 | Team Udayavani |

ಹೊಸದಿಲ್ಲಿ: ನಗದಿಗಾಗಿ ಪ್ರಶ್ನೆ ಪ್ರಕರಣಕ್ಕೆ ಸಂಬಂಧಿಸಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಶುಕ್ರವಾರ ಮಧ್ಯಾಹ್ನ ಲೋಕಸಭೆಯಿಂದ ಅನೈತಿಕ ನಡವಳಿಕೆಗಾಗಿ ಉಚ್ಚಾಟಿಸಲಾಗಿದೆ.

Advertisement

ನೈತಿಕ ಸಮಿತಿಯ ಕ್ರಮದ ವಿರುದ್ಧ ಆಕ್ರೋಶ ಹೊರ ಹಾಕಿದ ಸಂಸದೆ ಮಹುವಾ ಮೊಯಿತ್ರಾ, ” ನನಗೀಗ 49 ವರ್ಷ ಪ್ರಾಯ. ನಾನು ಮುಂದಿನ 30 ವರ್ಷಗಳ ಕಾಲ ಸಂಸತ್ತಿನ ಒಳಗೆ, ಸಂಸತ್ತಿನ ಹೊರಗೆ ನಿಮ್ಮೊಂದಿಗೆ ಹೋರಾಡುತ್ತೇನೆ” ಎಂದು ಕೆಂಡಾಮಂಡಲರಾಗಿದ್ದಾರೆ.

ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸುವ ನಿರ್ಣಯವನ್ನು ಸದನದಲ್ಲಿ ಅಂಗೀಕರಿಸಿದ ನಂತರ ಸೋನಿಯಾ ಗಾಂಧಿ ಸೇರಿ ಪ್ರತಿಪಕ್ಷಗಳ ಸಂಸದರು ಲೋಕಸಭೆಯಿಂದ ಹೊರ ಬಂದು ಆಕ್ರೋಶ ಹೊರ ಹಾಕಿದ್ದಾರೆ.

“ಎಥಿಕ್ಸ್ ಕಮಿಟಿ ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಮತ್ತೊಂದು ಅಸ್ತ್ರ.ಈ ಲೋಕಸಭೆಯು ಸಂಸದೀಯ ಸಮಿತಿಯ ಅಸ್ತ್ರವನ್ನೂ ಕಂಡಿದೆ. ವಿಪರ್ಯಾಸವೆಂದರೆ, ಸದಸ್ಯರಿಗೆ ನೈತಿಕ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸಲು ನೈತಿಕ ಸಮಿತಿಯನ್ನು ಸ್ಥಾಪಿಸಲಾಯಿತು. ಸಮಿತಿಯಲ್ಲಿನ ಆವಿಷ್ಕಾರಗಳು ಕೇವಲ ಇಬ್ಬರು ಖಾಸಗಿ ನಾಗರಿಕರ ಲಿಖಿತ ಸಾಕ್ಷ್ಯಗಳನ್ನು ಆಧರಿಸಿವೆ, ಅವರ ಆವೃತ್ತಿಗಳು ಭೌತಿಕ ಪದಗಳಲ್ಲಿ ಪರಸ್ಪರ ವಿರುದ್ಧವಾಗಿವೆ, ಇಬ್ಬರು ಖಾಸಗಿ ನಾಗರಿಕರಲ್ಲಿ ಒಬ್ಬರು ನನ್ನ ವಿಚ್ಛೇದಿತ ಪಾಲುದಾರರಾಗಿದ್ದು, ಅವರು ದುರುದ್ದೇಶಪೂರಿತ ಉದ್ದೇಶದಿಂದ ಸಮಿತಿಯ ಮುಂದೆ ಸಾಮಾನ್ಯ ನಾಗರಿಕರಂತೆ ವೇಷ ಹಾಕಿದ್ದಾರೆ. ನನ್ನನ್ನು ಗುರಿಯಾಗಿಸಲು ಎರಡು ಸಾಕ್ಷ್ಯಗಳನ್ನು ಬಳಸಲಾಗಿದೆ, ಅವು ಪರಸ್ಪರ ವಿರುದ್ಧ ಧ್ರುವಗಳಾಗಿವೆ” ಎಂದು ಮಹುವಾ ಮೊಯಿತ್ರಾ ಕಿಡಿ ಕಾರಿದ್ದಾರೆ.

