Advertisement

ಊಟ ಬೇಕಮ್ಮಾ!

12:30 AM Jan 17, 2019 | |

ಧೃತಿ ಶಾಲೆಯಲ್ಲಿ ಊಟದ ಬುತ್ತಿಯನ್ನು ಮುಟ್ಟುತ್ತಲೇ ಇರುತ್ತಿರಲಿಲ್ಲ. ಮನೆಯಲ್ಲೂ ಅಷ್ಟೆ ಏನು ಕೊಟ್ಟರೂ ತಿನ್ನುತ್ತಿರಲಿಲ್ಲ. ಅನ್ನ, ತರಕಾರಿಗಳನ್ನು ತಟ್ಟೆಯಲ್ಲೇ ಬಿಡುತ್ತಿದ್ದಳು. ಅವಳ ಮನಸ್ಥಿತಿ ಬದಲಾಯಿಸಬೇಕೆಂದು ಅಪ್ಪ ಅಮ್ಮ ಒಂದು ಉಪಾಯ ಮಾಡಿದರು!

Advertisement

ನಗರದಲ್ಲಿ ಬೆಳೆದ ದೃತಿ ಏಳನೇ ತರಗತಿಯಲ್ಲಿ ಓದುತ್ತಿದ್ದಳು. ಎಲ್ಲಾ ವಿಚಾರಗಳಲ್ಲೂ ಮುಂದಿದ್ದ ಆಕೆ ಊಟದ ವಿಚಾರದಲ್ಲಿ ಮಾತ್ರ ಹಿಂದೆ. ಪ್ರತಿದಿನ ಲಂಚ್‌ ಬಾಕ್ಸ್‌ಅನ್ನು ಬೆಳಿಗ್ಗೆ ಕಳಿಸಿಕೊಟ್ಟಿದ್ದ ಹಾಗೆಯೇ ವಾಪಸ್‌ ತರುತ್ತಿದ್ದಳು. ಅದರಲ್ಲಿರುತ್ತಿದ್ದುದನ್ನು ತಿನ್ನುತ್ತಿರಲಿಲ್ಲ. ಯಾಕೆ ಅಂತ ಕೇಳಿದರೆ “ಬಿಸಿ ಇಲ್ಲ’, “ಆರಿರುತ್ತೆ’, “ನನಗೆ ಸೇರಲ್ಲ’… ಹೀಗೆಲ್ಲಾ ಉತ್ತರಗಳನ್ನು ನೀಡಿ ಅಮ್ಮನ ಬಾಯಿ ಮುಚ್ಚಿಸಿಬಿಡುತ್ತಿದ್ದಳು. ಶಾಲೆಯಲ್ಲಿ ಮಾತ್ರವಲ್ಲದೆ ಮನೆಯಲ್ಲೂ ಸರಿಯಾಗಿ ತಿನ್ನುತ್ತಿರಲಿಲ್ಲ. ಅಮ್ಮನಿಗೆ ಇದೇ ದೊಡ್ಡ ತಲೆ ನೋವಾಯಿತು. ಹೇಗಾದರೂ ಮಾಡಿ ಧೃತಿಯ ಮನಸ್ಥಿತಿ ಬದಲಾಯಿಸಬೇಕೆಂದು ಅಪ್ಪ ಅಮ್ಮ ಇಬ್ಬರೂ ತೀರ್ಮಾನಿಸಿದರು. 

ಪ್ರತಿ ಸಲ ರಜೆ ಸಿಕ್ಕಾಗ ಧೃತಿಯನ್ನು ಪಟ್ಟಗಳಲ್ಲಿ ವಾಸವಿದ್ದ ನೆಂಟರ ಮನೆಗೆ ಕಳಿಸುತ್ತಿದ್ದರು. ಆದರೆ ಈ ಬಾರಿ ಹಳ್ಳಿಯ ನೆಂಟರ ಮನೆಗೆ ಕಳಿಸುವ ನಿರ್ಧಾರವನ್ನು ಅಪ್ಪ ಅಮ್ಮ ಇಬ್ಬರೂ ಕೈಗೊಂಡರು. ಅವರಿಗೆ ನೆನಪಾಗಿದ್ದು ಹೊನ್ನಳ್ಳಿ. ಅಲ್ಲಿ ಧೃತಿಯ ಚಿಕ್ಕಪ್ಪ ಚಿಕ್ಕಮ್ಮ ಇದ್ದರು. ಧೃತಿ ಅದೇ ಮೊದಲ ಬಾರಿ ಹಳ್ಳಿಗೆ ಬಂದಿದ್ದಳು. ಅಲ್ಲಿನ ಜನಜೀವನ ನಗರಜೀವನಕ್ಕಿಂತ ವಿಭಿನ್ನವಾಗಿರುವುದನ್ನು ಗಮನಿಸಿದಳು. 

