ಸಾಮಾನ್ಯವಾಗಿ ಸಿನಿಮಾ ಮಂದಿ “ನಮ್ಮ ಸಿನಿಮಾದ ಕಥೆಯೇ ಹೀರೋ’ ಅಂತಾರೆ. ಆದರೆ, ಕಥೆಯೇ ವಿಲನ್ ಎನ್ನುವವರು ಮಾತ್ರ ಕಡಿಮೆ. ಇಲ್ಲೊಂದು ಚಿತ್ರತಂಡ ಮಾತ್ರ ನಮ್ಮ ಸಿನಿಮಾದ ಕಥೆಯೇ ವಿಲನ್ ಎಂದು ರಾಜಾರೋಷವಾಗಿ ಹೇಳಿಕೊಂಡಿದೆ. ಹೀಗೆ ಹೇಳಿಕೊಂಡು ತೆರೆಗೆ ಸಿದ್ಧವಾಗಿರುವ ಚಿತ್ರ “ನಾನು ಲವರ್ ಆಫ್ ಜಾನು’. ಚಿತ್ರ ಈ ವಾರ ತೆರೆಕಾಣುತ್ತಿದೆ. ಹೆಸರಿಗೆ ತಕ್ಕಂತೆ ಇದು ಔಟ್ ಅಂಡ್ ಔಟ್ ಲವ್‌ಸ್ಟೋರಿ.
ಎಲ್ಲಾ ಓಕೆ, ಚಿತ್ರದ ಕಥೆಯೇ ವಿಲನ್ ಹೇಗೆ ಎಂದು ನೀವು ಕೇಳಿದರೆ ಸದ್ಯಕ್ಕೆ ಅದಕ್ಕೆ ಉತ್ತರವಿಲ್ಲ. ಅದೇನೆಂಬುದನ್ನು ನೀವು ತೆರೆಮೇಲೆಯೇ ನೋಡಬೇಕು. ಈ ಚಿತ್ರವನ್ನು ಜಿ.ಸುರೇಶ್ ಪ್ರಕಾರ, “ಇದೊಂದು ಪ್ರೀತಿ ಕುರಿತಾದ ಚಿತ್ರ. 16 ರಿಂದ 60 ವರ್ಷದವರು ಕುಳಿತು ನೋಡಬಹುದಾದ ಅಪ್ಪಟ ಭಾವನಾತ್ಮಕ ಸಂಬಂಧಗಳ ಸುತ್ತ ಸಾಗುವ ಚಿತ್ರ. ಎಲ್ಲಾ ಚಿತ್ರಗಳಲ್ಲೂ ಪ್ರೀತಿ ಕಥೆಗಳು ಸಹಜ.
ಆದರೆ, ಇಲ್ಲೂ ಪ್ರೀತಿಯ ಕಥೆ ಇದ್ದರೂ, ಅದಕ್ಕೊಂದು ಹೊಸ ಸ್ಪರ್ಶ ಕೊಡಲಾಗಿದೆ. ಈಗಿನ ಟ್ರೆಂಡ್‌ಗೆ ತಕ್ಕಂತೆ ಕಥೆ ಹೆಣೆಯಲಾಗಿದೆ’ ಎನ್ನುತ್ತಾರೆ ನಿರ್ದೇಶಕರು. ಎಲ್ಲಾ ಓಕೆ, ಚಿತ್ರದ ಕಥೆಯೇನು ಎಂದು ನೀವು ಕೇಳಬಹುದು. “ಕ್ರಾಂತಿ ಮತ್ತು ಪ್ರೀತಿ’ ಎನ್ನುತ್ತಾರೆ ನಿರ್ದೇಶಕ ಸುರೇಶ್. ಪ್ರೀತಿ ಇದೆ ಅಂದಮೇಲೆ, ಅಲ್ಲಿ ದ್ವೇಷವೂ ಇರುತ್ತದೆ.
ಇಲ್ಲೂ ಅದೆಲ್ಲಾ ಇದ್ದರೂ, ಸಮಾಜದೊಳಗಿನ ಕ್ರಾಂತಿ ನಡುವೆ ಪ್ರೀತಿ ಗೆಲ್ಲುತ್ತಾ ಅನ್ನುವುದನ್ನು ಸೂಕ್ಷ್ಮವಾಗಿ ಹೇಳಿದ್ದಾರಂತೆ ನಿರ್ದೇಶಕರು. ಓದಿ ತನ್ನದೇ ವ್ಯಾಪಾರದಲ್ಲಿ ತೊಡಗಿಸಿಕೊಳ್ಳಬೇಕೆಂಬ ಆಸೆ ಇರುವ ಪಾತ್ರದಲ್ಲಿ ನಾಯಕ ವಿಶಾಲ್ ಕಾಣಿಸಿಕೊಂಡರೆ, ನಾಯಕಿ ಮಂಜುಳಾ ಗಂಗಪ್ಪಾ ಇಲ್ಲಿ ನಾಯಕನ ಎದುರು ಮನೆಯ ಹುಡುಗಿಯಾಗಿ ನಟಿಸಿದ್ದಾರೆ.
ಚಿತ್ರದಲ್ಲಿ ಚಿಕ್ಕಣ್ಣ, ಸುಚೇಂದ್ರ ಪ್ರಸಾದ್, ರಾಕ್‌ಲೈನ್ ವೆಂಕಟೇಶ್, ಹರಿಣಿ ಸೇರಿದಂತೆ ಇತರೆ ಕಲಾವಿದರು ನಟಿಸಿದ್ದಾರೆ. ಶ್ರೀನಾಥ್ ವಿಜಿ ಸಂಗೀತ ನೀಡಿದ್ದಾರೆ. ಶಿವು ಕ್ಯಾಮೆರಾ ಹಿಡಿದರೆ, ರಾಜ್‌ಶಿವ ಸಂಕಲನ ಮಾಡಿದ್ದಾರೆ. ಕಲಾತಪಸ್ವಿ ಬ್ಯಾನರ್‌ನಲ್ಲಿ ಐವರು ಗೆಳೆಯರು ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಬೆಂಗಳೂರು, ಮಂಗಳೂರು, ತುಮಕೂರು ಮತ್ತು ಚಿಕ್ಕಮಗಳೂರು ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.