“ಇದು ಬಿಜೆಪಿಯ ಸೇಡಿನ ರಾಜಕೀಯ. ಅವರು ಪ್ರಜಾಪ್ರಭುತ್ವವನ್ನು ಕೊಂದರು.ಇದು ಅನ್ಯಾಯ. ಮಹುವಾ ಯುದ್ಧದಲ್ಲಿ ಗೆಲ್ಲುತ್ತಾರೆ. ಜನರು ನ್ಯಾಯವನ್ನು ನೀಡುತ್ತಾರೆ. ಬಿಜೆಪಿ ಮುಂದಿನ ಚುನಾವಣೆಯಲ್ಲಿ ಸೋಲುತ್ತದೆ” ಎಂದು ಟಿಎಂಸಿ ಅಧ್ಯಕ್ಷೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ.

Advertisement

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸಿರುವ ಕ್ರಮದ ಕುರಿತು ಸಮರ್ಥಿಸಿಕೊಂಡ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ “2005 ರಲ್ಲಿ, 10 ಸಂಸದರನ್ನು ಹೊರಹಾಕಿದಾಗ, ಅದೇ ದಿನ ವರದಿಯನ್ನು ಮಂಡಿಸಲಾಗಿತ್ತು ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸಂಸದ ಸುಕಾಂತ ಮಜುಂದಾರ್ ಪ್ರತಿಕ್ರಿಯಿಸಿ “.ಈ ಹಿಂದೆಯೂ ಕಾಂಗ್ರೆಸ್ ಒಂದೇ ದಿನ 10 ಸಂಸದರನ್ನು ಅಮಾನತುಗೊಳಿಸಿತ್ತು. ಇದು ಮೊದಲ ಬಾರಿಗೆ ನಡೆಯುತ್ತಿಲ್ಲ. ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಇದು ಮೊದಲ ಬಾರಿಗೆ ಸಂಭವಿಸಬಹುದು. ಆರೋಪಿಯು ಲೋಕಸಭೆಯಲ್ಲಿ ತನ್ನ ಪರವನ್ನು ಎಂದಿಗೂ ಮಂಡಿಸಲು ಸಾಧ್ಯವಿಲ್ಲ, ಆರೋಪಿಯು ತನ್ನ ಪರವನ್ನು ಪ್ರಸ್ತುತಪಡಿಸಬೇಕಾದರೆ ಅದು ನೈತಿಕ ಸಮಿತಿಯ ಮುಂದೆ ಇರಬೇಕು.ಮಹುವಾ ಮೊಯಿತ್ರಾ ಅವರನ್ನು ಸಮಿತಿಯ ಮುಂದೆ ಕರೆಯಲಾಯಿತು. ಅವರು ಸ್ವಲ್ಪ ಸಮಯದವರೆಗೆ ತನ್ನ ಪರವಾಗಿ ಮಂಡಿಸಿದರು. ನಂತರ ಪ್ರಶ್ನೆಗಳಿಗೆ ಉತ್ತರಿಸಬೇಕೆನ್ನುವಷ್ಟರಲ್ಲಿ ಉತ್ತರಿಸಲಾಗದೆ ಓಡಿ ಹೋದರು. ಉತ್ತರ ಕೊಡಬೇಕಾದರೆ ಸಮಿತಿಯ ಮುಂದೆಯೇ ಕೊಡಬೇಕಿತ್ತು’’ ಎಂದು ಹೇಳಿದ್ದಾರೆ. ”ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ರಾಜಕೀಯ ಬೇಡ” ಎಂದು ಪಶ್ಚಿಮ ಬಂಗಾಳದ ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಹೇಳಿದ್ದಾರೆ.

ಏನಿದು ಪ್ರಕರಣ?

ಮಹುವಾ ಮೊಯಿತ್ರಾ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಆರೋಪ ಮಾಡಿದ್ದು ಟಿಎಂಸಿಯು ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ನಗದು ಮತ್ತು ಉಡುಗೊರೆಗಳಿಗೆ ಬದಲಾಗಿ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳುತ್ತಿದೆ ಎಂದು ಆರೋಪಿಸಿದ್ದರು. ಮೊಯಿತ್ರಾ ಮತ್ತು ಹಿರಾನಂದನಿ ನಡುವಿನ ಆಪಾದಿತ ವಿನಿಮಯದ ನಿರಾಕರಿಸಲಾಗದ ಪುರಾವೆ ಎಂದು ವಕೀಲ ಜೈ ಅನಂತ್ ದೆಹದ್ರಾಯಿ ಅವರ ಪತ್ರವನ್ನು ಉಲ್ಲೇಖಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next