ಬೆಂಗಳೂರು: ಆದಾಯ ತೆರಿಗೆ ವಂಚಿಸಿದ ಹಿನ್ನೆಲೆಯಲ್ಲಿ ಡೋಲೋ 650 ಮಾತ್ರೆ ತಯಾರಿಕಾ ಮೈಕ್ರೋ ಲ್ಯಾಬ್ಸ್ ಕಂಪನಿಯ ಬೆಂಗಳೂರಿನಲ್ಲಿರುವ ಪ್ರಧಾನ ಕಚೇರಿ ಸೇರಿ ದೇಶದ 40 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ತಮಿಳುನಾಡನ್ನು ಎರಡು ರಾಜ್ಯಗಳನ್ನಾಗಿ ಇಬ್ಭಾಗ ಮಾಡಬೇಕು: ಬಿಜೆಪಿ ಮುಖಂಡ ನೈನಾರ್
ಕರ್ನಾಟಕ ಹಾಗೂ ಗೋವಾ ವಿಭಾಗದ ಐಟಿ ಅಧಿಕಾರಿಗಳು ಬೆಂಗಳೂನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮೈಕ್ರೋ ಲ್ಯಾಬ್ಸ್ ಕಂಪನಿ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ಜಪ್ತಿ ಮಾಡಿದ್ದಾರೆ. ಕಂಪನಿಯು ನಡೆಸಿರುವ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸು ತ್ತಿದ್ದು ತಮಿಳುನಾಡು, ಗೋವಾ, ಪಂಜಾಬ್, ಮುಂಬೈ, ದೆಹಲಿ ಹಾಗೂ ಸಿಕ್ಕಿಂ ಸೇರಿ ದೇಶದ 40 ಕಡೆಗಳಲ್ಲಿ 200ಕ್ಕೂ ಹೆಚ್ಚಿನ ಅಧಿಕಾರಿಗಳು ಕಂಪನಿಯ ಶಾಖೆಗಳ ಮೇಲೆ ದಾಳಿ ನಡೆಸಿದ್ದಾರೆ. ಕಂಪನಿ ಸಿಎಂಡಿ ದಿಲೀಪ್ ಸುರಾನಾ, ನಿರ್ದೇಶಕ ಆನಂದ್ ಸುರಾನ ನಿವಾಸದ ಮೇಲೂ ದಾಳಿ ನಡೆಸಲಾಗಿದೆ.
570 ಕೋಟಿ ರೂ. ಲಾಭ: ಕಳೆದ ಕೆಲ ತಿಂಗಳಿನಿಂದ ಐಟಿ ಅಧಿಕಾರಿಗಳು ಮೈಕ್ರೋ ಲ್ಯಾಬ್ ಕಂಪನಿ ವ್ಯವಹಾರದ ಬಗ್ಗೆ ಕಣ್ಣಿಟ್ಟಿದ್ದರು. ಆ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಆದಾಯ ತೆರಿಗೆ ವಂಚಿಸಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿದ್ದವು.
ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಕಳೆದ 2 ವರ್ಷಗಳಿಂದ ಕೋವಿಡ್ ಭೀತಿ ಎದುರಾಗಿದ್ದ ಸಂದರ್ಭದಲ್ಲಿ ಡೋಲೋ 650 ಮಾತ್ರೆಗಳಿಗೆ ಹೆಚ್ಚಿನ ಬೇಡಿಕೆಗಳು ವ್ಯಕ್ತವಾಗಿದ್ದವು. ಆ ವೇಳೆ ಮೈಕ್ರೋ ಲ್ಯಾಬ್ಸ್ ಕಂಪನಿ ಅಂದಾಜು 570 ಕೋಟಿ ರೂ. ಲಾಭ ಗಳಿಸಿತ್ತು. ಆದರೆ, ಬಂದ ಆದಾಯಕ್ಕೆ ತಕ್ಕಂತೆ ತೆರಿಗೆ ಪಾವತಿಸಿರಲಿಲ್ಲ ಎಂದು ಹೇಳಲಾಗಿದೆ.