ಪಟ್ಟಣದಲ್ಲಿ ಹಾಲು ಬೇಕೆಂದರೆ ಅಂಗಡಿಗೆ ಹೋಗಬೇಕಾಗಿತ್ತು, ಎಳನೀರು ಕುಡಿಯಲು ಊರ ಬಸ್‌ಸ್ಟಾಂಡ್‌ವರೆಗೆ ನಡೆಯಬೇಕಾಗಿದ್ದಿತು. ಅಕ್ಕಿ, ತರಕಾರಿ ಖಾಲಿಯಾಗಿದ್ದರೆ ಸೂಪರ್‌ ಮಾರ್ಕೆಟ್‌ಗೆ ಹೋಗಬೇಕಾಗಿತ್ತು. ಆದರೆ, ಧೃತಿ ಹಳ್ಳಿಯಲ್ಲಿ ಹಾಲು ಕರೆಯುವುದನ್ನು ನೋಡಿದಳು. ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ ಅಕ್ಕಿ ಮೂಟೆಗಳನ್ನು ನೋಡಿದಳು. ಮನೆಯ ಹಿತ್ತಲಲ್ಲಿ ಬೆಳೆಯುತ್ತಿದ್ದ ತರಕಾರಿಗಳನ್ನು ನೋಡಿದಳು. ತೋಟದಲ್ಲಿ ಬಿಟ್ಟಿದ್ದ ತೆಂಗಿನಮರದಿಂದ ಎಳನೀರನ್ನು ಕುಡಿದಳು. ಹಸುವಿನ ಮೈದಡವಿದಳು. ಅದು ಕೆನೆದಾಗ ಬೆದರಿ ಹಿಂದಕ್ಕೆ ಸರಿದಳು. “ಅದೇನೂ ಮಾಡುವುದಿಲ್ಲ ಕಣಮ್ಮಾ…’ ಎಂದು ಚಿಕ್ಕಮ್ಮ ಹೇಳಿದ ಮೇಲೆ ಮತ್ತೆ ಹಸುವಿನ ತಲೆ ನೇವರಿಸಿ ಸಂತಸ ಪಟ್ಟಳು.

ಧೃತಿಗೆ ಅಲ್ಲಿಯವರೆಗೂ ನಾವು ಊಟ ಮಾಡುವ ಅನ್ನ ಎಲ್ಲಿಂದ ಬರುತ್ತಿತ್ತು ಎನ್ನುವುದು ಗೊತ್ತೇ ಇರಲಿಲ್ಲ. ಪುಸ್ತಕಗಳಲ್ಲಿ ಗದ್ದೆಗಳ ಕುರಿತು ಓದಿದ್ದಳಾದರೂ ಅದು ಅವಳ ಕಲ್ಪನೆಗೆ ಎಟುಕಿರಲಿಲ್ಲ. ಒಂದು ದಿನ ಚಿಕ್ಕಪ್ಪ ಧೃತಿಯನ್ನು ಗದ್ದೆಗೆ ಕರೆದುಕೊಂಡು ಹೋದರು. ಅಲ್ಲಿ ಅವಳು ಬಿಸಿಲಿನಲ್ಲಿ ಹತ್ತಿಪ್ಪತ್ತು ಮಂದಿ ಕೆಲಸ ಮಾಡುವುದನ್ನು ನೋಡಿದಳು. ಮಧ್ಯಾಹ್ನ ಮರದ ನೆರಳನ್ನು ಹುಡುಕಿಕೊಂಡು ಅದರಡಿ ಎಲ್ಲರೂ ಒಟ್ಟಿಗೆ ಮುದ್ದೆ ಊಟ ಮಾಡಿದರು. ಆ ದಿನ ಮಾಡಿದ ಊಟದ ರುಚಿಯನ್ನು ಧೃತಿ ಎಂದೂ ಸವಿದವಳೇ ಅಲ್ಲ.

Advertisement

ಧೃತಿಯೂ ಚಿಕ್ಕಪ್ಪನಿಗೆ ಕೆಲಸದಲ್ಲಿ ನೆರವಾದಳು. ಅವಳು ತರಕಾರಿ ಗಿಡಗಳಿಗೆ ನೀರು ಹಾಕಿದಳು. ಆಳುಗಳ ಜೊತೆ ತರಕಾರಿ ಕೊಯ್ದಳು. ಕೆಲಸ ಮಾಡಿ ದಣಿದ ದೃತಿ, ಹುಲ್ಲಿನ ಮೇಲೆ ಕೂತು ಸುಧಾರಿಸಿಕೊಂಡಳು. ಅಷ್ಟರಲ್ಲಿ ಅಳುಗಳು ತರಕಾರಿಗಳನ್ನು ಬುಟ್ಟಿಗೆ ತುಂಬುತ್ತಿರುವುದನ್ನು ನೋಡಿದಳು. ಮನೆಗೆ ಬೇಕಾದಷ್ಟನ್ನು ಉಳಿಸಿಕೊಂಡು ಮಿಕ್ಕವನ್ನು ಮಾರುಕಟ್ಟೆಗೆ ಕಳಿಸುತ್ತಿದ್ದರು. ಆ ದಿನ ರಾತ್ರಿ ಊಟ ಮಾಡುವಾಗ ತಟ್ಟೆಯಲ್ಲಿದ್ದ ತರಕಾರಿಯನ್ನು ತಿನ್ನದೇ ಇರಲು ಅವಳಿಗೆ ಮನಸ್ಸಾಗಲಿಲ್ಲ. ಒಂದು ತರಕಾರಿ ಬೆಳೆಯುವುದರ ಅದೆಷ್ಟೋ ಮಂದಿಯ ಶ್ರಮ ಇರುತ್ತೆ ಎನ್ನುವುದು ಅವಳಿಗೆ ಅರ್ಥವಾಗಿತ್ತು. ಅವಳಾಗಿಯೇ “ಊಟ ಬೇಕಮ್ಮಾ’ ಎಂದು ತಟ್ಟೆಗೆ ಹಾಕಿಸಿಕೊಳ್ಳುವಷ್ಟು ಬದಲಾಗಿದ್ದಳು ಧೃತಿ. ಕಡೆಗೂ ಅಪ್ಪ ಅಮ್ಮನ ಉಪಾಯ ಫ‌ಲಿಸಿತ್ತು!

ಪ್ರೇಮಾ ಲಿಂಗದಕೋಣ

Advertisement

Udayavani is now on Telegram. Click here to join our channel and stay updated with the latest news.

Next