ಬೆಂಗಳೂರು: ರಾಜ್ಯದ ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಶ್ರೀಲಂಕಾ ರಾಜಧಾನಿ ಕೊಲಂಬೋದ ಕ್ಯಾಸಿನೋ ಮತ್ತು ಶಾಸಕ ಜಮೀರ್ ಅಹಮದ್ ಹೆಸರು ಮತ್ತೆ ಮತ್ತೆ ತಳುಕು ಹಾಕುತ್ತಿದೆ. ಈ ಬಗ್ಗೆ ಮಾತನಾಡಿದ ಶಾಸಕ ಜಮೀರ್ ಅಹಮದ್ ಖಾನ್ ನಾನು ಕೊಲಂಬೋ ಕ್ಯಾಸಿನೋಗೆ ಹೋಗಿದ್ದು ನಿಜ. ಆದರೆ ಸಂಜನಾ ಗಲ್ರಾನಿ ಜೊತೆ ಹೋಗಿಲ್ಲ ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ಮಾತನಾಡಿದ ಅವರು ಕ್ಯಾಸಿನೋಗೆ ಹೋಗವುದು ತಪ್ಪಲ್ಲ. ಎಲ್ಲಾ ರಾಜಕಾರಣಿಗಳು ಹೋಗುತ್ತಾರೆ. ನಾನು ಜೆಡಿಎಸ್ ನಲ್ಲಿ ಇದ್ದಾಗ ಎಚ್ ಡಿ ಕುಮಾರಸ್ವಾಮಿ ಕೂಡಾ ನಮ್ಮ ಜೊತೆ ಬಂದಿದ್ದರು ಎಂದು ಜಮಿರ್ ಹೇಳಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ದಂಧೆಯಲ್ಲಿ ರಾಜ್ಯದ 32 ರಾಜಕಾರಣಿಗಳು ಶಾಮೀಲು: ಪ್ರಮೋದ್ ಮುತಾಲಿಕ್ ಸ್ಪೋಟಕ ಮಾಹಿತಿ
ಜೆಡಿಎಸ್ ನಲ್ಲಿದ್ದಾಗ ಎಚ್ ಡಿ ಕುಮಾರಸ್ವಾಮಿ ಸೇರಿ 26 ಮಂದಿ ಶಾಸಕರು ಒಟ್ಟಿಗೆ ಹೋಗಿದ್ದೇವು. ಅದೇನು ಕಾನೂನು ಬಾಹಿರ ಅಲ್ಲ. ಎಲ್ಲಾ ರಾಜಕಾರಣಿಗಳು ಕ್ಯಾಸಿನೋಗೆ ಹೋಗುತ್ತಾರೆ. ಅವರಲ್ಲಿ ಬಿಜೆಪಿಗರೇ ಹೆಚ್ಚು ಎಂದು ಜಮೀರ್ ಹೇಳಿದರು.
ನಾನು ಕ್ಯಾಸಿನೋ ಗೆ ಹೋಗಿರುವುದು ನಿಜ. ಆದರೆ ಸಂಜನಾ ಜೊತೆ ನಾನು ಹೋಗಿಲ್ಲ. ನನಗೂ ಡ್ರಗ್ ಜಾಲಕ್ಕೂ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಡ್ರಗ್ ಜಾಲದಲ್ಲಿ ನನ್ನ ಹೆಸರು ಸಾಬೀತಾದರೆ ನನಗೆ ಗಲ್ಲು ಶಿಕ್ಷೆ ನೀಡಿ ಎಂದು ಜಮೀರ್ ಅಹಮದ್ ಖಾನ್ ಹೇಳಿದರು.