Advertisement
ಹಾಯ್ ರಾಜೀ,ಇವತ್ತಿಗೆ ನಿನ್ನ ಪರಿಚಯವಾಗಿ ಸರಿಯಾಗಿ ಎರಡು ವರ್ಷ ಆಯ್ತು. ಈ ಹೊತ್ತಿಗೂ, ನಿನ್ನ ನೋಡುತ್ತಿದ್ದಾಗೆಲ್ಲಾ ಅನ್ನಿಸೋದೇ ಇಷ್ಟು. ಆವತ್ತು ನಿನ್ನನ್ನು ನಾನು ಭೇಟಿ ಆಗಲೇಬಾರದಿತ್ತು. ಯಾಕೆ ಅನ್ನೋದು ನಿನಗೆ ಗೊತ್ತಿದೆಯೋ, ಇಲ್ವೋ ಅನ್ನುವುದೇ ಈ ಹೊತ್ತಿಗೂ ನನ್ನನ್ನು ಕಾಡುತ್ತಿರುವಂಥದ್ದು.
Related Articles
Advertisement
ನಿನ್ನ ಬಳಿ ಗಂಟೆಗಟ್ಟಲೆ ಕೂತು ದಿನವೂ ಹರಟಬೇಕೆನಿಸುತ್ತಿತ್ತು. ಆದರೆ ಅದ್ಯಾವುದೂ ಸಾಧ್ಯವಾಗಿಲ್ಲ. ಇನ್ನು ಮುಂದೆ ಸಾಧ್ಯವಾಗುವುದಂತೂ ಕನಸಿನ ಮಾತು. ಬಹುಶಃ ನಾನು ಒಂದು ವರ್ಷ ಮೊದಲೇ ನಿನ್ನನ್ನು ಭೇಟಿಯಗುವ ನಿರ್ಧಾರ ಮಾಡಿದ್ದರೆ ಇಷ್ಟು ಹೊತ್ತಿಗೆ ನನ್ನ ಬದುಕು ಅದೆಷ್ಟು ಚೆನ್ನಾಗಿರುತ್ತಿತ್ತು ಎನಿಸುತ್ತದೆ.
ನಿಜ ಹೇಳಲಾ? ನಾನು ಒಳಗೊಳಗೇ ನಿನ್ನನ್ನು ಜೀವದಂತೆ ಪ್ರೀತಿಸುತ್ತಿದ್ದೆ. ಆರಾಧಿಸುತ್ತಿದ್ದೆ. ಹೇಳಬೇಕೆನ್ನಿಸಿದರೂ ಹೇಳಲಾಗದೆ ಚಡಪಡಿಸುತ್ತಿದ್ದೆ. “ಪಿಗ್ಮಿ ಹುಡುಗಿಯನ್ನು ಪ್ರೀತಿಸುತ್ತೀಯಾ?’ ಎಂದು ಸ್ನೇಹಿತರು ಹೀಯಾಳಿಸುತ್ತಾರೇನೋ ಅಂತ ಯಾರಿಗೂ ಅದನ್ನು ಹೇಳದೆ ಮುಚ್ಚಿಟ್ಟೆ. ಅಂತಸ್ತನ್ನು ಅಳೆದ ನನ್ನ ಬಗ್ಗೆ ನನಗೇ ಅಸಹ್ಯವಾಗುತ್ತಿದೆ. ದಯವಿಟ್ಟು ನನ್ನನ್ನು ಕ್ಷಮಿಸು. ನನಗ್ಗೊತ್ತು: ಅದು ಖಂಡಿತಾ ಕ್ಷಮಿಸುವಂಥದ್ದಲ್ಲ. ಇದು ಪ್ರೀತಿಯೇ ಅಲ್ಲ ಅಂತ ನಿನಗನ್ನಿಸುತ್ತಿರಬಹುದು. ಆದರೂ ನಾನು ಪ್ರೀತಿಸಿದ್ದು ಸತ್ಯ.
