ನವದೆಹಲಿ: ಮೂರು ಕೃಷಿ ಕಾಯ್ದೆಯನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಹೋರಾಟವನ್ನು ಕೈಬಿಟ್ಟು, ಮನೆಗಳಿಗೆ ತೆರಳುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಶನಿವಾರ(ನವೆಂಬರ್ 27) ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಪಾದಯಾತ್ರೆ ವೇಳೆ ಅವಘಡ : ಜೀಪ್ ಡಿಕ್ಕಿ ಹೊಡೆದು 20 ಯಾತ್ರಾರ್ಥಿಗಳು ಗಂಭೀರ
ಸಂಸತ್ ನ ಚಳಿಗಾಲದ ಅಧಿವೇಶನದ ಮೊದಲ ದಿನವೇ ಮೂರು ಕೃಷಿ ಕಾಯ್ದೆಯನ್ನು ರದ್ದುಪಡಿಸುವ ಮಸೂದೆಯನ್ನು ಮಂಡಿಸಲಾಗುವುದು. ಬೆಳೆಗಳ ವೈವಿಧ್ಯತೆ, ಶೂನ್ಯ ಬಜೆಟ್ ಕೃಷಿ ಹಾಗೂ ಎಂಎಸ್ ಪಿ ವ್ಯವಸ್ಥೆ ಹೆಚ್ಚು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಮಿತಿಯೊಂದನ್ನು ರಚಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಈ ಸಮಿತಿಯಲ್ಲಿ ರೈತ ಸಂಘಟನೆಯ ಮುಖಂಡರು ಕೂಡಾ ಪ್ರತಿನಿಧಿಗಳಾಗಿರುತ್ತಾರೆ ಎಂದು ತೋಮರ್ ಎಎನ್ ಐಗೆ ತಿಳಿಸಿದ್ದಾರೆ. ಸಮಿತಿಯ ರಚನೆಯಿಂದ ರೈತರ ಎಂಎಸ್ ಪಿ ಬೇಡಿಕೆಯು ಈಡೇರಲಿದೆ. ಕೃಷಿ ತ್ಯಾಜ್ಯ ಸುಡುವುದನ್ನು ಕ್ರಿಮಿನಲ್ ಅಪರಾಧ ಎಂಬುದನ್ನು ಕೈಬಿಡಬೇಕು ಎಂಬ ರೈತರ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿರುವುದಾಗಿ ತೋಮರ್ ಹೇಳಿದರು.
ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಘೋಷಿಸಿದ ನಂತರವೂ ರೈತರು ಪ್ರತಿಭಟನೆಯನ್ನು ಮುಂದುವರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಈ ನಿಟ್ಟಿನಲ್ಲಿ ರೈತರು ಪ್ರತಿಭಟನೆಯನ್ನು ಕೈಬಿಟ್ಟು, ಮನೆಗೆ ತೆರಳುವಂತೆ ತೋಮರ್ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.