ಎಷ್ಟೋ ಬಾರಿ, ನಾನೂ ನಿನ್ನಂತೆ ಆಗಬೇಕು ಅಂದುಕೊಳ್ಳುತ್ತೇನೆ. ಆದರೆ, ಸಾಧ್ಯವಾಗುತ್ತಿಲ್ಲ…
ಹೇ… ಹುಡುಗಾ, ಸದಾ ಏಕಾಂತವನ್ನೇ ಹಂಬಲಿಸುತ್ತಿದ್ದ ನನ್ನನ್ನು, ಈಗ ಏಕಾಂತವೇ ಬಯಸಿ ಬಂದು ಆವರಿಸಿಕೊಂಡಿದೆ. ಎಂದಿನಂತೆ ತರಾತುರಿಯಿಲ್ಲದೇ, ಸ್ಲೋಮೋಷನ್‌ನಲ್ಲಿ ಬರುವ ಹಗಲು. ಯಾವ ಗಡಿಬಿಡಿಯೂ ಇಲ್ಲದೆ ತೆರೆದುಕೊಳ್ಳುವ ದಿನಚರಿ. ಸಾವಧಾನವೇ ಮೈವೆತ್ತಂತೆ ತೆವಳುವ ಗಡಿಯಾರ, ಏರುತ್ತಾ ಹೋಗುವ
ಬಿಸಿಲು, ಶಬ್ದವೆಂಬುದೇ ಮಾಯವಾತೇನೋ ಅನ್ನುವಂತೆ ಬಿಕೋ ಅನ್ನುತ್ತಿರುವ ಬೀದಿ! ಕನಸಿನಲ್ಲಿ ಮಾತ್ರ ಸಾಧ್ಯವಾಗುತ್ತಿದ್ದಂಥ ಇಂಥ ನಿಶ್ಯಬ್ದ, ಈಗ ಎದುರಿಗೇ ಬಂದು ನಿಂತಿದೆ.
ನಿಂಗೆ ನಾನೆಂದರೆ ಇಷ್ಟ, ನನಗಿಂತ ನನ್ನ ಮೌನ ಇಷ್ಟ. ಸುಮ್ಮನೆ ಓದುತ್ತಾ ಕುಳಿತವಳನ್ನ, ತದೇಕಚಿತ್ತದಿಂದ ನೋಡುತ್ತಾ ಕೂರುತ್ತಿದ್ದ ಹುಚ್ಚ ನೀನು. ನಾನು ಪುಸ್ತಕದಿಂದ ತಲೆಯೆತ್ತಿ, ನಿನ್ನತ್ತ ನೋಡಿದರೆ, ನಿನ್ನ ಕಂಗಳಲ್ಲಿ ನನ್ನದೇ ಏಕಾಂತದ ಬಿಂಬ. ನೀ ಜತೆಗಿದ್ದರೂ, ನನ್ನ ಏಕಾಂತದ ಸಂಭ್ರಮಕ್ಕೆ ಅಡ್ಡಿ ಬಂದವನಲ್ಲ. ನನ್ನ ಪಾಡಿಗೆ ನನ್ನನ್ನ ಬಿಟ್ಟು, ನನ್ನ ಇಡೀ ಜಗತ್ತು ನೀನೇ ಅನ್ನುವಂತೆ, ಅಷ್ಟು ದೂರದಲ್ಲಿ ಕೂತು ಕಾಲ ಕಳೆದುಬಿಡುತ್ತಿದ್ದೆ. ಹೀಗೆ ಗಂಟೆಗಟ್ಟಲೆ ಸುಮ್ಮನೆ ಕೂರಲು ಬೋರ್ ಆಗಲ್ವಾ ಎಂದು ಕೇಳಿದಾಗೆಲ್ಲಾ ಚಂದಗೆ ನಕ್ಕು, ನಿನ್ನಂಥ ಹುಡುಗಿಯ ಸನ್ನಿಧಾನದಲ್ಲೊಂಥಾ ಬೇಸರ? ಅಂದುಬಿಡುತ್ತಿದ್ದೆ.
ಯಾಕೋ ಹುಡುಗ ಇಷ್ಟೊಂದು ಇಷ್ಟಪಡು ತ್ತಿಯಾ? ನನ್ನೊಳಗೊಬ್ಬ ಸ್ವಾರ್ಥಿಯಿದ್ದಾಳೆ, ಕನಸುಗಳನ್ನು ಈಡೇರಿಸಿ ಕೊಳ್ಳುವ ಹಾದಿಯಲ್ಲಿ, ಯಾರತ್ತಲೂ ನೋಡದೇ ನಡೆದು ಬಿಡುವ ಮಹತ್ವಾ ಕಾಂಕ್ಷಿ ಯಿದ್ದಾಳೆ. ಸಿರ್ರನೆ ಬಂದುಬಿಡುವ ಕೋಪ, ವಿನಾಕರಣ ನಿನ್ನನ್ನು ನೋಯಿಸಿದೆ. ಪ್ರತೀ ಗಾಯಕ್ಕೂ ನೀನು ಒಲವಿನ ಮುಲಾಮು ಹಚ್ಚುತ್ತಲೇ ಬಂದಿದ್ದೀ. ನಿನ್ನ ತಾಳ್ಮೆಯನ್ನು ನಂಗಷ್ಟು ಕಲಿಸು. ಎಷ್ಟೋ ಬಾರಿ, ನಾನೂ ನಿನ್ನಂತೆ ಆಗಬೇಕು ಅಂದುಕೊಳ್ಳುತ್ತೇನೆ. ಆದರೆ, ಆಗುವುದಿಲ್ಲ. ಸದಾ ನಿನ್ನ ಬಗ್ಗೆ ಯೋಚಿಸುತ್ತಲೇ, ನಿನ್ನನ್ನು ಪ್ರೀತಿಸುತ್ತಲೇ ಬದುಕಿದ್ದೇನೆ ನಾನು. ನಿಂಗೆ ಇದೆಲ್ಲವನ್ನೂ ಹೇಳಬೇಕು. ಯಾವಾಗ ಸಿಕ್ತಿಯೋ ?
ನಿನ್ನ ಅಮ್ಮು