ಕ್ರಿಸ್ಮಸ್ ಹಬ್ಬ ಬಂದೇ ಬಿಟ್ಟಿದೆ. ಬಣ್ಣ ಬಣ್ಣದ ಬಾಕ್ಸ್‌ಗಳಲ್ಲಿ ಉಡುಗೊರೆ ತುಂಬಿದ ಚೇಲವನ್ನು ಹೆಗಲಿಗೇರಿಸಿಕೊಂಡ ಸಾಂತಾಕ್ಲಾಸ್, ಮನೆಯಿಂದ ಮನೆಗೆ ಸಾಗುತ್ತಿರುತ್ತಾನೆ. ನಿಜ ಜೀವನದಲ್ಲೂ ನೊಂದವರ ಕಣ್ಣೀರನ್ನು ಒರೆಸುವ, ಮುಗ್ಧ ಹೃದಯಗಳ ಆಸೆ-ಆಕಾಂಕ್ಷೆಗಳಿಗೆ ಕಿವಿಯಾಗುವ ಸಾಂತಾಕ್ಲಾಸರು ನಾವಾಗಬೇಕಿದೆ. ಹಾಗೆ ಒಬ್ಬಳು ಪುಟಾಣಿ ಎದುರು ಸಾಂತಾಕ್ಲಾಸ್‌ನಂತೆ ಬಂದ ಡ್ರೀಮ್ ಬಾಕ್ಸ್‌ನ ಕತೆ, ನಿಮ್ಮನ್ನು ಕಾಡದೇ ಇರದು…
ಇದು ಚಂದಮಾಮನ ಕತೆ ಅಲ್ಲ. ದೇವತೆ, ಮಾಯಾಭೂತ, ಕಿನ್ನರಿಯೆಲ್ಲ ಬಂದು ಮಕ್ಕಳ ಮನದಾಸೆಗಳನ್ನು ಈಡೇರಿಸುವ ಪ್ರಸಂಗವೂ ಅಲ್ಲ. ಮಕ್ಕಳು ಒಂದು ಆಸೆಯನ್ನು ಮುಂದಿಟ್ಟರೆ, ಅದನ್ನು ಈಡೇರಿಸಲು ಭಗವಂತ, ಹತ್ತು ಅವತಾರ ತಾಳುತ್ತಾನಂತೆ. ಅಪ್ಪನ ರೂಪದಲ್ಲಿ, ಅಮ್ಮನ ವೇಷದಲ್ಲಿ, ಬಂಧುವಿನ ಬಣ್ಣ ಹಚ್ಚಿಕೊಂಡು- ಯಾರು ಯಾವ ಬಗೆಯಲ್ಲಿ ಬಂದು ಈಡೇರಿಸಿದರೂ ಅವರು ದೇವರೇ.
ಅವತ್ತು ಅಂಥ ದೇವರಿಗಾಗಿಯೇ ಆ ಪುಟಾಣಿ ಕಾದು ಕೂತಿದ್ದಳು..! ಆಕೆಯ ಕಣ್ಣೆದುರು ದೇವರಂತೆ ಬಂದಿದ್ದು, “ಡ್ರೀಮ್ ಬಾಕ್ಸ್. ಉಡುಪಿ ಜಿಲ್ಲೆಯ ಪಾಂಡೇಶ್ವರದ ಕನ್ನಡ ಮಾಧ್ಯಮ ಶಾಲೆ ಅದು. ಬಾಂಧವ್ಯ ಬ್ಲಿಡ್ ಸಂಸ್ಥೆಯು “ಡ್ರೀಮ್ ಬಾಕ್ಸ್’ ಒಂದನ್ನು ಆ ಶಾಲೆಯಲ್ಲಿ ನೇತು ಹಾಕಿತ್ತು. ಮಕ್ಕಳು ಆಸೆಪಟ್ಟಿದ್ದನ್ನು ಪುಟ್ಟದಾಗಿ ಬರೆದು, ಆ ಬಾಕ್ಸ್‌ನಲ್ಲಿ ಹಾಕಿಬಿಟ್ಟರೆ, ಹದಿನೈದು ದಿನಗಳಲ್ಲಿ ಅದನ್ನು ಈಡೇರಿಸುವ ಕೆಲಸವನ್ನು “ಬಾಂಧವ್ಯ’ ಮಾಡುತ್ತದೆ. ಕೆಲವರಿಗೆ ಪೆನ್ಸಿಲ್ ಬೇಕಿರುತ್ತಿತ್ತು. ಮತ್ತೆ ಕೆಲವರಿಗೆ ರಬ್ಬರ್. ಒಂದೊಳ್ಳೆಯ ಸ್ಕೆಚ್ ಪೆನ್ ಬೇಕೆನ್ನುವುದು, ಇನ್ನಾéವುದೋ ಪುಟಾಣಿಯ ಆಸೆ. ಮತ್ತೂಂದು ಕಂದಮ್ಮಳಿಗೆ ಐಸ್‌ಕ್ರೀಮ್ ಚಪ್ಪರಿಸುವ ತವಕ. ಕತೆ ಪುಸ್ತಕ, ನೋಟ್ ಬುಕ್ಕು, ಚೆಂದದ ಬ್ಯಾಗ್… ಹೀಗೆ ಪುಟ್ಟ ಪುಟ್ಟ ಬೇಡಿಕೆಗಳು ಅಲ್ಲಿದ್ದವು.
ಆದರೆ, ಅಲ್ಲೊಂದು ಸಣ್ಣ ಚೀಟಿಯಲ್ಲಿ ಕಂಡಿದ್ದೇ ಬೇರೆ. ಆ ಮನ ಕಲುಕುವಂಥ ಚೀಟಿಯಲ್ಲಿ “ನನಗೆ ಅಮ್ಮ ಬೇಕು…’ ಎನ್ನುವ ಸಾಲಿತ್ತು! ಹಾಗೆ ಬರೆದ ಪುಟಾಣಿಯ ಹಿಂದೆ ಕಾಣಿಸಿದ್ದು ಒಂದು ಕಣ್ಣೀರಿನ ಕತೆ.
ಅದೊಂದು ದಿನ ಅಮ್ಮನ ಕೈಯನ್ನು ತನ್ನ ಪುಟ್ಟ ಬೆರಳುಗಳಿಂದ ಹಿಡಿದು, ಆ ಪುಟಾಣಿ ಖುಷಿಖುಷಿಯಾಗಿ ನಡೆದು ಹೋಗುತ್ತಿದ್ದಳು. ಆದರೆ, ಆ ಖುಷಿ ಹೆಚ್ಚು ಸಮಯ ಉಳಿಯಲೇ ಇಲ್ಲ. ಯಮಸ್ವರೂಪಿಯಾಗಿ ಬಂದ ವಾಹನವೊಂದು ರಸ್ತೆ ಬದಿಯಲ್ಲಿ ತಮ್ಮ ಪಾಡಿಗೆ ನಡೆದುಹೋಗುತ್ತಿದ್ದ ಅಮ್ಮ- ಮಗಳ ಮೇಲೆ ಹರಿದೇ ಬಿಟ್ಟಿತು. ಸುತ್ತಮುತ್ತಲಿದ್ದವರು ಏನಾಯಿತೆಂದು ನೋಡುವಷ್ಟರಲ್ಲಿ, ತಾಯಿ-ಮಗಳಿಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ದುರಂತವೆಂದರೆ, ಅಪಘಾತದ ತೀವ್ರತೆಗೆ ಆ ತಾಯಿಯ ಉಸಿರು ಅದಾಗಲೇ ನಿಂತು ಹೋಗಿತ್ತು! ಪುಟ್ಟ ಬಾಲಕಿ, ಅಮ್ಮನ ಕೈಯಿಂದ ಬೇರ್ಪಟ್ಟು ಒಂದಷ್ಟು ದೂರದಲ್ಲಿ ಗಾಯಗೊಂಡು ಬಿದ್ದಿದ್ದಳು. ಆಸ್ಪತ್ರೆಗೆ ದಾಖಲಿಸಲ್ಪಟ್ಟ ಆ ಹುಡುಗಿಯ ಮೈಮೇಲಿನ ಗಾಯಗಳೆಲ್ಲಾ ಗುಣವಾದರೂ, ಅವಳ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿದ್ದ ಅಮ್ಮನೆಂಬ ನೆನಪು ಮಾತ್ರ ಮಾಸಲೇ ಇಲ್ಲ. ಮನೆಯವರ ಪ್ರೀತಿಯಾಗಲೀ, ಬಂಧುಗಳ ಅನುಕಂಪದ ಸಾಂತ್ವನವಾಗಲೀ, ಅಮ್ಮನ ನೆನಪಿನ ಎದುರು ಸೋಲನ್ನಪ್ಪಿತು. ಆಕೆಯ ಮನಸ್ಸು ಪ್ರತೀ ಸಲವೂ “ಅಮ್ಮ ಬೇಕು’ ಎಂದು ಮೌನವಾಗಿ ರೋದಿಸುತ್ತಲೇ ಇತ್ತು. ಈಗ ಆ ಪುಟಾಣಿ ಆರನೇ ತರಗತಿ. ಅಮ್ಮನನ್ನು ಕಳಕೊಂಡ ನೋವನ್ನು ಯಾರ ಎದುರಿನಲ್ಲಿ ಹರವಿಕೊಳ್ಳಲಿ ಎಂದು ತನ್ನ ಪುಟ್ಟ ಕಂಗಳಿಂದ ಜಗತ್ತನ್ನು ನೋಡುತ್ತಿದ್ದಾಳೆ. ಒಂದು ವೇಳೆ ಯಾರ ಬಳಿಯಾದರೂ ಹೇಳಿಕೊಂಡರೆ, ಎಲ್ಲಿಂದ ತಂದಾರು, ಇಲ್ಲದ ಅಮ್ಮನನ್ನು!
ಇದೇ ಹೊತ್ತಿನಲ್ಲಿಯೇ ಅವಳ ಕಣ್ಣೆದುರು ಡ್ರೀಮ್ ಬಾಕ್ಸ್ ಇತ್ತು. ತನ್ನ ಬಳಿ ಪೆನ್ಸಿಲ್ ಇದೆ; ಪೆನ್ ಇದೆ; ರಬ್ಬರ್ ಇದೆ; ಬ್ಯಾಗ್ ಇದೆ… ಎಲ್ಲವೂ ಇದೆ. ಆದರೆ, ಎಲ್ಲರಿಗೂ ಇರುವ ಅಮ್ಮ ತನಗಿಲ್ಲ. ಆ ನೋವನ್ನೇ ಚೀಟಿಯಲ್ಲಿ ಬರೆದು, ಡ್ರೀಮ್ ಬಾಕ್ಸ್‌ಗೆ ಹಾಕಿದಳು ಆಕೆ. “ಬಾಂಧವ್ಯ’ದವರು ಆ ಬಾಕ್ಸ್ ಅನ್ನು ತೆರೆದಾಗ, ಅಲ್ಲಿ 150ಕ್ಕೂ ಹೆಚ್ಚು ಪತ್ರಗಳಿದ್ದವು. ಚಾಕ್ಲೇಟ್, ಐಸ್‌ಕ್ರೀಮ್‌ನಿಂದ ಹಿಡಿದು, ಮಕ್ಕಳ ಆಸೆಯ ಪುಟ್ಟ ಪ್ರಪಂಚವೇ ಅದರೊಳಗಿತ್ತು. ಅವೆಲ್ಲವನ್ನೂ ಈಡೇರಿಸಲು ಬಾಂಧವ್ಯ ಶಕ್ತವಾಗಿತ್ತಾದರೂ, ಈ ಪುಟಾಣಿಯ ಚೀಟಿಯನ್ನು ನೋಡಿ ನಮಗೆ ಮಾತೇ ಹೊರಡಲಿಲ್ಲ ಎನ್ನುತ್ತಾರೆ “ಬಾಂಧವ್ಯ’ದ ರೂವಾರಿ ದಿನೇಶ್ (ಮೊ. 7019283924).
