Advertisement

ಪ್ರತ್ಯೇಕ ರಾಜ್ಯವನ್ನು ನಾನೆಂದಿಗೂ ಒಪ್ಪಲ್ಲ

06:00 AM Oct 07, 2018 | Team Udayavani |

ಬೆಂಗಳೂರು: ನಮ್ಮ ವೈಯಕ್ತಿಕ ಲಾಭಗಳಿಗಾಗಿ ನಾವು ವಿಭಜನೆ ಮಾತುಗಳನ್ನಾಡಬಹುದು. ನಮ್ಮ ಊಟದ ಪದ್ಧತಿ, ಆಡುವ ಮಾತಿನ ಶೈಲಿಯಲ್ಲಿ ಬದಲಾವಣೆಗಳೂ ಇರಬಹುದು. ಆದರೆ, ನಾವೆಲ್ಲರೂ ಮೂಲತಃ ಕನ್ನಡಿಗರೇ ಅಲ್ಲವೇ?
ನಾಡಹಬ್ಬ ದಸರಾ ಉತ್ಸವಕ್ಕೆ ಚಾಲನೆ ನೀಡಲಿರುವ ಲೇಖಕಿ ಡಾ.ಸುಧಾಮೂರ್ತಿ, ಪ್ರತ್ಯೇಕ ರಾಜ್ಯ ಕೇಳುತ್ತಿರುವವರ ಮುಂದಿಟ್ಟ ಪ್ರಶ್ನೆ ಇದು. ಪ್ರಸ್‌ ಕ್ಲಬ್‌ ಬೆಂಗಳೂರು ಶನಿವಾರ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

Advertisement

ಕರ್ನಾಟಕದ ಇತಿಹಾಸ ನೋಡಿದರೆ, ಏಳೆಂಟು ರಾಜ ಕುಟುಂಬಗಳು ನಮ್ಮನ್ನು ಆಳಿವೆ. ಆ ಪೈಕಿ ಕದಂಬರರು, ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರದ ರಾಯರ ರಾಜಧಾನಿ ಉತ್ತರ ಕರ್ನಾಟಕದಲ್ಲೇ ಇದ್ದವು. ಗಂಗರು, ಮೈಸೂರು ಸಂಸ್ಥಾನ ರಾಜಧಾನಿ ಮಾತ್ರ ದಕ್ಷಿಣ ಕರ್ನಾಟಕದಲ್ಲಿತ್ತು. ಆದರೆ, ಯಾವತ್ತೂ ಇಬ್ಭಾಗ ಅನಿಸುವುದೇ ಇಲ್ಲ. ಈ ಮಧ್ಯೆ ಪೇಶ್ವೆ, ಆದಿಲ್‌ಶಾಹಿ, ಬ್ರಿಟಿಷರೆಲ್ಲಾ ನಮ್ಮನ್ನು ಆಳಿದ್ದರಿಂದ ನಮಗೆ ಬೇರೆ ಬೇರೆ ಭಾಷೆಗಳು ಬರಬಹುದು. ನಮ್ಮ ಊಟದ ಪದ್ಧತಿಯಲ್ಲೂ ವ್ಯತ್ಯಾಸ ಇರಬಹುದು. ಆದರೆ, ನಾವೆಲ್ಲರೂ ಮೂಲತಃ ಕನ್ನಡಿಗರು ಮತ್ತು ಕರ್ನಾಟಕ ದೇಶದವರು. ಹಾಗಾಗಿ, ಪ್ರತ್ಯೇಕ ರಾಜ್ಯವನ್ನು ನಾನು ಒಪ್ಪುವುದಿಲ್ಲ ಎಂದರು.

ಅಷ್ಟಕ್ಕೂ ಮೈಸೂರು ಮಹಾರಾಜರಿಂದಾಗಿಯೇ ಇಂದು ಕರ್ನಾಟಕದಲ್ಲಿ ಕನ್ನಡ ಉಳಿದಿದೆ. ಅವರಿಲ್ಲದಿದ್ದರೆ ಕನ್ನಡನಾಡು ಹರಿದುಹಂಚಿಹೋಗುತ್ತಿತ್ತು. ಇದಕ್ಕಾಗಿ ನಾವು ಮೈಸೂರು ಅರಸರಿಗೆ ಸದಾ ಕೃತಜ್ಞರಾಗಿರಬೇಕು. ಹೀಗಾಗಿ ರಾಜಮನೆತನದ ದಸರಾದಲ್ಲಿಯೂ ಭಾಗಿಯಾಗುತ್ತೇನೆ ಎಂದು ಪುನರುತ್ಛರಿಸಿದರು.

ರಾಜಕೀಯ ಪ್ರವೇಶ ಇಲ್ಲ
ರಾಜಕೀಯ ಪ್ರವೇಶಿಸುತ್ತೀರಾ ಎಂದು ಬೆನ್ನಲ್ಲೇ ತೂರಿಬಂದ ಪ್ರಶ್ನೆಗೆ ಸುಧಾಮೂರ್ತಿ ಸಾರಾಸಗಟಾಗಿ ತಳ್ಳಿಹಾಕಿದರು. “ನನ್ನ ಆಲೋಚನೆ ಆ ದಿಕ್ಕಿನಲ್ಲಿ ಇಲ್ಲವೇ ಇಲ್ಲ. ಅದು ನನ್ನ ಕ್ಷೇತ್ರವೂ ಅಲ್ಲ. ಶಿಕ್ಷಕ ಕುಟುಂಬದಿಂದ ನಾನು ಬಂದಿದ್ದರಿಂದ ಆ ದಿಕ್ಕು ನನ್ನನ್ನು ಸೆಳೆಯಿತು. ಅಷ್ಟಕ್ಕೂ ಇನ್ಫೋಸಿಸ್‌ನಲ್ಲೇ ಸಾಕಷ್ಟು ಸಾಮಾಜಿಕ ಕೆಲಸಗಳು ನಡೆಯುತ್ತಿವೆ. ಹಾಗಾಗಿ, ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದರು.

