ಕೆಂಗೇರಿ: “ನಾನೊಬ್ಬ ಚಿತ್ರನಟನಾಗಿ ಇಲ್ಲಿಗೆ ಬಂದಿಲ್ಲ. ರಾಜರಾಜೇಶ್ವರಿ ನಗರದ ನಾಗರಿಕನಾಗಿ ನಿಮ್ಮೊಂದಿಗೆ ಬೆರೆಯುವುದು ನನ್ನ ಕರ್ತವ್ಯ. ಇಲ್ಲಿ ಸ್ವತ್ಛ, ಸುಂದರ ಪರಿಸರ ನಿರ್ಮಾಣಕ್ಕಾಗಿ ನಾನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತೇನೆ,’ ಎಂದು ಚಿತ್ರ ನಟ, ಗೋಲ್ಡನ್ ಸ್ಟಾರ್ ಗಣೇಶ್ ತಿಳಿಸಿದರು.
ರಾಜರಾಜೇಶ್ವರಿ ನಗರದ ಹಲಗೆವಡೇರಹಳ್ಳಿ ಕೆರೆ ಆವರಣದಲ್ಲಿ ಆರ್.ಆರ್.ನಗರ ಐ ಕೇರ್, ಯುನೈಟೆಡ್ ಬೆಂಗಳೂರು, ರಾಜರಾಜೇಶ್ವರಿ ನಗರ ಪರಿಸರ ಹಿತ ರಕ್ಷಣಾ ವೇದಿಕೆ ಹಾಗೂ ಬಿಇಟಿ ಶಾಲೆ ಸಂಯುಕ್ತ ಆಶ್ರಯದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕೆರೆ ಸ್ವತ್ಛತಾ ಅಂದೋಲನ ಮತ್ತು ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ನಾನು ಹಳ್ಳಿಯಲ್ಲಿಯೇ ಹುಟ್ಟಿ ಬೆಳದಿದ್ದು ಹಳ್ಳಿಯ ಕೆರೆಯಲ್ಲಿಯೆ ಈಜಾಡಿ ಸಂತೊಷ ಪಟ್ಟಿದ್ದೇನೆ. ಈಗ ನಮ್ಮ ಹಳ್ಳಿಯ ಪರಿಸರವೇ ಬದಲಾಗಿ ನಮ್ಮ ಕೆರೆ ಕುಂಟೆಗಳು ಮಾಯವಾಗಿವೆ. ಹಿರಿಯರು ನಮಗಾಗಿ ಉತ್ತಮ ಪರಿಸರ ನಿರ್ಮಾಣ ಮಾಡಿ ಹೋಗಿದ್ದರು.
ಆದರೆ ಇಂದಿನ ಪರಿಸ್ಥಿತಿಯಲ್ಲಿ ಕೆರೆ ಕುಂಟೆ ರಾಜಕಾಲುವೆಗಳು ಸ್ವಾರ್ಥಿಗಳು, ಭೂ ಮಾಫಿಯಾದವರ ದುರಾಸೆಯಿಂದಾಗಿ ಒತ್ತುವರಿಯಾಗಿವೆ. ಹಾಗೇ ನಗರದ ಒಳಚರಂಡಿ ನೀರು ಕೆರೆಗೆ ಸೇರುವುದರ ಪರಿಣಾಮ, ಕೆರೆ ಸಂಪೂರ್ಣವಾಗಿ ಕಲುಷಿತಗೊಂಡು ದುರ್ವಾಸನೆ ಬೀರುತ್ತಿವೆ. ಅವುಗಳನ್ನೆಲ್ಲ ಸರಿಪಡಿಸುವ ದಿಕ್ಕಿನತ್ತ ನಮ್ಮೆಲ್ಲರ ಅಲೋಚನೆಗಳು ಸಾಗಬೇಕಾಗಿದೆ ಎಂದರು.
ಬಿಬಿಎಂಪಿ ಸದಸ್ಯೆ ನಳಿನಿ ಮಂಜು ಮಾತನಾಡಿ, ಕೆರೆ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವಂತೆ ಈಗಾಗಲೇ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು ಅನುದಾನ ದೊರೆತ ಕಊಡಲೆ ಕೆರೆಯನ್ನು ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿಪಡಿಸಿ ನಾಗರೀಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಲ್ಪಾ ಗಣೇಶ್, ರಾಜರಾಜೇಶ್ವರಿ ನಗರ ಮಾಜಿ ಕಾರ್ಪೊರೇಟರ್ ಜಿ.ಎಚ್.ರಾಮಚಂದ್ರ, ಬಿಜೆಪಿ ವಕ್ತಾರರಾದ ಮಳವಿಕಾ, ಯುನೆಟೆಡ್ ಬೆಂಗಳೂರು ಸಂಸ್ಥೆಯ ಶ್ರೀಧರ್, ಪರಿಸರ ಹಿತರಕ್ಷಣಾವೇದಿಕೆಯ ಮಲ್ಲಿಕಾರ್ಜುನ್, ನರಸಿಂಹ ಪ್ರಸಾದ್, ಶಿವನಂಜಯ್ಯ, ಪೋ›ನಾರಾಯಣಸ್ವಾಮಿ, ಶಾಲಾ ಆಡಳಿತ ಮಂಡಳಿಯ ಸುಮಾ ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಶಾಲಾ ವಿದ್ಯಾರ್ಥಿಗಳು, ಸ್ವಯಂ ಸೇವಕರು ಹಾಗೂ ನಾಗರಿಕರು ಸುಮಾರು 500 ಗಿಡಗಳನ್ನ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.