ಇಸ್ಲಾಮಾಬಾದ್: ಅಧಿಕಾರದಲ್ಲಿದ್ದಾಗ ನಾನು ಅಪಾಯಕಾರಿ ವ್ಯಕ್ತಿಯಾಗಿರಲಿಲ್ಲ, ಆದರೆ ನಾನೀಗ ಹೆಚ್ಚು ಅಪಾಯಕಾರಿ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬುಧವಾರ (ಏ.13) ಪೇಶಾವರದಲ್ಲಿ ನಡೆದ ಸಮಾರಂಭದಲ್ಲಿ ಎಚ್ಚರಿಕೆಯನ್ನು ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸಿಎಂ ಗೃಹ ಕಚೇರಿಗೆ ಮುತ್ತಿಗೆ ಯತ್ನ: ಹೈಡ್ರಾಮಾ ಸೃಷ್ಟಿಸಿದ ಕೈ ನಾಯಕರು
“ತನ್ನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವ ಸಂದರ್ಭದಲ್ಲಿ ದೊಡ್ಡ ಸಂಚು ನಡೆಸಲಾಗಿತ್ತು ಎಂದು ಕಿಡಿಕಾರಿರುವ ಇಮ್ರಾನ್ ಖಾನ್, ಕಳೆದ ವಾರ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯ ಅಂಗೀಕರಿಸುವ ಮುನ್ನವೇ ಮಧ್ಯರಾತ್ರಿ ಕೋರ್ಟ್ ತೆರೆದಿದ್ದೇಕೆ” ಎಂದು ಪ್ರಶ್ನಿಸಿದ್ದಾರೆ.
ರಾತ್ರಿ ಕೋರ್ಟ್ ಗಳನ್ನು ತೆರೆದಿದ್ದೇಕೆ? ನಾನು ಯಾವ ಕಾನೂನು ಉಲ್ಲಂಘಿಸಿದ್ದೇನೆ. ನ್ಯಾಯಾಂಗವೂ ಕೂಡಾ ಸ್ವತಂತ್ರವಾಗಿ ಕಾರ್ಯನಿರ್ವಹಿಸಿಲ್ಲ ಎಂದು ಸಮಾವೇಶದಲ್ಲಿ ಖಾನ್ ವಾಗ್ದಾಳಿ ನಡೆಸಿರುವುದಾಗಿ ವರದಿ ವಿವರಿಸಿದೆ.
ಏಪ್ರಿಲ್ 9ರಂದು ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ಮತ ಚಲಾಯಿಸಲು ಅಂತಿಮ ಗಡುವು ನೀಡಬೇಕೆಂಬ ಅರ್ಜಿಯ ವಿಚಾರಣೆ ನಡೆಸಲು ಮಧ್ಯರಾತ್ರಿ ಪಾಕಿಸ್ತಾನದ ಸುಪ್ರೀಂಕೋರ್ಟ್ ಅನ್ನು ತೆರೆಯಲಾಗಿತ್ತು. ಆದರೆ ಸುಪ್ರೀಂಕೋರ್ಟ್ ನಿರ್ದೇಶನದ ನಂತರವೂ ಸ್ಪೀಕರ್ ಅಸಾದ್ ಖೈಸರ್ ಮಧ್ಯರಾತ್ರಿ ಮತಚಲಾಯಿಸಲು ಅವಕಾಶ ನೀಡಲಿಲ್ಲವಾಗಿತ್ತು. ಅಷ್ಟೇ ಅಲ್ಲ ಮತ್ತೊಂದು ಅರ್ಜಿಯ ವಿಚಾರಣೆ ನಡೆಸಲು ಇಸ್ಲಾಮಾಬಾದ್ ನಲ್ಲಿ ಹೈಕೋರ್ಟ್ ಅನ್ನು ಕೂಡಾ ತೆರೆಯಲಾಗಿತ್ತು ಎಂದು ವರದಿ ವಿವರಿಸಿದೆ.
ಈ ಬೆಳವಣಿಗೆಯ ನಡುವೆಯೇ ಸ್ಪೀಕರ್ ಅಸಾದ್ ರಾಜೀನಾಮೆ ನೀಡಿದ್ದರು. ಅದೇ ದಿನ ರಾತ್ರಿ ಅಸೆಂಬ್ಲಿಯಲ್ಲಿ ಮತದಾನ ನಡೆಸಲಾಗಿತ್ತು. ಇದರೊಂದಿಗೆ ಇಮ್ರಾನ್ ಖಾನ್ ಅವಿಶ್ವಾಸ ಮತದ ಮೂಲಕ ಪದಚ್ಯುತಗೊಂಡ ಪಾಕಿಸ್ತಾನದ ಮೊದಲ ಪ್ರಧಾನಿಯಾಗಿದ್ದಾರೆ.