Advertisement

ಪ್ರಜಾಕೀಯದ ಮೂಲಕ ನಾನಂದುಕೊಂಡಿರುವುದು ಸಾಧಿಸುವೆ

12:33 PM Mar 07, 2018 | Team Udayavani |

ಬೆಂಗಳೂರು: “ಪ್ರಜಾಕೀಯದಲ್ಲಿ ರಾಜಕೀಯ ಇರುವುದಿಲ್ಲ, ಪ್ರಜಾಕೀಯದ ಮೂಲಕ ನಾನಂದುಕೊಂಡಿರುವುದು ಸಾಧಿಸುವೆ’ ಕೆಪಿಜೆಪಿಗೆ ಗುಡ್‌ಬೈ ಹೇಳಿ “ಪ್ರಜಾಕೀಯ’ ಪಕ್ಷ ಕಟ್ಟಲು ಮುಂದಾಗಿರುವ ರಿಯಲ್‌ ಸ್ಟಾರ್‌ ಖ್ಯಾತಿಯ ನಟ ಉಪೇಂದ್ರ ಅವರ ಮನದಾಳದ ಮಾತಿದು.

Advertisement

“ಉದಯವಾಣಿ’ ಜತೆ ಪ್ರಜಾಕೀಯ ಜರ್ನಿ ಕುರಿತು ಮಾತನಾಡಿದ ಅವರು, ನನಗೆ ತತಕ್ಷಣ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಬೇಕು ಎಂಬ ತವಕ ಇಲ್ಲ. ಪರಿವರ್ತನೆ ಎಂಬುದು ಅಂದುಕೊಂಡ ತಕ್ಷಣ ಆಗುವುದಿಲ್ಲ ಎಂಬುದೂ ನನಗೆ ಗೊತ್ತಿದೆ. ಹೀಗಾಗಿ, ನಾನು ಆಶಾವಾದಿ ಎಂದು ಹೇಳಿದರು.

* ರಾಜಕೀಯದ ಬಗ್ಗೆ ಭ್ರಮನಿರಸವಾಯ್ತಾ?
ರಾಜಕೀಯದ ಬಗ್ಗೆ ನನಗೆ ಯಾವಾಗಲೋ ಭ್ರಮನಿರಸವಾಗಿತ್ತು. ಆದರೆ, ಪ್ರಜಾಕೀಯ, ಪ್ರಜಾಕಾರಣದ ಬಗ್ಗೆ ಭರವಸೆ ಇತ್ತು. ಈಗಲೂ  ಇದೆ. ಮುಂದೆಯೂ ಇರುತ್ತೆ.

* ರಾಜಕೀಯ-ಪ್ರಜಾಕೀಯಕ್ಕೆ ವ್ಯತ್ಯಾಸವೇನು?
ರಾಜಕೀಯ ಎಂದರೆ ಜಾತಿ, ಹಣ, ಧರ್ಮ, ವರ್ಚಸ್ಸು. ಪ್ರಜಾಕೀಯ ಎಂದರೆ ಜನಸಾಮಾನ್ಯರ ವಾಸ್ತವ ಸಮಸ್ಯೆ ಪರಿಹರಿಸಲು ನಡೆಸುವ ಪ್ರಾಮಾಣಿಕ ಪ್ರಯತ್ನ.

* ಹಾಗಾದರೆ ಪ್ರಜಾಕೀಯ ರಾಜಕೀಯ ಮಾಡುವುದಿಲ್ಲವೇ?
ಖಂಡಿತ ಮಾಡುತ್ತದೆ. ರಾಜಕೀಯ ಮಾಡಬೇಕು ಎಂದೇ ಪ್ರಜಾಕೀಯ  ಎಂಬ ಪಕ್ಷ ನೋಂದಣಿ ಮಾಡಿಸಲು ನಿರ್ಧರಿಸಿದ್ದೇನೆ. ಆದರೆ, ಅದು ಸಂಪೂರ್ಣ ರಾಜಕೀಯ ಆಗಬೇಕಿಲ್ಲ. ಜನರ ಸಮಸ್ಯೆಗೆ  ಸ್ಪಂದಿಸುವ ಗುಣ, ಮಾನವೀಯತೆ ಸ್ಪರ್ಶವುಳ್ಳ ಪ್ರಣಾಳಿಕೆ, ಎಲ್ಲರೂ ಕಾರ್ಯಕರ್ತರು ಎಂದು ಕೆಲಸ ಮಾಡುವ ಮನಸ್ಸುಗಳು ಇರಬೇಕು. ಆ ನಂತರ ರಾಜಕೀಯದ ಮಾತು

Advertisement

* ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಯೋಜನೆ ಇದೆಯೋ ಇಲ್ಲವೋ?
ಇದೆ. ನಮ್ಮಲ್ಲಿ ಅಭ್ಯರ್ಥಿಗಳೂ ಇದ್ದಾರೆ. ಆದರೆ, ಪಕ್ಷ ಬೇಕಲ್ಲವೇ? ಪ್ರಜಾಕೀಯ ನೋಂದಣಿ ಮಾಡಿಸುತ್ತೇನೆ. ಅವಕಾಶ ಸಿಕ್ಕರೆ ಸ್ಪರ್ಧೆ ಮಾಡ್ತೇವೆ, ಇಲ್ಲದಿದ್ದರೆ ಮುಂದಿನ ಚುನಾವಣೆವರೆಗೂ ಕಾಯೆವೆ

