Advertisement

ಗುಮ್ಮಟ ನಗರಿಗೆ ಬಂದಿದ್ದ ಪುನೀತ್‌..

01:01 PM Oct 30, 2021 | Shwetha M |

ವಿಜಯಪುರ: ವಿಶ್ವವಿಖ್ಯಾತ ಐತಿಹಾಸಿಕ ಸ್ಮಾರಕಗಳ ಕಣಜ ಎನಿಸಿರುವ ವಿಜಯಪುರ ಸುಂದರ ನಗರ. ಅಪ್ಪಾಜಿ ನಂಬಿದ ಅಭಿಮಾನಿ ದೇವರ ಮುಂದೆ ಮತ್ತೂಮ್ಮೆ ಬಂದು ಹಾಡುತ್ತೇನೆ. ಮತ್ತೆ ಮತ್ತೆ ಈ ಜಿಲ್ಲೆಗೆ ಬರುವುದು ನನಗೆ ಖುಷಿ ನೀಡುವ ಸಂಗತಿ… ಮತ್ತೆ ಬರುತ್ತೇನೆ, ಅಭಿಮಾನಿ ದೇವರಾದ ನಿಮ್ಮ ಮುಂದೆ ಬಂದು ಹಾಡುತ್ತೇನೆ…

Advertisement

2004 ಮಾರ್ಚ್‌ 14ರಂದು ನಗರದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಪ್ಪು ಭಾಷೆ ಕೊಟ್ಟಿದ್ದರು. ಆದರೆ ಕೊಟ್ಟ ಮಾತು ಉಳಿಸಿಕೊಳ್ಳದೇ ಕಾಲನ ಕರೆಗೆ ಓಗೊಟ್ಟು ಕಾಣದಂತೆ ಮಾಯಗಾಗಿದ್ದಾರೆ. ಭಾಷೆ ಕೊಟ್ಟಿದ್ದ ಪುನೀತ್‌ ರಾಜಕುಮಾರ ಇನ್ನಿಲ್ಲ ಎಂಬ ಸುದ್ದಿ ವಿಜಯಪುರ ಜಿಲ್ಲೆಯ ಜನರಿಗೆ ಆಘಾತ ಎನಿಸಿದೆ.

ಅಂದು ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಅಸಂಖ್ಯಾತವಾಗಿ ಸೇರಿದ್ದ ಅಭಿಮಾನಿ ದೇವರ ಮುಂದೆ ನಿಂತು “ವೀರಕನ್ನಡಿಗ’ ಚಿತ್ರದ “ಜೀವ ಕನ್ನಡ-ದೇಹ ಕನ್ನಡ…’ ಎಂದು ಅಪ್ಪು ಹಾಡುತ್ತಿದ್ದರೆ ಅಭಿಮಾನಿಗಳು ಕೇಕೆ ಹಾಕುತ್ತ, ಕುಣಿದು ಕುಪ್ಪಳಿಸಿದ್ದರು. ಶಿಳ್ಳೆ, ಚಪ್ಪಾಳೆಗಳ ಸುರಿಮಳೆ ಗರೆದಿದ್ದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ್ದ ಅಪ್ಪು, ಮತ್ತೆ ಮತ್ತೆ ಬಿಜಾಪುರಕ್ಕೆ ಬರುತ್ತೇನೆ… ಸಂಗೀತ ಸಂಜೆ ಆಯೋಜಿ ಸೋಣ, ಅಭಿಮಾನಿ ದೇವರುಗಳ ಮುಂದೆ ಬಂದು ಹಾಡುತ್ತೇನೆ ಎಂದು ಭರವಸೆ ನೀಡಿದ್ದರು.

ತಾವು ಕೊಟ್ಟಿದ್ದ ಈ ಮಾತನ್ನು ಈಚೆಗಷ್ಟೇ ತಮ್ಮನ್ನು ಭೇಟಿಯಾಗಿದ್ದಾಗ ಮತ್ತೆ ಸ್ಮರಿಸಿದ್ದರು ಎಂದು ಯುವ ಮುಖಂಡರಾದ ಸಂಜ ಸಬರದ, ಶರಣು ಸಬರದ ನೆನಪಿನಾಳಕ್ಕೆ ಇಳಿದು ಕಣ್ಣಾಲಿ ತುಂಬಿಕೊಂಡರು.

