Advertisement

I.N.D.I.A.ಗೆ ಈಗ ಸನಾತನ ಸಂಕಟ; ಉದಯನಿಧಿ ಹೇಳಿಕೆಗೆ ಕೈನಲ್ಲೇ ಭಿನ್ನ ಮಾತು

11:56 PM Sep 04, 2023 | Team Udayavani |

ಹೊಸದಿಲ್ಲಿ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪುತ್ರ-ಸಚಿವ ಉದಯನಿಧಿ ಸ್ಟಾಲಿನ್‌ರ “ಸನಾತನ ಧರ್ಮ ನಾಶ ಮಾಡಬೇಕು’ ಎಂಬ ಹೇಳಿಕೆ ವಿಪಕ್ಷಗಳ ಒಕ್ಕೂಟ ಐ.ಎನ್‌.ಡಿ.ಐ.ಎಗೆ ಸಂಕಟವನ್ನು ತಂದೊಡ್ಡಿದೆ.

Advertisement

ವರ್ಷಾಂತ್ಯದಲ್ಲಿ ನಡೆಯಲಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ, ಮುಂದಿನ ಲೋಕಸಭೆ ಚುನಾವಣೆ ವೇಳೆ ಹಿಂದಿ ಭಾಷಿಕ ರಾಜ್ಯಗಳಲ್ಲಿ ಪ್ರತಿಕೂಲ ಪರಿಣಾಮ ತಂದೊಡ್ಡಬಹುದು ಎಂಬ ಆತಂಕ ಕಾಂಗ್ರೆಸ್‌ ವಲಯದಲ್ಲಿಯೇ ಉಂಟಾಗಿದೆ. ಜತೆಗೆ ಮೈತ್ರಿಕೂಟದಲ್ಲಿಯೂ ಆಕ್ಷೇಪ ಏಳಲು ಆರಂಭವಾಗಿದೆ. ಹೊಸದಿಲ್ಲಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು ಗೋಪಾಲ್‌ “ಸರ್ವ ಧರ್ಮಗಳೂ ಸಮಾನ ಎನ್ನುವುದು ನಮ್ಮ ಪಕ್ಷದ ತತ್ತ್ವ . ಎಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸ್ವಾತಂತ್ರ್ಯ ಇದೆ’ ಎಂದು ಹೇಳಿದ್ದಾರೆ. ಆದರೆ ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್‌ನಾಥ್‌ ಉದಯನಿಧಿ ಸ್ಟಾಲಿನ್‌ ಮಾತುಗಳಿಗೆ ಬೆಂಬಲ ಇಲ್ಲ. ಅದು ಅವರ ವೈಯ್ಯಕ್ತಿಕ ಅಭಿಪ್ರಾಯ ಇರಬಹುದು ಎಂದು ಹೇಳಿದ್ದಾರೆ. ಉದ್ಧವ್‌ ಠಾಕ್ರೆ ಬಣದ ಶಿವಸೇನೆ ನಾಯಕಿ ಉದಯನಿಧಿ ಮಾತುಗಳಿಗೆ ಬೆಂಬಲ ನೀಡಿದ್ದಾರೆ. ಅದುವೇ ದೇಶಕ್ಕೆ ತೊಡಕಾಗಿದೆ ಎಂದಿದ್ದಾರೆ.

ಆದರೆ ತಮಿಳುನಾಡಿನಲ್ಲಿ ಕಾಂಗ್ರೆಸ್‌ಗೆ ಡಿಎಂಕೆ ಬೆಂಬಲ ಬೇಕೇ ಬೇಕು. ಹೀಗಾಗಿ ಉದಯನಿಧಿ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಲೂ, ಬೆಂಬಲ ನೀಡಲೂ ಆಗುತ್ತಿಲ್ಲ. ಬಿಜೆಪಿಯ ಪ್ರಬಲ ಹಿಂದುತ್ವದ ನಡುವೆ ಹಿಂದಿ ಭಾಷಿಕ ರಾಜ್ಯಗಳಲ್ಲಿ ಮೃದು ಹಿಂದುತ್ವ ಎಂಬ ನಿಲುವನ್ನೂ ಅನುಸರಿಸುವ ಅನಿವಾ ರ್ಯತೆಗೂ ಕಾಂಗ್ರೆಸ್‌ಗೆ ಇದೆ.

