ಮುಂಬೈ: ನಾನು ಮುಖ್ಯಮಂತ್ರಿಯ ಹುದ್ದೆಯನ್ನು ಎಂದೂ ಕೇಳಿಲ್ಲ. ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಬಿಜೆಪಿ ತನ್ನ ದೊಡ್ಡತನ ಮೆರೆದಿದೆ ಎಂದು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿದರು.
ಎನ್ ಡಿಟಿವಿ ಸಂದರ್ಶನದಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯ ಹುದ್ದೆಯ ಬೇಡಿಕೆಯನ್ನು ಎಂದೂ ಇಟ್ಟಿರಲಿಲ್ಲ. ಇದು ಬಾಳಾಸಾಹೇಬ್ ಠಾಕ್ರೆಯ ಹಿಂದುತ್ವದ ವಿಚಾರ. ಪಕ್ಷದ ಕಾರ್ಯಕರ್ತರು ಬೇಸರಗೊಂಡಿದ್ದರು. ಮಹಾ ವಿಕಾಸ ಅಘಾಡಿಯ ಬಗ್ಗೆ ಶಾಸಕರೂ ಅಸಮಾಧಾನಗೊಂಡಿದ್ದರು. ಸಮ್ಮಿಶ್ರ ಸರ್ಕಾರದ ಆಂತರಿಕ ಸಮಸ್ಯೆಗಳ ಕಾರಣದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರಲಿಲ್ಲ ಎಂದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ನಮ್ಮ ಬೆಂಬಲಕ್ಕೆ ನಿಂತಿದೆ ಎಂದು ಎಲ್ಲರೂ ಭಾವಿಸಿದ್ದರು. ಅವರೇ ಮುಖ್ಯಮಂತ್ರಿ ಹುದ್ದೆ ಪಡೆಯುತ್ತಾರೆ ಎಂದು ಜನರೂ ಭಾವಿಸಿದ್ದರು. ಆದರೆ 115 ಶಾಸಕರಿದ್ದ ಬಿಜೆಪಿಯು 50 ಶಾಸಕರಿದ್ದ ನಮಗೆ ಮುಖ್ಯಮಂತ್ರಿ ಹುದ್ದೆ ನೀಡಿದೆ ಎಂದರು.
ಇದನ್ನೂ ಓದಿ:ಕಿರೀಟ ಗೆದ್ದ ಕರುನಾಡ ಕುವರಿ: ಮಿಸ್ ಇಂಡಿಯಾ ಕಿರೀಟ ಗೆದ್ದ ಉಡುಪಿಯ ಸಿನಿ ಶೆಟ್ಟಿ
ಮೊದಲು ಸರ್ಕಾರದ ಭಾಗವಾಗುವುದಿಲ್ಲ ಎಂದು ಹೇಳಿದ್ದ ದೇವೆಂದ್ರ ಫಡ್ನವೀಸ್ ಅವರ ನಂತರ ಡಿಸಿಎಂ ಆದ ಬಗ್ಗೆ ಮಾತನಾಡಿದ ಏಕನಾಥ ಶಿಂಧೆ, ‘ನಾನು ಅವರ ಜೊತೆ ಮಾತನಾಡಿದೆ. ತನಗೆ ಪಕ್ಷ ಎಲ್ಲವನ್ನೂ ನೀಡಿದೆ. ಸಾಮಾನ್ಯ ಕಾರ್ಯಕರ್ತರಿಂದ ಸಿಎಂ ಸ್ಥಾನದವರೆಗೆ ಎಲ್ಲವನ್ನೂ ನೀಡಿದೆ. ಹೀಗಾಗಿ ಪಕ್ಷದ ನಿರ್ದೇಶನವನ್ನು ಪಾಲಿಸುವುದು ನನ್ನ ಕರ್ತವ್ಯವೆಂದರು ಎಂದು ಫಡ್ನವೀಸ್ ಹೇಳಿದರು.
ಇಂದು ಸ್ಪೀಕರ್ ಚುನಾವಣೆಯಲ್ಲಿ ನಾವು ಉತ್ತಮ ಮತಗಳಿಂದ ಗೆದ್ದಿದ್ದೇವೆ. ನಮಗೆ 166 ಮತಗಳು ಸಿಕ್ಕದರೆ, ಎದುರಾಳಿಗೆ 107 ಮತಗಳು ಸಿಕ್ಕಿದೆ. ಇರುವ ವ್ಯತ್ಯಾಸವು ದೊಡ್ಡದಾಗಿದೆ. ಈ ವ್ಯತ್ಯಾಸವು ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ ಎಂದರು.