ಪಟ್ನಾ: ಐ.ಎನ್.ಡಿ.ಐ.ಎ. ಒಕ್ಕೂಟದಿಂದ ಪ್ರಧಾನಮಂತ್ರಿ ಹುದ್ದೆಗೆ ಯಾರನ್ನು ಬೇಕಾದರೂ ಆಯ್ಕೆ ಮಾಡಲಿ. ನನಗೇನೂ ಬೇಸರವಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ವಿರುದ್ಧ ಜಯಗಳಿಸುವುದೇ ಪ್ರಧಾನ ಆದ್ಯತೆ”
ಹೀಗೆಂದು ಜೆಡಿಯು ನಾಯಕ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದಿದ್ದ ಇಂಡಿಯಾ ಒಕ್ಕೂಟದ ಸಭೆಯಲ್ಲಿ ತಮಗೆ ಅಸಮಾಧಾನವಾಗಿದೆ ಎಂಬ ವರದಿಗಳನ್ನು ಅವರು ಖಂಡತುಂಡವಾಗಿ ತಿರಸ್ಕರಿಸಿದ್ದಾರೆ.
“ನನಗೆ ಯಾರ ವಿರುದ್ಧ ಕೋಪವೂ ಇಲ್ಲ ಮತ್ತು ಯಾವುದರ ವಿರುದ್ಧವೂ ಅಸಂತೃಪ್ತಿಯೂ ಇಲ್ಲ. ಮಲ್ಲಿ ಕಾರ್ಜುನ ಖರ್ಗೆ ಅವರನ್ನು ಐ.ಎನ್.ಡಿ.ಐ.ಎ. ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿ ಸಲು ನನಗೆ ಯಾವುದೇ ತಕರಾರು ಇಲ್ಲ. ಜತೆಗೆ ಯಾರನ್ನು ಬೇಕಾದರೂ ಪ್ರಧಾನಮಂತ್ರಿ ಹುದ್ದೆಗೆ ಆಯ್ಕೆ ಮಾಡಬಹುದು” ಎಂದಿದ್ದಾರೆ.ಸೀಟು ಹಂಚಿಕೆ ಶೀಘ್ರವಾಗಲಿ ಎಂದಿದ್ದೆ: ಶೀಘ್ರವಾಗಿ ಸೀಟು ಹಂಚಿಕೆ ಕುರಿತು ನಿರ್ಧಾರ ತಾಳುವಂತೆ ಸಭೆಯಲ್ಲಿ ನಾನು ತಿಳಿಸಿದ್ದೇನೆ. ಸೀಟು ಹಂಚಿಕೆ ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆ. ಒಕ್ಕೂಟದ ಸದಸ್ಯರೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ನಿತೀಶ್ ಕುಮಾರ್ ಹೇಳಿದರು.
ಕೆಲವು ದಿನಗಳ ಹಿಂದೆ ನಡೆದ ಐ.ಎನ್.ಡಿ.ಐ.ಎ. ಒಕ್ಕೂಟದ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಅವರನ್ನು ವಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವಂತೆ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಪ್ರಸ್ತಾವ ಮುಂದಿಟ್ಟರು. ಇದಕ್ಕೆ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಬೆಂಬಲ ಸೂಚಿಸಿದ್ದರು.