ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡಬಾರದಿತ್ತು, ನನ್ನಿಂದ ದೊಡ್ಡ ತಪ್ಪಾಗಿದೆ ಎಂದು
ಉಚ್ಛಾಟಿತ ಕೆಪಿಸಿಸಿ ಮಾಧ್ಯಮ ಸಂಯೋಜಕ ಎಂ.ಎ. ಸಲೀಂ ಅವರು ಕಣ್ಣೀರಿಟ್ಟ ಪ್ರಸಂಗ ಗುರುವಾರ ನಡೆದಿದೆ.
‘ನಾನು ಮಾತುಗಳನ್ನಾಡಿ ತಪ್ಪು ಮಾಡಿದ್ದೇನೆ,ಡಿ.ಕೆ ಶಿವಕುಮಾರ್ ಸಾಹೇಬರು ಏನೇ ಶಿಕ್ಷೆ ಕೊಡಲಿ. ಅವರು ನನ್ನನ್ನ ಬೇಕಾದರೆ ಸಾಯಿಸಲಿ ಅದಕ್ಕೂ ಸಿದ್ಧನಿದ್ದೇನೆ’ ಎಂದರು.
‘ಡಿ.ಕೆ ಶಿವಕುಮಾರ್ ಸಾಹೇಬರನ್ನ ಭೇಟಿ ಮಾಡಿಲ್ಲ, ಯಾವ ಮುಖ ಇಟ್ಟುಕೊಂಡು ಅವರನ್ನು ಭೇಟಿ ಮಾಡಲಿ. ಸಾಹೇಬರು ನನ್ನ ಜೊತೆ ಮಾತನಾಡಿಲ್ಲ’ ಎಂದರು.
‘ನನ್ನಿಂದ ಪಕ್ಷಕ್ಕೆ, ಡಿ.ಕೆ ಶಿವಕುಮಾರ್ ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆ. ಇಷ್ಟು ವರ್ಷಗಳ ನನ್ನ ಸಾಧನೆ ಎಲ್ಲಾ ಮಣ್ಣು ಪಾಲಾಗಿ ಹೋಗಿದೆ. ಕಾಂಗ್ರೆಸ್ ಪಕ್ಷ ನನ್ನನ್ನ ಆರು ವರ್ಷಗಳ ಕಾಲ ಉಚ್ಛಾಟಿಸಿದೆ, ಆದರೂ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿಕೊಂಡು ಹೋಗುತ್ತೇನೆ’ ಎಂದರು.
‘ತಪ್ಪು ಮಾಡಿದವರಿಗೆ ದೇವರಿದ್ದಾನೆ ಎಂಬ ಡಿಕೆಶಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿ.ಕೆ ಶಿವಕುಮಾರ್ ಅವರೇ ನನಗೆ ದೇವರು, ನಾನು ತಪ್ಪು ಮಾಡಿದ್ದೇನೆ ನಾನು ಡಿ.ಕೆ ಶಿವಕುಮಾರ್ ಅವರ ಪಾದದ ದೂಳಿಗೆ ಸಮನಲ್ಲ. ನನಗೆ ಡಿಕೆ ಶಿವಕುಮಾರ್ ಅವರು ದೇವರ ಸಮಾನ’ ಎಂದು ಕಣ್ಣೀರಿಟ್ಟಿದ್ದಾರೆ.
ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮತ್ತುಸಲೀಂ ನಡುವೆ ಇತ್ತೀಚೆಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಆಪ್ತ ಸಂಭಾಷಣೆ ಕಾಂಗ್ರೆಸ್ ವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿ ತ್ತು. ಆಪ್ತ ಸಂಭಾಷಣೆಯಲ್ಲಿ ಬಳಕೆಯಾದ “ಕಲೆಕ್ಷನ್ ಗಿರಾಕಿಗಳು’ ಪದ ಸಹಿತ ಉಗ್ರಪ್ಪ ಮತ್ತು ಸಲೀಂ ನಡುವಣ ಸಂಭಾಷಣೆ ಬುಧ ವಾರ ಇಡೀ ದಿನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.