ಸರ್ಕಾರ ಮತ್ತು ಮೈಸೂರು ರಾಜವಂಶಸ್ಥರು ಇವರಿಬ್ಬರಲ್ಲಿ ಯಾರು ಆಚರಿಸುವ ದಸರಾ ನಿಜವಾದದ್ದು ಎಂದು ಕೇಳಿದಾಗ, “ಯಾರಿಂದ ಆಚರಣೆ ಆಗಬೇಕು ಎನ್ನುವುದು ನನಗೆ ಮುಖ್ಯವಲ್ಲ; ಈ ವಿಚಾರದಲ್ಲಿ ನನಗೆ ಅಷ್ಟೊಂದು ಜ್ಞಾನವೂ ಇಲ್ಲ. ನಾನು ದಸರಾ ಹಬ್ಬದ ಸಂಭ್ರಮವನ್ನು ಅನುಭವಿಸುತ್ತೇನೆ ಅಷ್ಟೇ. ನನ್ನನ್ನು ಅತಿಥಿಯಾಗಿ ಆಹ್ವಾನಿಸಿದ್ದಾರೆ. ಅತಿಥಿಯಾಗಿ ಹೋಗಿ, ಆಚರಣೆಯಲ್ಲಿ ಸಂತೋಷದಿಂದ ಭಾಗಿಯಾಗುತ್ತೇನೆ ‘ಎಂದರು.

Advertisement

ಫ‌ಸ್ಟ್‌ ರ್‍ಯಾಂಕ್‌ ಬಂದಷ್ಟು ಖುಷಿ
ಡಾ.ಚಂದ್ರಶೇಖರ ಕಂಬಾರ, ಗಿರೀಶ್‌ ಕಾರ್ನಾಡ್‌, ಬರಗೂರು ರಾಮಚಂದ್ರಪ್ಪ, ನಿಸಾರ್‌ ಅಹಮ್ಮದ್‌ ಅವರಂತಹ ದಿಗ್ಗಜರು ದಸರಾ ಉತ್ಸವ ಉದ್ಘಾಟಿಸಿದ್ದಾರೆ. ಈ ಬಾರಿ ನನಗೆ ಆ ಸೌಭಾಗ್ಯ ಒದಗಿ ಬಂದಿರುವುದು ತುಂಬಾ ಖುಷಿ ತಂದಿದೆ. ಪರೀಕ್ಷೆ ಬರೆದು ಮೊದಲ ರ್‍ಯಾಂಕ್‌ ಬಂದ ವಿದ್ಯಾರ್ಥಿಗೆ ಆಗುವಷ್ಟು ಸಂತೋಷ ಆಗುತ್ತಿದೆ. ಘಟಿಕೋತ್ಸವದಲ್ಲಿ ಭಾಷಣ ಹಾಗೂ ದಸರಾ ಉದ್ಘಾಟನೆ ಮಾಡುವುದು ರಾಜ್ಯದಲ್ಲಿ ಸಿಗುವ ಅತಿದೊಡ್ಡ ಗೌರವ. ಅದು ನನಗೆ ಸಿಕ್ಕಿದೆ ಎಂದು ಸಂತಸ ಹಂಚಿಕೊಂಡರು.

ದಸರಾ ನಮ್ಮ ಸಂಸ್ಕೃತಿಯ ಪ್ರತೀಕ. ಕೇರಳದಲ್ಲಿ ಓಣಂ, ಮಹಾರಾಷ್ಟ್ರ ಗಣಪತಿ ಉತ್ಸವ, ತಮಿಳುನಾಡಿನಲ್ಲಿ ಪೊಂಗಲ್‌ನಂತೆ ನಮ್ಮಲ್ಲಿ ದಸರಾ ಹಬ್ಬ. ಹಾಗಾಗಿ, ಇದನ್ನು ನಾಡಹಬ್ಬ ಎಂದು ಕರೆಯಲಾಗುತ್ತದೆ. ನನ್ನ ಪಾಲಿಗೆ ಸವಿನೆನಪುಗಳ ಸುಗ್ಗಿ ದಸರಾ. ಮೈಸೂರು ನನಗೆ ಗಂಡನ ಮನೆ. 1958ರಲ್ಲಿ ಮೊದಲ ಬಾರಿ ಮೈಸೂರಿಗೆ ಅಪ್ಪ ಅಮ್ಮನೊಂದಿಗೆ ಭೇಟಿ ನೀಡಿದ್ದೆ. ಆಗ ಮಹಾರಾಜರು ಜಂಬೂಸವಾರಿ ಮಾಡುತ್ತಿದ್ದರು. ಅಂದು ನೋಡಿದ ಗಂಡಬೇರುಂಡ ಚಿತ್ರ, ವಸ್ತು ಪ್ರದರ್ಶನ, ಅರಮನೆಯ ದೀಪದ ಅಲಂಕಾರ, ಬನ್ನಿ ಮಂಟಪ, ಕೆಆರ್‌ಎಸ್‌ ಬೃಂದಾವನ ಈಗಲೂ ನೆನಪಿದೆ ಎಂದು ಮೆಲುಕುಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next