ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದಲ್ಲಿ ಬಂದು ಪ್ರಚಾರ ಮಾಡಿದರೆ ಯಾವುದೇ ತೊಂದರೆಯಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಏ.18ರಂದು ಒಂದೇ ದಿನ ಮೋದಿ ಆರು ಕಡೆ ಭಾಷಣ ಮಾಡಲಿದ್ದಾರೆ ಎಂದು ಕೇಳಿದ್ದೇನೆ.
ಬಿಜೆಪಿಯವರು ಅಭ್ಯರ್ಥಿಗೆ ಮತ ಕೊಡಿ ಎಂದು ಕೇಳುವುದಕ್ಕಿಂತಲೂ ಮೋದಿ ನೋಡಿ ಮತ ಕೊಡಿ ಎಂದು ಕೇಳುತ್ತಿದ್ದಾರೆ. ಮಾಧ್ಯಮಗಳ ದೃಷ್ಟಿಯಿಂದ ಅವರದೇ ಆದ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಅವರ ಪರ ಪ್ರಚಾರವಾಗುತ್ತಿದೆ ಎಂದು ಹೇಳಿದರು.
“ನಾನು ಯಾರ ಬಗ್ಗೆಯೂ ಲಘುವಾಗಿ ಮಾತನಾಡುವುದಿಲ್ಲ. ಏ.9 ರಿಂದ 13ರ ವರೆಗೆ ನಾನು, ಸಿದ್ದರಾಮಯ್ಯ ಜಂಟಿಯಾಗಿಯೇ ಪ್ರಚಾರ ಮಾಡುತ್ತೇವೆ. ಅಂತಿಮವಾಗಿ ರಾಜ್ಯದ ಜನತೆ ಈ ಬಗ್ಗೆ ತೀರ್ಮಾನ ಮಾಡುತ್ತಾರೆ’ ಎಂದು ಹೇಳಿದರು.
ನಾಯ್ಡು ಪರ ಪ್ರಚಾರ: ಏ.8ರಂದು ಆಂಧ್ರಪ್ರದೇಶದಲ್ಲಿ ಮಹಾಘಟಬಂಧನ್‌ನ ತೆಲಗು ದೇಶಂ ಪಕ್ಷದ ಅಭ್ಯರ್ಥಿಗಳ ಪರವಾಗಿ ದೇವೇಗೌಡರು ಪ್ರಚಾರ ನಡೆಸಲಿದ್ದು, ಆಂಧ್ರಪ್ರದೇಶಕ್ಕೆ ತೆರಳಿದ್ದಾರೆ.
ವಿಜಯವಾಡ, ಪಶ್ಚಿಮ ಗೋದಾವರಿ ಹಾಗೂ ಕೃಷ್ಣಾ ಜಿಲ್ಲೆಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿ, ಸೋಮವಾರ ಸಂಜೆ ಬೆಂಗಳೂರಿಗೆ ವಾಪಸ್ ಬರಲಿದ್ದಾರೆ.