ಪುಟಾಣಿಗೆ ಕಾನ್ಸೆಲಿಂಗ್…
“ನನಗೆ ಅಮ್ಮ ಬೇಕು…’ ಎಂದು ಬರೆದಿದ್ದ 6ನೇ ತರಗತಿಯ ಆ ಪುಟಾಣಿಗೆ, ಈಗ ಅಗತ್ಯವಾಗಿ ಬೇಕಾಗಿರುವುದು ತಾಯಿ ಪ್ರೀತಿ. ಅದಕ್ಕಾಗಿ ದಿನೇಶ್ ಬಾಂಧವ್ಯ ಮತ್ತು ಶಾಲಾ ಶಿಕ್ಷಕ ವರ್ಗದವರು ಮೊದಲಿಗೆ ಈ ಹುಡುಗಿಗೆ ಸೂಕ್ತ ಕೌನ್ಸಿಲಿಂಗ್ ಕೊಡಿಸಲು ನಿರ್ಧರಿಸಿದ್ದಾರೆ. ಬಳಿಕ ಆಕೆಯಲ್ಲಿ ಮಾನಸಿಕ ಸ್ಥೆçರ್ಯ ತುಂಬುವ ಕೆಲಸವೂ ಸಾಗಿದೆ.
49 ಚಿಣ್ಣರ ಕನಸು ನನಸಾಯ್ತು…
ಡ್ರೀಮ್ ಬಾಕ್ಸ್‌ನ ಮೊದಲ ಹಂತದಲ್ಲಿ ಒಟ್ಟು 49 ಮಕ್ಕಳ ಆಸೆ, ಕನಸುಗಳನ್ನು ಪೂರೈಸಲಾಗಿದೆ. ಸೇಬು, ಬಾಳೆಹಣ್ಣು, ಪುಸ್ತಕ, ಪೆನ್ನು, ಪೆನ್ಸಿಲ್, ರಬ್ಬರ್, ಕಥೆ ಪುಸ್ತಕ, ಗಾದೆ ಪುಸ್ತಕ, ಚಾಕ್ಲೇಟ್, ಬೂಸ್ಟ್… ಹೀಗೆ ಮಕ್ಕಳು ಇಷ್ಟಪಟ್ಟ ವಸ್ತುಗಳನ್ನು ಅವರಿಗೆ ತಲುಪಿಸಲಾಯಿತು. ಈ ಎಲ್ಲಾ ಸಾಮಾಗ್ರಿಗಳನ್ನು ಡಾ. ಕೀರ್ತಿ ಪಾಲನ್ ಎಂಬವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ನೀಡಿದರು. “ಬಾಂಧವ್ಯ’ದ ನೂತನ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಮಕ್ಕಳ ಕನಸಿಗೆ ಪೂರಕವಾಗಿ ನಿಲ್ಲಲು ಆರಕ್ಕಿಂತಲೂ ಹೆಚ್ಚು ದಾನಿಗಳು ಮುಂದೆ ಬಂದಿ¨ªಾರೆ. ಇದೀಗ ಸಾಲಿಗ್ರಾಮದಲ್ಲಿರುವ ಕಾರ್ಕಡ ಸರಕಾರಿ ಶಾಲೆಯನ್ನು ಈ ಯೋಜನೆಗೆ ಆರಿಸಿಕೊಳ್ಳಲಾಗಿದ್ದು, ಸದ್ಯದಲ್ಲಿಯೇ ಅಲ್ಲಿ ಮಕ್ಕಳ ಪಾಲಿನ “ಮಾಯಾ ಪೆಟ್ಟಿಗೆ’ ಕಾರ್ಯಾರಂಭ ಮಾಡಲಿದೆ.
– ಹರಿಪ್ರಸಾದ್ ನೆಲ್ಯಾಡಿ