ಇದನ್ನೂ ಓದಿ: ವೈರಲ್ ಆಗುತ್ತಿದೆ ಬೆನ್ನಿ ದಯಾಳ್ ರ ‘ಕೂ’ ಕ್ರಿಕೆಟ್ ಗೀತೆ

Advertisement

“ನೀವು ನೀಡಿರುವ ಈ ಅಪೂರ್ವ ಉಡುಗೊರೆ ಮುಂದುವರಿಸಿಕೊಂಡು ಹೋಗೋಣ, ಈ ಕಾರ್ಯ ಬಿಜಾಪುರದಿಂದಲೇ ಪುನಾರಾಂಭಗೊಳ್ಳಲಿ…’ ಎಂದು ಕೆಲವೇ ತಿಂಗಳ ಹಿಂದಷ್ಟೇ ತಮ್ಮನ್ನು ಭೇಟಿಯಾಗಿದ್ದಾಗ ಸಂಗೀತ ಸಂಜೆ ನೀಡಲು ವಿಜಯಪುರಕ್ಕೆ ಬರುವುದಾಗಿ ಹೇಳಿದ್ದರು. ಆದರೆ ವಚನ ಪಾಲಿಸುವ ಮುನ್ನವೇ ಅಪ್ಪು ಬಾರದ ಲೋಕಕ್ಕೆ ಹೋಗಿದ್ದಾರೆ. ವಿಜಯಪುರ ಜಿಲ್ಲೆಯ ಲಕ್ಷಾಂತರ ಅಭಿಮಾನಿಗಳ ಹೃದಯ ಮಂದಿರದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಪುನೀತ್‌ ರಾಜಕುಮಾರ ಅಗಲಿಕೆ ಅಭಿಮಾನಿಗಳಿಗೆ ಆಘಾತ ತಂದಿದೆ ಎಂದು ಕಂಬನಿ ಮಿಡಿದರು.

ವರನಟ ಡಾ| ರಾಜಕುಮಾರ ಅವರು ಆಯಾ ಜಿಲ್ಲೆಯಲ್ಲಿ ಅಭಿಮಾನಿ ದೇವರುಗಳಿಗಾಗಿ ಸಂಗೀತ ಸಂಜೆ ನಡೆಸುತ್ತಿದ್ದರು. ದಂತಚೋರ ವೀರಪ್ಪನ್ನನಿಂದ ಅಪಹೃತಗೊಂಡ ನಂತರ ಈ ಕಾರ್ಯಕ್ರಮಗಳಿಂದ ಅಣ್ಣಾವ್ರು ವಿಮುಖರಾಗಿದ್ದರು. ಆದರೆ ವಿಜಯಪುರದ ಸಂಜಯ ಸಬರದ ಮೊದಲಾದವರು ಅಣ್ಣಾವ್ರರನ್ನು ಭೇಟಿ ಮಾಡಿ ಈ ಕಾರ್ಯಕ್ರಮ ಮತ್ತೆ ಮುಂದುವರಿಸಿ ಎಂದು ಮನವಿ ಮಾಡಿದ್ದರು. ಅದಕ್ಕೆ ಡಾ| ರಾಜಕುಮಾರ ಅವರು ಕುಟುಂಬ ಸಮೇತರಾಗಿ ಬಂದು ಕಾರ್ಯಕ್ರಮ ನೀಡುವುದಾಗಿ ವಾಗ್ಧಾನ ಮಾಡಿದ್ದರು. ಅವರ ಆಶಯದಂತೆ ಕಾರ್ಯಕ್ರಮ ಆಯೋಜಿಸಲು ಆಯೋಜನೆ ರೂಪಿಸುವ ಸಿದ್ಧತೆಯಲ್ಲಿದ್ದೇವು ಸಬರದ ದುಖೀತರಾದರು.

Advertisement

Udayavani is now on Telegram. Click here to join our channel and stay updated with the latest news.

Next