ಮುಂಬೈ: ಭಾರತ ಪುರುಷರ ಏಕದಿನ ತಂಡದ ನಾಯಕನ ಸ್ಥಾನದಿಂದ ವಿರಾಟ್ ಕೊಹ್ಲಿ ಅವರನ್ನು ಕೆಳಗಿಳಿಸಿದ ಬಳಿಕ ಹಲವು ವಿಚಾರಗಳು ಹೊರಬರುತ್ತಿದೆ. ಒಂದೇ ಸಮನೆ ವಿರಾಟ್ ಬದಲಿಗೆ ರೋಹಿತ್ ಶರ್ಮಾರಿಗೆ ನಾಯಕತ್ವದ ಹೊಣೆ ನೀಡಿದ ಬಳಿಕ ಹಲವು ರೀತಿಯ ಅಭಿಪ್ರಾಯಗಳು ಕೇಳಿಬಂದಿದ್ದವು. ವಿರಾಟ್ ಕೊಹ್ಲಿ ಟಿ20 ನಾಯಕತ್ವವನ್ನು ತ್ಯಜಿಸಿದ ಕಾರಣದಿಂದ ಸೀಮಿತ ಮಾದರಿ ತಂಡಕ್ಕೆ ಒಬ್ಬನೇ ನಾಯಕನನ್ನು ನೇಮಿಸಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದರು.
ಆದರೆ ಇದೀಗ ಟಿ20 ನಾಯಕತ್ವಕ್ಕೆ ವಿದಾಯ ಹೇಳದಂತೆ ಸ್ವತಃ ತಾನೇ ವಿರಾಟ್ ಕೊಹ್ಲಿ ಬಳಿ ಮನವಿ ಮಾಡಿಕೊಂಡಿದ್ದೆ ಎಂದು ಸೌರವ್ ಗಂಗೂಲಿ ಹೇಳಿಕೊಂಡಿದ್ದಾರೆ.
ಟಿವಿ ಸಂದರ್ಶನದಲ್ಲಿ ಮಾತನಾಡಿದ ಗಂಗೂಲಿ, “ ಟಿ20 ತಂಡದ ನಾಯಕತ್ವ ತ್ಯಜಿಸದಂತೆ ನಾನು ವೈಯಕ್ತಿಕವಾಗಿ ವಿರಾಟ್ ಗೆ ಕೇಳಿಕೊಂಡಿದ್ದೆ. ಆದರೆ ಅವರಿಗೆ ಕೆಲಸದೊತ್ತಡ ಹೆಚ್ಚಾಗಿತ್ತು. ಅದು ಪರವಾಗಿಲ್ಲ. ಆತ ಅದ್ಭುತ ಆಟಗಾರ. ಆತ ಆಟದಲ್ಲಿ ತೀವ್ರವಾಗಿ ಮುಳುಗುತ್ತಾನೆ. ವಿರಾಟ್ ತುಂಬಾ ವರ್ಷಗಳ ಕಾಲ ನಾಯಕತ್ವವನ್ನು ನಿಭಾಯಿಸಿದ್ದಾನೆ. ಆಗ ಒತ್ತಡ ಸಹಜ. ನಾನೂ ತುಂಬಾ ವರ್ಷಗಳ ಕಾಲ ನಾಯಕತ್ವದ ಜವಾಬ್ದಾರಿ ಹೊತ್ತಿದೆ. ಹೀಗಾಗಿ ಅದರ ಅನುಭವ ನನಗೂ ಇದೆ” ಎಂದಿದ್ದಾರೆ.
ಇದನ್ನೂ ಓದಿ:ಸುಕ್ಕು ಸರ್ ನನ್ನನ್ನು ದತ್ತು ತೆಗೆದುಕೊಳ್ಳಿ ಎಂದ ರಶ್ಮಿಕಾ ಮಂದಣ್ಣ
“ಸೀಮಿತ ಓವರ್ ಮಾದರಿ ತಂಡಗಳಿಗೆ ಒಬ್ಬನೇ ನಾಯಕ ಇರಬೇಕು ಎನ್ನುವುದು ಆಯ್ಕೆ ಸಮಿತಿಯ ಅಭಿಪ್ರಾಯ. ಹೀಗಾಗಿ ಈ ನಿರ್ಧಾರ. ಆದರೆ ನಮ್ಮಲ್ಲಿ ಉತ್ತಮ ತಂಡವಿದೆ. ಉತ್ತಮ ಆಟಗಾರರಿದ್ದು, ಎಲ್ಲವೂ ಸರಿಯಾಗಲಿದೆ” ಎಂದು ಗಂಗೂಲಿ ಹೇಳಿದರು.