* ನೀವೇನೋ ಮುಂದಿನ ಚುನಾವಣೆವರೆಗೂ ಕಾಯಲಯ ಸಿದ್ಧ.  ಈಗಾಗಲೇ ನೀವು ಗುರುತಿಸಿರುವ ಅಭ್ಯರ್ಥಿಗಳು?
ಅವರೂ ಕಾಯಲು ಸಿದ್ಧ. ಆ ಮಾತು ಅವರಿಂದ ಬಂದಿದ್ದರಿಂದಲೇ ನಾನು ಮತ್ತಷ್ಟು ಆತ್ಮವಿಶ್ವಾಸ ತಂದುಕೊಂಡು ಹೊಸ ಪಕ್ಷ ಕಟ್ಟುವ ತೀರ್ಮಾನ ಮಾಡಿದ್ದೇನೆ. ಇದು ನನ್ನೊಬ್ಬನ ನಿರ್ಧಾರ ಅಲ್ಲವೇ ಅಲ್ಲ.

* ರಾಜಕೀಯ ಸಾಕಪ್ಪಾ ಅನ್ನಿಸಿ, ಮತ್ತೆ ಸಿನಿಮಾಗೆ ಹೋಗಬೇಕು ಅನ್ನಿಸಿದೆಯಾ?
ನಾನು ಒಂದು ಸಂಕಲ್ಪ ತೊಟ್ಟು  ಇಲ್ಲಿ ಬಂದಿದ್ದೇನೆ. ಹಿಂದೆ ಹೋಗುವ ಮಾತೇ ಇಲ್ಲ. ಹಾಗಂತ ಸಿನಿಮಾ ಪೂರ್ಣವಾಗಿ ಬಿಡುವುದೂ ಇಲ್ಲ. ಆಲ್ಲಿ ಕೆಲಸ ಇಲ್ಲದಿದ್ದಾಗ ಇಲ್ಲಿ, ಇಲ್ಲಿ ಕೆಲಸ ಇಲ್ಲದಿದ್ದಾಗ ಅಲ್ಲಿ ಇದ್ದೇ ಇರುತ್ತೇನೆ. 

* ನಿಮ್ಮ ರಾಜಕೀಯ ಪ್ರವೇಶ ಪ್ರಥಮ ಚುಂಬನಂ ದಂತಭಗ್ನಂ ಎಂಬಂತಾಗಲಿಲ್ಲವೇ?
ಹಾಗೇನೂ ಇಲ್ಲ. ಒಂದಷ್ಟು ಪಾಠ, ಅನುಭವ ಬಂದಂತಾಯ್ತು, ಮುಂದಿನ ನನ್ನ ಹಾದಿ ಸ್ಪಷ್ಟವಾಯ್ತು.

* ಕೆಪಿಜೆಪಿ ಸಂಸ್ಥಾಪಕ ಮಹೇಶ್‌ಗೌಡ ಉಪೇಂದ್ರ ಪಕ್ಷ ಬಿಟ್ಟದ್ದು ನೋವಾಗಿದೆ. ಮತ್ತೆ ಬಂದರೆ ಅವರೇ ನಮ್ಮ ನಾಯಕರು ಅಂತ ಹೇಳಿದಾರೆ?
ಅಯ್ಯೋ ಬೇಡ ಬಿಡಿ ಸಾರ್‌. ಅವರ ಪಕ್ಷ ಅವರೇ ಇರಲಿ ಬಿಡಿ. ನಮ್ಮ ಬಗ್ಗೆ ಕಾಳಜಿಗೆ ಥ್ಯಾಂಕ್ಸ್‌

* ಪ್ರಜಾಕೀಯ ಕೆಪಿಜೆಪಿ ಕಾನ್ಸೆಪ್ಟ್ ಅಂದಿದ್ದಾರೆ?
ಅಂದುಕೊಳ್ಳಲಿ ಬಿಡಿ.ಜನರಿಗೆ ನಿಜ ಗೊತ್ತಲ್ಲವೇ. 

ಚಿಹ್ನೆ ತಿರ್ಮಾನವಾಗಿಲ್ಲ
ಆಟೋ ಚಾಲಕರು, ಕಾನೂನು ಸುವ್ಯವಸ್ಥೆ ಕಾಪಾಡೋ ಪೊಲೀಸರು, ಕಾರ್ಮಿಕರು ಸೇರಿದಂತೆ ಶ್ರಮಿಕರ ಸಂಕೇತವಾದ ಖಾಕಿಯೇ ನಮಗೆ ಪರ್ಮನೆಂಟ್‌. ಚಿಹ್ನೆ ಏನಿರಬೇಕು ಎಂಬುದು  ಎಲ್ಲರೂ ಕುಳಿತು ತೀರ್ಮಾನಿಸುತ್ತೇವೆ. ನಾನೆಂದೂ ಒಬ್ಬನೇ ಕುಳಿತು ತೀರ್ಮಾನ ಕೈಗೊಂಡಿಲ್ಲ. ಮುಂದೆಯೂ ಕೈಗೊಳ್ಳುವುದೂ ಇಲ್ಲ. ಎಲ್ಲರಂತೆ ನಾನೂ ಕಾರ್ಯಕರ್ತ, ಇಲ್ಲಿ ಯಾರೂ ನಾಯಕರಿಲ್ಲ.
-ಉಪೇಂದ್ರ

* ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next