ಕಾಲ ಹೇಗೆಲ್ಲ ಬದಲಾಗಿ ಬಿಡುತ್ತದೆ.. ಮೊಬೈಲ್ ಎಂಬ ಮಾಯಾವಿಗೆ ನಾವು ಈಪಾಟಿ ಮರುಳಾಗುತ್ತೇವೆ ಅಂತ ಯಾರೂ ಅಂದುಕೊಂಡಿರಲಿಲ್ಲ. ಗಂಡ, ಮಕ್ಕಳನ್ನಾದರೂ ಬಿಟ್ಟು ಇರಬಹುದೇನೋ… ಮೊಬೈಲ್ ಬಿಟ್ಟು ಬದುಕೋದು… ಊಹೂಂ. ಕಷ್ಟ ಕಷ್ಟ. ಈಗಂತೂ ಜೀವ ಒಂದನ್ನು ಬಿಟ್ಟು ಎಲ್ಲವೂ ಮೊಬೈಲ್‌ನಲ್ಲಿಯೇ ವ್ಯವಹಾರ..! ಹೀಗಿರುವಾಗ, ನನ್ನ ಮೊಬೈಲ್ ಮೂರು ವರ್ಷಕ್ಕೇ ಕೆಟ್ಟುಹೋಯಿತು.
ಆನ್‌ಲೈನ್‌ನಲ್ಲಿ ಹೊಸ ಮೊಬೈಲ್ ಬುಕ್ ಮಾಡುವಷ್ಟರಲ್ಲಿ ಲಾಕ್‌ಡೌನ್ ಘೋಷಣೆ ಆಗಿಬಿಟ್ಟಿತು. ದೇವರು ಕೊಟ್ಟರೂ ಪೂಜಾರಿ ಕೊಡದ ಹಾಗಾಗಿಹೋಯಿತು ನನ್ನ ಪರಿಸ್ಥಿತಿ. ಯಾರೊಂದಿಗೂ ಮಾತಾಡದೆ… ಜಾಲತಾಣಗಳನ್ನು ಜಾಲಾಡದೆ… ಇದೂ ಒಂದು ಜೀವನವೇ… ಅನಿಸುವಷ್ಟು ಬೋರೆದ್ದುಹೋಯಿತು. ಲಾಕ್‌ಡೌನ್ ಸಡಿಲಿಕೆ ಆದ ಮೇಲೇ, ಹೊಸ ಮೊಬೈಲ್ ನನ್ನ ಕೈ ಸೇರಿದ್ದು.
ಗೆಳತಿಯರಿಗೆ ಫೋನ್ ಮಾಡೋಣ ಅಂತ ಹೊರಟರೆ, ಮೊದಲು ಕೋವಿಡ್ 19 ಬಗ್ಗೆ ಪ್ರವಚನ ಕೇಳಲೇಬೇಕು… ಹಾಳಾದ್ದು ಕೇಳಿ ಕೇಳಿ ಎಷ್ಟು ವಗಚಿಟ್ಟು ಬಂದು ಹೋಯಿತೆಂದರೆ, ಯಾರಿಗೂ ಫೋನು ಮಾಡೋದೇ ಬೇಡ ಎಂಬ ರೇಜಿಗೆ ಬರುವಷ್ಟು. ಕೆಲವು ಸಲವಂತೂ ಯಾಕೆ ಫೋನ್ ಮಾಡಿದ್ದೆ ಅಂತಲೂ ಮರೆತುಹೋಗಿ ಬ್ಬೆಬ್ಬೆಬ್ಬೆ ಅನ್ನುವಂತಾಗಿ ಹೋಗಿತ್ತು. ಸುಡುಗಾಡು ಕೋವಿಡ್ 19.. ಮೊನ್ನೆ ಹೀಗೇ ಯಾರಿಗೋ ಫೋನ್ ಮಾಡಲು ಹೋಗಿ ಈ ಅಕ್ಕಯ್ಯನ ಕೋವಿಡ್ 19 ವೈರಸ್… ಪ್ರವಚನ ಕೇಳುತ್ತಾ ಅಸಹನೆಯಿಂದ ಮುಖ ಕಿವಿಚುತ್ತಿದ್ದಾಗ ಮಗಳು ಹೇಳಿದಳು-
“ಅದ್ಯಾಕೆ ಪೂರ್ತಿ ಹೇಳುವವರೆಗೂ ಕೇಳುತ್ತೀ? ಪಕ್ಕದ ಕೀಪ್ಯಾಡ್ ಒತ್ತಿ ಹ್ಯಾಶ್ ಬಟನ್ ಪ್ರಸ್ ಮಾಡಿದರೆ ಅದು ನಿಂತುಹೋಗಿ ರಿಂಗ್ ಆಗುತ್ತೆ..’ ಅಂತ. ಮೂರು ತಿಂಗಳಿಂದ ಈ ಪ್ರವಚನದ ಕಾಟ ತಾಳಲಾರದೆ ಒದ್ದಾಡಿದ್ದೆ. ಮೊದಲೇ ಹೇಳಬಾರದಿತ್ತೇನೇ.. ಅಂದರೆ.. ಆಯ್ಯಾ.ನಿಂಗೆ ಹೆಂಗೂ ಗೊತ್ತಿರುತ್ತೆ ಅನ್ಕೊಂಡೆ.. ಅಂದಳು.. ಸೊಟ್ಟಗೆ ನಗುತ್ತಾ.. ಕರೆಯದೇ ಬಂದ ಈ ಕೋವಿಡ್ 19, ಮಗಳ ಮುಂದೆಯೇ ನನ್ನ ಪೆದ್ದುತನವನ್ನು ಜಾಹೀರು ಮಾಡಿಬಿಟ್ಟಿತು..
* ಸುಮನಾ ಮಂಜುನಾಥ