ಮತ್ತೆ ಮತ್ತೆ ಹೇಳುವೆ

ಇದೇ ವೇಳೆ ನ್ಯೂಸ್‌ 18 ಸುದ್ದಿವಾಹಿನಿ ಜತೆ ಮಾತನಾಡಿದ ತಮಿಳು ನಾಡು ಸಚಿವ ಉದಯನಿಧಿ ಸ್ಟಾಲಿನ್‌ “ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ನರಹತ್ಯೆ ಎಂಬ ವಿಚಾರವನ್ನು ಹೇಳಿಯೇ ಇಲ್ಲ. ಬಿಜೆಪಿಯವರು ಸುಳ್ಳು ಸುದ್ದಿ ಹರಡುವಲ್ಲಿ ಸಿದ್ಧಹಸ್ತರು. ಎಲ್ಲ ಅಂಶಗಳನ್ನು ಕಾನೂನಿನ ಮೂಲಕ ಎದುರಿಸುತ್ತೇನೆ’ ಎಂದಿದ್ದಾರೆ.

Advertisement

ಸಂಬಂಧವೇ ಇಲ್ಲ: ಟಿಎಂಸಿ

ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೂ, ವಿಪಕ್ಷಗಳ ಒಕ್ಕೂಟ ಐ.ಎನ್‌.ಡಿ.ಐ.ಎ.ಗೂ ಸಂಬಂಧವೇ ಇಲ್ಲ. ಹೀಗೆಂದು ತೃಣಮೂಲ ಕಾಂಗ್ರೆಸ್‌ ನಾಯಕಿ, ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ತಮಿಳುನಾಡಿನ ಜನರ ಬಗ್ಗೆ ಗೌರವ ಇದೆ. ಧಾರ್ಮಿಕ ವಿಚಾರಗಳು ಎಂದರೆ ಅದರ ಬಗ್ಗೆ ಗೌರವ ನೀಡಲೇಬೇಕಾಗುತ್ತದೆ. ಜನರ ಭಾವನೆಗಳಿಗೆ ಧಕ್ಕೆಯಾಗುವ ಅಂಶಗಳನ್ನು ಮಾತನಾಡಬಾರದು. ಉದಯನಿಧಿ ಇನ್ನೂ ಚಿಕ್ಕವ. ಅವರು ಯಾಕೆ ಇಂಥ ಮಾತಾಡಿದ್ದಾರೋ ಗೊತ್ತಿಲ್ಲ’ ಎಂದು ಹೇಳಿದ್ದಾರೆ.

ಎನ್‌ಡಿಎ ನಾಯಕರ ಆಕ್ರೋಶ
ಇನ್ನೊಂದೆಡೆ ರಾಜಸ್ಥಾನದ ಜೈಸಲ್ಮೇರ್‌ ಸಮೀಪ ರ‍್ಯಾಲಿಯಲ್ಲಿ ಮಾತನಾಡಿದ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಉದಯನಿಧಿ ಸ್ಟಾಲಿನ್‌ ಹೇಳಿಕೆಗೆ ಕಾಂಗ್ರೆಸ್‌ ನಾಯಕರಾದ ಸೋನಿಯಾ, ರಾಹುಲ್‌, ಖರ್ಗೆ, ಅಶೋಕ್‌ ಗೆಹ್ಲೋ ಟ್‌ ಮೌನವಾಗಿರುವುದನ್ನು ಪ್ರಶ್ನಿಸಿದರು. ಹಿಂದುಗಳ ಧಾರ್ಮಿಕರ ಭಾವನೆಗೆ ಧಕ್ಕೆ ಉಂಟಾಗಿದ್ದರೂ ಅವರ ಮೌನವೇ ಪ್ರಶ್ನಾರ್ಹ ಎಂದರು. ಡಿಎಂಕೆ ನಾಯಕನ ಹೇಳಿಕೆಯ ಬಗ್ಗೆ ಅವರು ಪ್ರಶ್ನೆ ಮಾಡಬೇಕಿತ್ತು ಎಂದರು. ಬಿಹಾರದ ನಾಯಕರಾಗಿರುವ ಚಿರಾಗ್‌ ಪಾಸ್ವಾನ್‌, ಸುಶೀಲ್‌ ಕುಮಾರ್‌ ಮೋದಿ, ಗೋವಾ ಸಿಎಂ ಪ್ರಮೋದ್‌ ಸಾವಂತ್‌ ಸೇರಿದಂತೆ ಪ್ರಮುಖರು ಖಂಡಿಸಿದ್ದಾರೆ.