ಅಂತೂ ಎಲ್ಲವನ್ನೂ ಮೀರಿ ನಿನ್ನನ್ನು ಮದುವೆಯಾಗಲೇಬೇಕು ಅಂತಂದುಕೊಂಡು, ಬರೋಬ್ಬರಿ ಒಂದು ವರ್ಷದ ಬಳಿಕ ಧೈರ್ಯ ಮಾಡಿ ನಿನ್ನನ್ನು ಒಂದು ಪಾರ್ಕಿಗೆ ಕರೆದಿದ್ದೆ. ನೀನು ಸರಿಯಾದ ಸಮಯಕ್ಕೆ ಬಂದಿದ್ದೆ. ತಿಳಿ ನೇರಳೆ ಮತ್ತು ಬಿಳಿ ಬಣ್ಣದ ಸಲ್ವಾರ್‌ನಲ್ಲಿ ನೀನು ನಡೆದು ಬರುತ್ತಿದ್ದರೆ ನನ್ನ ಎದೆ ಬಡಿತ ಜೋರಾಗುತ್ತಿತ್ತು. “ಹಾಯ್ ಸರ್’ ಎನ್ನುತ್ತಲೇ ಹತ್ತಿರ ಬಂದು, ನೀನೇ ಮಾತಿಗೆ ಮೊದಲಿಳಿದೆ. ನೀನು ಯಾವತ್ತೂ ಅದೇ ಲವಲವಿಕೆಯ ರಾಜಿ. “ಸರ್, ನಿನ್ನೆಯೇ ಹೇಳುವಾ ಅಂದುಕೊಂಡಿದ್ದೆ. ಜೂನ್ 29ಕ್ಕೆ ನನ್ನ ಮದುವೆ ಸರ್. ಇಲ್ಲೇ ಧನ್ವಂತರಿ ಹಾಲ್‌ನಲ್ಲಿ. ನೀವು ತಪ್ಪದೇ ಬರಬೇಕು ಸರ್’ ಎಂದಾಗ, ಸೋಲಿನ ಹತಾಶೆ ಹೃದಯವನ್ನು ಆವರಿಸಿತು. ಆದರೂ ತೋರಿಸಿಕೊಳ್ಳಲಿಲ್ಲ. ನಾನು ಅದೆಂಥ ಪಾಖಂಡಿ ನೋಡು, “ಹಾ, ನನಗೆ ಗೊತ್ತಾಯ್ತು. ಅದಕ್ಕೆ ನಿನಗೇನಾದರೂ ಹಣದ ತೊಂದರೆಯಿದ್ದರೆ ಸಹಾಯ ಮಾಡುವ ಅಂತಲೇ ನಾನು ಕರೆದದ್ದು’ ಎಂದಿದ್ದೆ. ನೀನು “ಅಯ್ಯೋ ಸರ್, ಎಂಥ ದೊಡ್ಡ ಮಾತು! ಬೇಡ. ನೀವು ಕೇಳಿದ್ರಲ್ಲ ಸರ್, ಅಷ್ಟೇ ಸಾಕು. ಖುಷಿಯಾಯ್ತು’ ಅಂತ ಮತ್ತಷ್ಟು ಮಾತನಾಡಿ, ಹೊರಟು ಹೋದೆ! ಅದೇಕೋ ಗೊತ್ತಿಲ್ಲ ನಿನ್ನನ್ನು ಅವತ್ತು ಭೇಟಿಯಾಗಬಾರದಿತ್ತು ಅಂತನ್ನಿಸಿತ್ತು. ನಿನಗೆ ನನ್ನ ಒಳಮನಸು ತಿಳಿದಿತ್ತಾ? ಇವತ್ತಿಗೂ ಉತ್ತರ ಸಿಗುತ್ತಿಲ್ಲ.
ಇಂತಿ ಸ್ಟೇಟಸ್ ಮರೆತ ಹುಡುಗ
-ನರೇಂದ್ರ ಎಸ್. ಗಂಗೊಳ್ಳಿ