ಮೊದಲ ಕೇಸು ದಾಖಲು
ಬಿಹಾರದ ಮುಜಾಫ‌ರ್‌ನಗರ ಜಿಲ್ಲೆಯಲ್ಲಿ ವಕೀಲ ಸುಧೀರ್‌ ಕುಮಾರ್‌ ಓಝಾ ಅವರು ಉದಯನಿಧಿ ಸ್ಟಾಲಿನ್‌ ವಿರುದ್ಧ ಚೀಫ್ ಜ್ಯುಡಿಶಿಯಲ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ಕೇಸು ದಾಖಲಿಸಿದ್ದಾರೆ. ಹಿಂದುಗಳ ಧಾರ್ಮಿಕ ಭಾವನೆಗೆ ಅವರ ಮಾತುಗಳಿಂದ ಧಕ್ಕೆಯಾಗಿದೆ ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಕಾಶ್‌ ಮತ್ತೆ ಟ್ವೀಟ್‌
ಚಿತ್ರನಟ ಪ್ರಕಾಶ್‌ ರಾಜ್‌ ಮತ್ತೆ ಟ್ವೀಟ್‌ ಮಾಡಿದ್ದಾರೆ. ಪ್ರಧಾನಿ ಭೇಟಿಗಾಗಿ ತಮಿಳುನಾಡಿನ ಸಂತರು ತೆರಳಿದ್ದ 2 ಫೋಟೋಗಳನ್ನು ಅಪ್‌ಲೋಡ್‌ ಮಾಡಿ “ಬ್ಯಾಕ್‌ ಟು ದ ಫ್ಯೂಚರ್‌… ಎ ತನಾತನಿ ಪಾರ್ಲಿಮೆಂಟ್‌… ಡಿಯರ್‌ ಸಿಟಿಜನ್ಸ್‌ ಆರ್‌ ಯು ಓಕೆ ವಿದ್‌ ದಿಸ್‌? ಜಸ್ಟ್‌ ಆಸ್ಕಿಂಗ್‌’ ಎಂದು ಬರೆದುಕೊಂಡಿದ್ದಾರೆ.

ದೇಶದಲ್ಲಿ ಸಾವಿರಾರು ವರ್ಷಗಳ ಕಾಲ ಇದ್ದ ಇಸ್ಲಾಮಿಕ್‌ ಆಡಳಿತ ಮತ್ತು ಬ್ರಿಟಿಷರ ಅವಧಿಯಲ್ಲಿಯೇ ಸನಾತನ ಧರ್ಮ ನಾಶ ಮಾಡಲು ಸಾಧ್ಯವಾಗಲಿಲ್ಲ. ಇನ್ನು ಇವರಿಂದ ಹೇಗೆ ಸಾಧ್ಯ? ಇತ್ತೀಚಿನ ಐ.ಎನ್‌.ಡಿ.ಐ.ಎ.ನ ಮುಂಬಯಿ ಸಭೆಯಲ್ಲಿ ಹೇಳಿಕೆ ಬಗ್ಗೆ ನಿರ್ಧಾರವಾಗಿತ್ತೇ?
ರವಿಶಂಕರ ಪ್ರಸಾದ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next